ಸಾರಾಂಶ
- ಕೆರೆಬಿಳಚಿ, ಭದ್ರಾವತಿ ಮೂಲದ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು । ಬಸವಾಪಟ್ಟಣ ಪೊಲೀಸರ ಕಾರ್ಯಾಚರಣೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹೆಲ್ಮೆಟ್ ಧರಿಸದೇ ಸೂಳೆಕೆರೆ ಬಳಿ ಅಪಾಯಕಾರಿಯಾಗಿ ಬೈಕ್, ಸ್ಕೂಟಿಗಳ ಚಾಲನೆ ಮಾಡಿಕೊಂಡು, ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಕರ್ಕಶ ಶಬ್ಧ ಹೊಮ್ಮಿಸುತ್ತ, ವ್ಹೀಲಿಂಗ್, ಜಿಗ್ ಜಾಗ್ ರೈಡ್ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಸವಾಪಟ್ಟಣ ಪೊಲೀಸರು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ವಾಸಿ, ಡಿಯೋ ಸ್ಕೂಟಿಯ ಅಪ್ಪನ್ ಹುಸೈನ್ (22), ಹಿಂಬದಿ ಕುಳಿತಿದ್ದ ಎಲೆಕ್ಟ್ರಿಷಿಯನ್ ರಾಕೇಶ, ಟಿವಿಎಸ್ ಎನ್‌ಟಾರ್ಕ್ ಸ್ಕೂಟಿಯ ಅಸೀಬ್ (23), ಭದ್ರಾವತಿ ಪಟ್ಟಣದ ವೀರಾಪುರ ಭದ್ರಾ ಕಾಲನಿಯ ವಾಸಿ ಹೀರೋ ಹೊಂಡಾದ ಸೈಯದ್ ರಿಯಾನ್ (19), ಭದ್ರಾವತಿ ಪಟ್ಟಣದ ಸೀಗೆಬಾಗಿ ಸೈಯದ್ ಕಾಲನಿ ವಾಸಿ, ನಂಬರ್ ಪ್ಲೇಟ್ ಇಲ್ಲದ ಯಮಹಾ ಬೈಕ್‌ನ ಮೊಹಮ್ಮದ್ ಅಪ್ಪು (21) ಹಾಗೂ ಭದ್ರಾವತಿ ತಾಲೂಕಿನ ಹರಳಹಳ್ಳಿ ಗ್ರಾಮದ ಟಿವಿಎಸ್ ಎನ್‌ಟಾರ್ಕ್ ಸ್ಕೂಟಿ ಚಾಲಕ ಮೊಹಮ್ಮದ್ ದಸ್ತಗೀರ್ (18) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಬೈಕ್, ಸ್ಕೂಟರ್‌ಗಳ ಸದರಿ ಸವಾರರು ಸಾಗರಪೇಟೆ ವೃತ್ತದಿಂದ ಸೂಳೆಕೆರೆ ಕಡೆಗೆ ಸಾಗುತ್ತ ವ್ಹೀಲಿಂಗ್ ಮಾಡುತ್ತಿದ್ದರು. ದ್ವಿಚಕ್ರ ವಾಹನಗಳ ಮುಂದಿನ ಚಕ್ರಗಳನ್ನು ಹ್ಯಾಂಡಲ್ ಸಹಾಯದಿಂದ ಮೇಲಕ್ಕೆವುದು, ವ್ಹೀಲಿಂಗ್ ಹಾಗೂ ಜಿಗ್ ಜಾಗ್ ರೈಡ್ ಮಾಡುವುದು, ಒಬ್ಬರಿಗೊಬ್ಬರು ಚೇಸಿಂಗ್ ಮಾಡಿಕೊಂಡು ಹೋಗುತ್ತಿದ್ದರು. ಪೊಲೀಸರು ದ್ವಿಚಕ್ರ ವಾಹನಗಳ ಸವಾರರನ್ನು ವಾಹನಗಳ ಸಮೇತ ಹಿಡಿದು, ದಾಖಲಾತಿಗಳನ್ನು ಪರಿಶೀಲಿಸಿದರು. ಆಗ ವಾಹನಗಳ ದಾಖಲಾತಿ ಹಾಜರುಪಡಿಸದ ಹಿನ್ನೆಲೆ ಐದೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ವ್ಹೀಲಿಂಗ್, ಜಿಗ್ ಜಾಗ್ ರೈಡ್, ಚೇಸಿಂಗ್ ಮಾಡುವಂಥ ದೃಶ್ಯಗಳನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದರು. ಆರೋಪಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ನಿರ್ದೇಶನ ನೀಡಿದ್ದರು. ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ ಮಂಜುನಾಥ, ಚನ್ನಗಿರಿ ಎಎಸ್‌ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಪಿಎಸ್ಐ ಹಾಗೂ ಸಿಬ್ಬಂದಿ ತಂಡ ರಚಿಸಲಾಗಿತ್ತು.ಬಸವಾಪಟ್ಟಣ ಠಾಣೆ ವ್ಯಾಪ್ತಿಯ ಬಸವಾಪಟ್ಟಣದಲ್ಲಿ ದಾದಾ ಹಯಾತ್ ಖಲಂಧರ್ ಉರುಫ್ ಬಾಬಾ ಬುಡೇನ್ ವಲಿರವರ ಉರುಸ್ ಮತ್ತು ಖವಾಲಿ ಕಾರ್ಯಕ್ರಮವಿತ್ತು. ಎಎಸ್‌ಪಿ ಸ್ಯಾಮ್ ವರ್ಗಿಸ್ ನೇತೃತ್ವದಲ್ಲಿ ಪಿಎಸ್ಐ ಎಚ್.ಕೆ.ವೀಣಾ, ಜೆ.ಇ.ಭಾರತಿ, ಸಿಬ್ಬಂದಿ ನಾಗರಾಜ, ಹನುಮಂತಪ್ಪ, ರಂಗನಾಥ, ಅಣ್ಣೇಶ, ಯೋಗೇಶ, ಸೈಯದ್ ಅಲಿ, ಇರ್ಷಾದ್ ಅವರನ್ನು ಒಳಗೊಂಡ ತಂಡವು ಇಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುತ್ತು. ಆಗ ಕೆಲ ಹುಡುಗರು ಬಸವಾಪಟ್ಟಣ ಠಾಣೆ ಸರಹದ್ದಿನ ಸೂಳೆಕೆರೆ ಸಿದ್ದಪ್ಪ ದೇವಸ್ಥಾನ ಎದುರು ಚನ್ನಗಿರಿ- ದಾವಣಗೆರೆ ಮುಖ್ಯ ರಸ್ತೆಯಲ್ಲಿ ಬೈಕ್, ಸ್ಕೂಟಿಗಳಲ್ಲಿ ಹೆಲ್ಮೆಟ್ ಧರಿಸದೇ, ವ್ಹೀಲಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ವ್ಹೀಲಿಂಗ್ ಪುಂಡರಿಗೆ ಪಾಠ ಕಲಿಸಿದ್ದಾರೆ.
- - - -18ಕೆಡಿವಿಜಿ11: ಬಸವಾಪಟ್ಟಣ ಪೊಲೀಸರು ವ್ಹೀಲಿಂಗ್ ಮಾಡುತ್ತಿದ್ದವರಿಂದ ಜಪ್ತಿ ಮಾಡಿರುವ ವಾಹನಗಳು.