ವಿದ್ಯಾರ್ಥಿಗಳು ಮುಂದೆ ಯಾವುದೇ ಕ್ಷೇತ್ರದಲ್ಲಾದರೂ ಕೆಲಸ ಮಾಡಿ, ಏನಾದರೂ ಆಗಿ ಮೊದಲು ದೇಶ ಭಕ್ತರಾಗಿರಿ, ದೇಶಕ್ಕಾಗಿ ದುಡಿಯುತ್ತಿದ್ದೇನೆ ಎಂಬ ಭಾವನೆ ಇರಲಿ, ದೇಶದ ಪ್ರಗತಿಗೆ ನಿಮ್ಮ ಸಾರ್ಥಕ ಶ್ರಮ ಇರಲಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ, ತುಮಕೂರುವಿದ್ಯಾರ್ಥಿಗಳು ಮುಂದೆ ಯಾವುದೇ ಕ್ಷೇತ್ರದಲ್ಲಾದರೂ ಕೆಲಸ ಮಾಡಿ, ಏನಾದರೂ ಆಗಿ ಮೊದಲು ದೇಶ ಭಕ್ತರಾಗಿರಿ, ದೇಶಕ್ಕಾಗಿ ದುಡಿಯುತ್ತಿದ್ದೇನೆ ಎಂಬ ಭಾವನೆ ಇರಲಿ, ದೇಶದ ಪ್ರಗತಿಗೆ ನಿಮ್ಮ ಸಾರ್ಥಕ ಶ್ರಮ ಇರಲಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು. ಶನಿವಾರ ನಗರದ ವಿದ್ಯಾನಿಧಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ 125 ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರು ದೇಶದ ಅಖಂಡತೆ, ಏಕತೆಗಾಗಿ ಹೋರಾಟದ ಕಿಚ್ಚು ಹಚ್ಚಿದರು. ನೆಹರೂ ಪ್ರಧಾನಿಯಾಗಿದ್ದ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರವನ್ನು ಬೇರ್ಪಡಿಸಿ ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ, ಎರಡು ಪ್ರಧಾನಿ ವ್ಯವಸ್ಥೆ ಧಿಕ್ಕರಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದ ಅಖಂಡತೆಗೆ ಹೋರಾಟ ರೂಪಿಸಿದರು ಎಂದು ಹೇಳಿದರು.ದೇಶ ಭಕ್ತಿ ಇಲ್ಲದ ನಾಯಕರು ಅಧಿಕಾರಕ್ಕೆ ಬಂದಾಗ ದೇಶ ಹರಿದುಹಂಚಿ ಹೋಗುತ್ತದೆ. ಆದರೆ ದೇಶಭಕ್ತಿಯ ನಾಯಕರ ಆಡಳಿತದಲ್ಲಿ ದೇಶದ ನೆಲವನ್ನು ಕಾಪಾಡುತ್ತಾ ದೇಶ ರಕ್ಷಣೆಯಾಗುತ್ತದೆ. ಶ್ಯಾಮ ಪ್ರಸಾದ್ ಮುಖರ್ಜಿಯವರ ದೇಶದ ಅಖಂಡತೆ, ಏಕತೆಯ ತತ್ವಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ದೇಶದ ಭದ್ರತೆ ಕಾಪಾಡುತ್ತಿದೆ. ದೇಶದ ಆಡಳಿತ ಭಂಗ ಮಾಡುವ ಉಗ್ರರ ಹುಟ್ಟಡಗಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ ಎಂದರು.ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ, ತ್ಯಾಗ ಮಾಡಿದ ಮಹನೀಯರು ಯಾರು, ಅವರ ಹೋರಾಟ, ತ್ಯಾಗವೇನು ಎಂಬುದನ್ನು ಯುವಜನರು ತಿಳಿಯಬೇಕು, ಇತಿಹಾಸ ತಿಳಿದವರು ಮಾತ್ರವೇ ಇತಿಹಾಸ ಸೃಷ್ಟಿಸಬಲ್ಲರು. ದೇಶದ ಅಖಂಡತೆ, ಏಕತೆ, ದೇಶ ಮೊದಲು ಆಮೇಲೆ ಅಧಿಕಾರ ಎಂಬ ತತ್ವ ಅನುಸರಿಸಿಕೊಂಡು ಬಂದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರು ಭಾರತೀಯ ಜನಸಂಘ ಸಂಸ್ಥಾಪಕರಲ್ಲಿ ಒಬ್ಬರು, ನಂತರ ಜನಸಂಘ ಭಾರತೀಯ ಜನತಾಪಕ್ಷವಾಗಿ, ದೇಶ ಮೊದಲು ಎಂಬ ಮುಖರ್ಜಿಯವರ ತತ್ವದಡಿಯಲ್ಲಿಯೇ ಬೆಳೆಯುತ್ತಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಶ್ಯಾಮ ಪ್ರಸಾದ್ ಮುಖರ್ಜಿಯವರು ಕೇವಲ ರಾಜಕಾರಣಿಯಲ್ಲದೆ ಶಿಕ್ಷಣ ತಜ್ಞರು, ಕಾನೂನು ಪಂಡಿತರು, ರಾಷ್ಟ್ರೀಯ ಚಿಂತಕರೂ ಆಗಿದ್ದರು. ಶಿಕ್ಷಣದ ಮೂಲಕವೇ ಸುಭದ್ರ ರಾಷ್ಟ್ರ ಕಟ್ಟಬಹುದು ಎಂಬ ಅಚಲ ವಿಶ್ವಾಸ ಹೊಂದಿದ್ದರು. ನೆಹರೂ ಆಡಳಿತದಲ್ಲಿ ಕೈಗಾರಿಕಾ ಸಚಿವರಾಗಿದ್ದ ಇವರು ರಾಷ್ಟ್ರದ ಹಿತಕ್ಕೆ ಧಕ್ಕೆಯಾದಾಗ ಅಧಿಕಾರ ತ್ಯಜಿಸಿ ಹೋರಾಟಕ್ಕಿಳಿದ ಮಹಾನ್ ರಾಷ್ಟ್ರ ಭಕ್ತರು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ದೇಶ ಸುಭದ್ರವಾಗಿರಬೇಕು. ಅಭದ್ರ ದೇಶದಲ್ಲಿ ಯಾವ ಸಾಧನೆಗೂ ಬೆಲೆ ಇರುವುದಿಲ್ಲ. ವಿಶ್ವದಾದ್ಯಂತ ಇಂದು ಇರುವ ವಾತಾವರಣಕ್ಕೆ ಹೋಲಿಸಿದರೆ ಭಾರತ ಸುಭದ್ರವಾಗಿದೆ. ಜನ ಸುರಕ್ಷಿತವಾಗಿದ್ದಾರೆ. ಇದಕ್ಕೆ ಕಾರಣ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ತತ್ವ ಅಳವಡಿಸಿಕೊಂಡಿರುವ ಪ್ರಧಾನಿ ಮೋದಿಯವರ ನಾಯಕತ್ವ ಹಾಗೂ ಸದೃಢ ದೇಶ ನಿರ್ಮಾಣದ ಆಡಳಿತ ಕಾರಣ ಎಂದರು.ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಪ್ರಾಸ್ತಾವಿಕ ನುಡಿ ನುಡಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೈತ್ರ ಮಂಜುನಾಥ್, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್ ಸಮಾರಂಭದಲ್ಲಿ ಭಾಗವಹಿಸಿದ್ದರು.