ಎಪಿಎಂಸಿ ನೂತನ ಆಡಳಿತ ಅಸ್ತಿತ್ವಕ್ಕೆ ಬಂದಾಗ ವರ್ತಕರ ಸಂಘಕ್ಕೆ ನಿವೇಶನ: ಸಂಗಮೇಶ್ವರ್

| Published : Aug 28 2024, 12:56 AM IST

ಎಪಿಎಂಸಿ ನೂತನ ಆಡಳಿತ ಅಸ್ತಿತ್ವಕ್ಕೆ ಬಂದಾಗ ವರ್ತಕರ ಸಂಘಕ್ಕೆ ನಿವೇಶನ: ಸಂಗಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಶ್ರೀಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಲೋಕಕಲ್ಯಾಣಾರ್ಥ ಮತ್ತು ವರ್ತಕರ ವ್ಯಾಪಾರ ವೃದ್ಧಿಗಾಗಿ ಹಮ್ಮಿಕೊಂಡಿದ್ದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ವರ್ತಕರ ಸಂಘದ ಕಚೇರಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚುನಾವಣೆ ನಡೆದು ನೂತನ ಆಡಳಿತ ಅಸ್ತಿತ್ವಕ್ಕೆ ಬಂದ ನಂತರ ವರ್ತಕರ ಸಂಘಕ್ಕೆ ಸರ್ಕಾರದಿಂದ ನಿವೇಶನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.

ಅವರು ಮಂಗಳವಾರ ನಗರದ ಚನ್ನಗಿರಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಶ್ರೀಗಣಪತಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಮತ್ತು ವರ್ತಕರ ವ್ಯಾಪಾರ ವೃದ್ಧಿಗಾಗಿ ಹಮ್ಮಿಕೊಂಡಿದ್ದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವರ್ತಕರ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ವ್ಯಾಪಾರಸ್ಥರು ಲಾಭದ ಮನೋಭಾವ ಹೊಂದಿರುವುದು ಸಹಜ. ಆದರೆ ದುರಾಸೆ ಹೊಂದಿರಬಾರದು. ಎಲ್ಲಾ ವ್ಯಾಪಾರಸ್ಥರು ತಮ್ಮಲ್ಲಿನ ಭಿನ್ನಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿ ಮುನ್ನಡೆಯಬೇಕು. ಅಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯೊಂದಿಗೆ ಕೈಜೋಡಿಸಿ ಅದರ ಏಳಿಗೆಗೆ ಶ್ರಮಿಸಬೇಕೆಂದರು.

ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ವರ್ತಕರು ತಮ್ಮ ವ್ಯಾಪಾರಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡದೆ ಒಗ್ಗಟ್ಟಿನ ಮೂಲಕ ಸಂಘದ ಏಳಿಗೆಗೂ ಗಮನ ನೀಡಬೇಕು. ವ್ಯಾಪಾರಸ್ಥರಲ್ಲಿ ಪೈಪೋಟಿ ಸಹಜ. ಆದರೆ ಪೈಪೋಟಿ ಆರೋಗ್ಯಕರವಾಗಿರಬೇಕು. ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡಬಾರದು ಎಂದರು. ಇದೀಗ ಬಹಳಷ್ಟು ಮುಂದುವರೆದ ತಂತ್ರಜ್ಞಾನ ಸಂಪರ್ಕ ವ್ಯವಸ್ಥೆಗಳಿದ್ದು, ಇಲ್ಲಿಯೇ ಕುಳಿತು ಕ್ಷಣ ಮಾತ್ರದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಬಹುದಾಗಿದೆ. ಇದರ ಪರಿಣಾಮ ವ್ಯಾಪಾರ-ವಹಿವಾಟು ಸುಲಭವಾಗಿ ನಡೆಸಲು ಸಹಕಾರಿಯಾಗಿದೆ ಎಂದರು.

ವರ್ತಕ ಸಂಘದ ಗೌರವಾಧ್ಯಕ್ಷ ಡಾ. ಎನ್.ಟಿ.ಸಿ ನಾಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್. ಮಣಿಶೇಖರ್, ಶಿವಮೊಗ್ಗ-ಚಿತ್ರದುರ್ಗ-ದಾವಣಗೆರೆ ಹಾಲು ಒಕ್ಕೂಟ(ಶಿಮುಲ್)ದ ನಿರ್ದೇಶಕ ಎಸ್. ಕುಮಾರ್, ಎಪಿಎಂಸಿ ವರ್ತಕ ಸಂಘದ ಅಧ್ಯಕ್ಷ ಎನ್.ಬಿ ಸುರೇಶ್, ಧಶರಥ ಗಿರಿ, ಅಕ್ಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ಎನ್.ಟಿ ನಾಗರಾಜ್, ನಗರಸಭೆ ಸದಸ್ಯ ಚನ್ನಪ್ಪ, ಎಪಿಎಂಸಿ ಕಾರ್ಯದರ್ಶಿ ಉಷಾರಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪುಟ್ಟರಾಜು ಪ್ರಾರ್ಥಿಸಿ, ರವಿ ಕಾಂಬ್ಳೆ ಸ್ವಾಗತಿಸಿದರು. ರ್‍ಯಾಮ್ಕೋಸ್ ಮುಖ್ಯ ಆಡಳಿತಾಧಿಕಾರಿ ವಿರುಪಾಕ್ಷಪ್ಪ ನಿರೂಪಿಸಿದರು. ಅರ್ಚಕ ಪ್ರದೀಪ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.