ಸಾರಾಂಶ
ಗೃಹ ಸಚಿವ ಡಾ. ಜಿ. ಪರಮೇಶ್ವರ ನಿವಾಸದಲ್ಲಿ ನಡೆಯಬೇಕಾಗಿದ್ದ ದಲಿತರ ಸಭೆಯನ್ನು ರದ್ದುಗೊಳಿಸಿಲ್ಲ, ಕಾರಣಾಂತರಗಳಿಂದ ಮುಂದೂಡಲಾಗಿದೆ. ದಲಿತ ಶಾಸಕರು ಹಾಗೂ ಸಚಿವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ವಿಚಾರ ಹಾಗೂ ಸಮಸ್ಯೆ ಹೇಳಿಕೊಳ್ಳುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತು ಎಂದು ಅಬಕಾರ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಹುಬ್ಬಳ್ಳಿ:
ಮುಖ್ಯಮಂತ್ರಿಯಾಗುವ ಆಸೆ ಯಾರಿಗಿರುವುದಿಲ್ಲ? ದಲಿತರು ಮುಖ್ಯಮಂತ್ರಿ ಆಗಬಾರದೇ? ನಾನು ಸಹ ದಲಿತನಾಗಿದ್ದು ಮುಖ್ಯಮಂತ್ರಿ ಆದರೆ ತಪ್ಪೇನು? ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಮುಖ್ಯಮಂತ್ರಿಯಾಗಲು ಶಾಸಕಾಂಗ ಪಕ್ಷದಲ್ಲಿ ಆಯ್ಕೆಯಾಗಿ, ವರಿಷ್ಠರು ಒಪ್ಪಿಗೆ ಸೂಚಿಸಬೇಕಾಗುತ್ತದೆ. ಅದೆಲ್ಲವನ್ನೂ ಬಿಟ್ಟು ಮಾಧ್ಯಮದಲ್ಲಿ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡರೆ ಆಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.ಸಭೆ ಮುಂದೂಡಲಾಗಿದೆ:
ಗೃಹ ಸಚಿವ ಡಾ. ಜಿ. ಪರಮೇಶ್ವರ ನಿವಾಸದಲ್ಲಿ ನಡೆಯಬೇಕಾಗಿದ್ದ ದಲಿತರ ಸಭೆಯನ್ನು ರದ್ದುಗೊಳಿಸಿಲ್ಲ, ಕಾರಣಾಂತರಗಳಿಂದ ಮುಂದೂಡಲಾಗಿದೆ. ದಲಿತ ಶಾಸಕರು ಹಾಗೂ ಸಚಿವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ವಿಚಾರ ಹಾಗೂ ಸಮಸ್ಯೆ ಹೇಳಿಕೊಳ್ಳುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತು. ದೆಹಲಿಯಲ್ಲಿ ಕುಳಿತು ಸಭೆ ರದ್ದು ಮಾಡಿಸಲಾಗಿದೆ ಎನ್ನುವುದೆಲ್ಲವೂ ಮಾಧ್ಯಮ ಸೃಷ್ಟಿ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ. 5 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ ಎಂದರು.ರಾಜಕೀಯ ಸರಿಯಲ್ಲ:
ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ಎಷ್ಟೋ ದಲಿತರ ಕೊಲೆಗಳಾಗಿವೆ. ಬಿಜೆಪಿಯವರು ಯಾವತ್ತಾದರೂ ಧ್ವನಿ ಎತ್ತಿದ್ದಾರೆಯೇ? ಅಥವಾ ಪ್ರತಿಭಟನೆ ಮಾಡಿದ್ದಾರೆಯೇ? ಹಸುಗಳಿಗೆ ಹಿಂಸೆ ನೀಡಿದವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಇದೇ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ಬಿಜೆಪಿಯವರು ಇಂತಹ ಸಣ್ಣತನದ ರಾಜಕೀಯದಿಂದ ಹೊರಬರದೆ ಹೋದಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.