ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್, ಹಜಾನ್ ಇತ್ಯಾದಿ ವಿಷಯಗಳೇ ಪ್ರಾಧಾನ್ಯತೆ ಪಡೆದುಕೊಂಡು ಶಿಕ್ಷಣ ಹಾಗೂ ಉದ್ಯೋಗದಂತ ವಿಚಾರಗಳು ಹಿನ್ನಡೆಗೊಂಡಿದ್ದವು. ಕಾರಣ ಆಗ ಮನುಸ್ಮೃತಿ ವಿಚಾರಗಳು ಸರ್ಕಾರದಲ್ಲಿದ್ದವು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗಿಂತ ಆರ್‌ಎಸ್‌ಎಸ್ ಸಿದ್ಧಾಂತಗಳ ವಿರುದ್ಧ ಹೋರಾಟ ನಡೆಸಬೇಕಿದೆ. ಇಲ್ಲಿ ಬಿಜೆಪಿ ಕೇವಲ ಒಂದು ಪಕ್ಷ ಅಷ್ಟೆ, ಅದರ ಹಿಂದೆ ಆರ್‌ಎಸ್‌ಎಸ್ ಇದೆ. ದೇಶದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ ಹಾಗೂ ತನ್ನ ಖುರ್ಚಿ ಅಲ್ಲಾಡುತ್ತಿದೆ ಎಂದು ಅರಿತುಕೊಂಡ ಮೋದಿ ತಮ್ಮ ಮಾತಿನ ಧಾಟಿ ಬದಲಿಸಿ ಮುಸ್ಲಿಮರ ಬಗ್ಗೆ ಮಾತು ಆಡತೊಡಗಿದ್ದಾರೆ. ಕಾಂಗ್ರೆಸ್‌ನವರು ಹಿಂದೂಗಳ ಮಂಗಳಸೂತ್ರ ಕಿತ್ತುಕೊಳ್ಳುತ್ತಾರೆ ಎಂದು ಹೇಳಿದರು. ಅಸಲಿಗೆ ಕೊರೋನಾ ಸಮಯದಲ್ಲಿ ಬಹಳಷ್ಟು ಮಹಿಳೆಯರ ಮಂಗಳ ಸೂತ್ರ ಕಿತ್ತುಕೊಂಡವರು ನೀವೇ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು ಲಿಂಗಾಯತರಿಗೆ ಕೊಟ್ಟಿದ್ದರು. ಇದರ ವಿರುದ್ದ ಸುಪ್ರಿಂ ಕೋರ್ಟ ಗೆ ಅರ್ಜಿ ಸಲ್ಲಿಸಲಾಯಿತು. ಇಂತಹ ಪ್ರಯೋಗಗಳನ್ನು ಬಿಜೆಪಿ ಮಾಡುತ್ತಿದೆ. ಇದರ ಹಿಂದೆ ಆರ್ ಎಸ್ ಎಸ್ ನ ಸೂಚನೆ ಇರುತ್ತದೆ ಎಂದು ಟೀಕಿಸಿದರು.ವಂದೇ ಭಾರತ್ ರೈಲು ಓಡುತ್ತಿರುವುದೇ ಕಾಂಗ್ರೆಸ್ ಹಾಕಿರುವ ಹಳಿಗಳ ಮೇಲೆ. ಮೋದಿ ಚಹಾ ಮಾರಿದ್ದು ಕೂಡಾ ಕಾಂಗ್ರೆಸ್ ಕಟ್ಟಿಸಿದ ನಿಲ್ದಾಣದಲ್ಲಿ. ಹೀಗಿದ್ದರೂ ಕಾಂಗ್ರೆಸ್ ಏನು ಮಾಡಿದೆ ಎಂದು ಜಾಧವ್ ಕೇಳುತ್ತಿದ್ದಾರೆ ಎಂದು ಖರ್ಗೆ ಕುಟುಕಿದರು. ಜಾಧವ್ ಅವರೇ, ನೀವು ಕೂಡಾ ಕಾಂಗ್ರೆಸ್‌ನವರೆ, ನೀವು ಓದಿದ್ದು ಕೂಡಾ ಕಾಂಗ್ರೆಸ್ ಕಟ್ಟಿಸಿದ ಕಾಲೇಜಿನಲ್ಲಿ, ನೌಕರಿ ಗಿಟ್ಟಿಸಿದ್ದು ಕಾಂಗ್ರೆಸ್ ನಿರ್ಮಿಸಿದ ಆಸ್ಪತ್ರೆಯಲ್ಲಿ, ಕೊ ನೆಗೆ ರಾಜಕೀಯ ಪ್ರವೇಶ ಮಾಡಿದ್ದು ಕಾಂಗ್ರೆಸ್ ಮೂಲಕ ಹಾಗೇ ಗೆದ್ದಿದ್ದು ಕೂಡಾ ಕಾಂಗ್ರೆಸ್ ನಲ್ಲಿಯೇ. ಇಷ್ಟೆಲ್ಲ ಯಾರು ಮಾಡಿದ್ದು ಜಾಧವ್ ಅವರೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿರುವುದು ಸಂವಿಧಾನ ಪಾಲಿಸುವ ಸರ್ಕಾರವಾಗಿದೆ. ಎಲ್ಲ ಧರ್ಮದ ಜಾತಿಯ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ, ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಸಮಾನವಾಗಿ ಸೌಲಭ್ಯ ನೀಡುತ್ತಿದೆ ಎಂದರು.