ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬಡತನದಲ್ಲಿ ಬೆಳೆದು ಉತ್ತಮ ಶಿಕ್ಷಣ, ರ್ಯಾಂಕ್ ಪಡೆದು ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿನಿಗೆ ನೆರವು ನೀಡುವಂತೆ ವಾಟ್ಸಪ್ ಗ್ರೂಪ್ನಲ್ಲಿ ಕೇಳಿದ ಆರು ಗಂಟೆಗಳಲ್ಲಿ ನೆರವಿನ ಹಸ್ತವೇ ಹರಿದುಬಂದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಸೃಷ್ಟಿ ಸದಾಶಿವ ಕೊಕಟನೂರಗೆ 2700 ಕಿಮೀಗೂ ಅಧಿಕ ದೂರದಲ್ಲಿರುವ ಅಸ್ಸಾಂನ ಗುವಾಹಟಿಯಿಂದ ಕಾರು ಶೋರೂಂನ ಮಾಲೀಕರಾದ ಅನೂಪ್ ಪೋದ್ದಾರ ಮತ್ತು ಅವರ ಪತ್ನಿ ಕಾಂಚನಾ ಪೋದ್ದಾರ ಅವರು ಸೃಷ್ಟಿಗೆ ಸಹಾಯ ಮಾಡಿದ್ದಾರೆ.
ಸೃಷ್ಟಿಗೆ ಪ್ರಸಕ್ತ ಸಾಲಿನ ಆಕೆಯ ವೈದ್ಯಕೀಯ ಮೊದಲ ವಾರ್ಷಿಕ ಶುಲ್ಕ ₹ ೧,೨೪,೮೧೫ ಹಣವನ್ನು ಆಕೆಯ ತಂದೆಯ ಖಾತೆಗೆ ಜಮೆ ಮಾಡಿದ್ದಾರೆ. ಇವರ ಜತೆಗೆ ರಬಕವಿಯ ಆನಂದ ದುರಡಿ ಹಾಗೂ ಅವರ ಪತ್ನಿ ಶಿಲ್ಪಾ ದುರಡಿ ಅವರು ಕೂಡ ವಿದ್ಯಾರ್ಥಿನಿಯ ವಸತಿ ಶಾಲೆಯ ಶುಲ್ಕವಾದ ಮಾಸಿಕ ₹4 ಸಾವಿರ ಹಣವನ್ನು ನೀಡಲು ಮುಂದಾಗಿದ್ದಾರೆ. ಇಷ್ಟೆಲ್ಲ ಕಾರಣವಾಗಿದ್ದು ಮಾಧ್ಯಮ ಬಳಗ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಸೃಷ್ಟಿ ಕಷ್ಟದ ಕುರಿತಾದ ಬಂದ ವಿವರಗಳಿಂದ ಎಂಬುವುದು ವಿಶೇಷ.ಹೇಗೆ ಸಹಾಯ ಹರಿದುಬಂತು?:
ಸೃಷ್ಟಿ ಕೊಕಟನೂರ ನೀಟ್‌ನಲ್ಲಿ 617 ಅಂಕ ಗಳಿಸಿದ್ದು, ಚಿಕ್ಕಬಳ್ಳಾಪುರದ ಸರ್ಕಾರಿ ವೈದ್ಯಕೀಯ ಸಂಶೋಧನಾ ಕಾಲೇಜಿನಲ್ಲಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿದ್ದಾಳೆ. ಆದರೆ, ಸೃಷ್ಟಿ ತಂದೆ ಬಡನೇಕಾರನಾಗಿದ್ದರಿಂದ ವೈದ್ಯಕೀಯ ಸೀಟು ಹಣ ಹೊಂದಿಸಲು ಪರದಾಡಿದ್ದಾರೆ. ನಂತರ ಹಾಗೂ ಹೀಗೂ ಮಾಡಿ ಸಾಲ ಮಾಡಿ ₹1.24 ಲಕ್ಷ ಹಣವನ್ನು ಪಡೆದುಕೊಂಡು ಪ್ರವೇಶಾತಿ ಪಡೆದುಕೊಂಡಿದ್ದಾರೆ.ಇದರ ನಡುವೆ ಬಡ ವಿದ್ಯಾರ್ಥಿನಿಯ ಕುರಿತು ಸ್ಥಳೀಯ ಮಾಧ್ಯಮ ಬಳಗ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಈ ವಿಚಾರ ಕೂಡ ಶೇರ್ ಆಗಿತ್ತು. ಇದರ ಜತೆಗೆ ಆನಂದ ದುರಡಿ ಎಂಬುವರು ಕೂಡ ತಮ್ಮ ಬೇರೆ ಗ್ರೂಪ್‌ನಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿದ್ದಾರೆ. ಇದು ಅಸ್ಸಾಂನ ಗುವಾಹಟಿಯಲ್ಲಿರುವ ಕಾರು ಶೋರೂಂನ ಮಾಲೀಕರಾದ ಅನೂಪ್, ಕಾಂಚನಾ ಪೋದ್ದಾರ್ ಅವರಿಗೂ ತಿಳಿದಿದೆ. ಕೇವಲ ಆರು ಗಂಟೆಗಳಲ್ಲಿ ಸೃಷ್ಟಿಯ ತಂದೆಯನ್ನು ಆನಂದ ದುರಡಿ ಅವರ ನೆರವಿನೊಂದಿಗೆ ಸಂಪರ್ಕಿಸಿದ ಪೋದ್ದಾರ್ ದಂಪತಿ ಸೃಷ್ಟಿಯ ವೈದ್ಯಕೀಯ ಶಿಕ್ಷಣ ಮುಗಿಯುವವರೆಗೂ ಸಂಪೂರ್ಣ ಶುಲ್ಕವನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದರು. ಮಾತ್ರವಲ್ಲ, ಮೊದಲ ವಾರ್ಷಿಕ ಶುಲ್ಕ ₹ ೧,೨೪,೮೧೫ ಹಣವನ್ನೂ ಜಮೆ ಮಾಡಿದರು.
ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಟಿ:ರಾಮಪುರದ ಜ್ಞಾನದೀಪ ಶಾಲೆಯಲ್ಲಿ ೧ರಿಂದ ೫ನೇ ತರಗತಿ ಶಿಕ್ಷಣ ಪಡೆದ ಸೃಷ್ಟಿಯು, ಬಳಿಕ ೬ರಿಂದ ೧೦ನೇ ತರಗತಿಯವರೆಗೆ ಲೋಕಾಪುರ ಬಳಿಯ ಹೆಬ್ಬಾಳ ಮೊರಾರ್ಜಿ ವಸತಿ ಶಾಲೆಯಲ್ಲಿ ಪೂರೈಸಿದಳು. ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೩ನೇ ರ‍್ಯಾಂಕ್ ಗಳಿಸಿದ್ದಳು. ಆ ವೇಳೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿದ್ದರಿಂದ ಹುಬ್ಬಳ್ಳಿಯ ಚೇತನಾ ವಿಜ್ಞಾನ ಪಿಯೂ ಕಾಲೇಜಿನಲ್ಲಿ ಉಚಿತ ಶಿಕ್ಷಣ ಕೂಡ ದೊರಕಿತು. ಪಿಯುಸಿಯಲ್ಲಿ ಶೇ.೯೮ಅಂಕ ಗಳಿಸಿ ನೀಟ್ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಪಡೆದು ವೈದ್ಯಕೀಯ ಸೀಟು ಕೂಡ ಪಡೆದುಕೊಂಡಳು ಸೃಷ್ಟಿ.
ಆರ್ಥಿಕ ನೆರವಿಗೆ ವಿದ್ಯಾರ್ಥಿನಿಯ ಬ್ಯಾಂಕ್ ಖಾತೆ ಮೂಲಕ ಮನವಿಗೆ ದಾನಿಗಳಿಂದ ಸುಮಾರು ೫೦ ಸಾವಿರಕ್ಕೂ ಅಧಿಕ ಹಣ ದೇಣಿಗೆಯಾಗಿ ಜಮೆ ಆಗಿರುವುದು ವಿಶೇಷ.----------
ಕೋಟ್.....ಎಲ್ಲ ಕಡೆಯಿಂದ ತನ್ನ ಪುತ್ರಿಯ ಸಾಧನೆಗೆ ನೆರವಿನ ಹಸ್ತ ಹರಿದುಬಂದಿದೆ. ಗುವಾಹಟಿಯ ಪೋದ್ದಾರ್ ದಂಪತಿ ತಮ್ಮ ಪುತ್ರಿಯ ವೈದ್ಯಕೀಯ ಶಿಕ್ಷಣ ವೆಚ್ಚ ಭರಿಸುವುದಾಗಿ ಹೇಳಿದ್ದು, ಮೊದಲ ವರ್ಷದ ಹಣ ಖಾತೆಗೆ ಜಮೆ ಮಾಡಿದ್ದಾರೆ. ಅದರಂತೆ ಅನೇಕರು ನೆರವು ನೀಡಿದ್ದಾರೆ. ಅವರಿಗೆಲ್ಲ ಧನ್ಯವಾದಗಳನ್ನು ತಿಳಿಸುತ್ತೇನೆ.
- ಸದಾಶಿವ ಶಂಕರ ಕೊಕಟನೂರ, ಸೃಷ್ಟಿಯ ತಂದೆ-----------
ಬಡತನದಲ್ಲಿರುವ ಪ್ರತಿಭೆಗಳಿಗೆ ಇಂತಹ ಸಹಾಯ ಅನಿವಾರ್ಯವಾಗಿದ್ದು, ಉಳ್ಳವರು ನೆರವಿಗೆ ಮುಂದಾಗಬೇಕಾದುದು ಕರ್ತವ್ಯವಾಗಿದೆ.- ನೀಲಕಂಠ ದಾತಾರ, ಹಿರಿಯ ಪತ್ರಕರ್ತರು, ರಬಕವಿ-ಬನಹಟ್ಟಿ.
;Resize=(128,128))
;Resize=(128,128))