ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತಾಂತರಕ್ಕೆ ಹೆಚ್ಚು ಕುಮ್ಮಕ್ಕು ಸಿಗುತ್ತಿದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಗಂಭೀರ ಆರೋಪ ಮಾಡಿದರು.ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಚಿಕ್ಕಬಳ್ಳಾಪುರ ತಾಲೂಕಿನ ಚೋಳೂರು ಗ್ರಾಮದಲ್ಲಿ ನಡೆದ ಘಟನೆ ಖಂಡನಾರ್ಹ. ಅಬ್ಬಾಸ್ ಎನ್ನುವ ವ್ಯಕ್ತಿಯೋರ್ವ ಹಿಂದು ಯುವಕರನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾನೆ. ಚಿತ್ರದುರ್ಗದಲ್ಲೂ ಕುರುಬ ಸಮಾಜದ ಯುವಕನನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇದ್ದಾಗಲೂ ಇಂತಹ ಕಾರ್ಯಗಳು ನಡೆಯುತ್ತಿರುವುದು ಸರಿಯಲ್ಲ. ಇದನ್ನು ಶ್ರೀರಾಮಸೇನೆ ಖಂಡಿಸುತ್ತದೆ ಎಂದರು.
ಮತಾಂತರ ಸರಿಯಲ್ಲ:ಮತಾಂತರ ಮಾಡುವವರಿಗೆ ನಾವು ಎಚ್ಚರಿಕೆ ಕೊಡುತ್ತಿದ್ದೇವೆ. ಈ ತರಹದ ಮತಾಂತರ ಸಂಘರ್ಷಕ್ಕೆ ಹಾಗೂ ಗಲಭೆಗೆ ಕಾರಣವಾಗುತ್ತದೆ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಲಿ. ನಿಮ್ಮ ಪಾಡಿಗೆ ನೀವು ಇದ್ದು ನಿಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಿ. ಹಿಂದು ಯುವಕರನ್ನು ಮತಾಂತರ ಮಾಡುವಂತಹದ್ದು ಸರಿಯಲ್ಲ. ಕ್ರೈಸ್ತರು ಹಾಗೂ ಮುಸ್ಲಿಮರು ಇಬ್ಬರೂ ಇದನ್ನೇ ಮಾಡುತ್ತಿದ್ದಾರೆ. ಲವ್ ಜಿಹಾದ್ ಮೂಲಕ ಹಿಂದೂ ಹುಡುಗಿಯರನ್ನು ಹಾಗೂ ಹಿಂದು ಯುವಕರನ್ನು ಮೋಸದಿಂದ ಮತಾಂತರ ಮಾಡುವ ಕುತಂತ್ರ ನಡೆಯುತ್ತಿದೆ. ಸರ್ಕಾರ ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಎಚ್ಚರಿಕೆ ನೀಡುವೆ:ಮುಖ್ಯಮಂತ್ರಿಗಳೇ ನೀವು ಕುರುಬ ಸಮಾಜದ ಮತ ತೆಗೆದುಕೊಳ್ಳುತ್ತೀರಿ. ಆದರೆ, ಅವರ ಹಿತಕ್ಕಾಗಿ ಏನು ಮಾಡುತ್ತಿಲ್ಲ. ಅವರೆಲ್ಲ ಮತಾಂತರ ಆಗುತ್ತಾ ಹೋಗುತ್ತಿದ್ದಾರೆ. ಕೋಲಾರ, ಬೆಳಗಾವಿ ಸೇರಿ 7-8 ಜಿಲ್ಲೆಗಳಲ್ಲಿ ಕುರುಬ ಸಮಾಜದವರೇ ಮತಾಂತರವಾಗುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ನಾಳೆ ನಿಮಗೆ ಮತ ಹಾಕಲು ನಿಮ್ಮ ಜನ ಇರುವುದಿಲ್ಲ. ಇದನ್ನು ನಿಲ್ಲಿಸುವಂತೆ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಕಾಂಗ್ರೆಸ್‌ಗೆ ಕೂಡ ಎಚ್ಚರಿಕೆ ಕೊಡುತ್ತಿದ್ದೇನೆ ಎಂದರು.
ಸಾಣೆಹಳ್ಳಿ ಶ್ರೀಗಳ ಹೇಳಿಕೆ ಖಂಡನಾರ್ಹ:ಸಾಣೆಹಳ್ಳಿ ಮಠದ ಶ್ರೀಗಳ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಮುತಾಲಿಕ್, ಚಿತ್ರದುರ್ಗದ ಸಾಣೆಹಳ್ಳಿ ಮಠದ ಶ್ರೀಗಳು ಹೇಳಬಾರದ ಹೇಳಿಕೆ ನೀಡಿದ್ದಾರೆ. ನಮ್ಮ ಹಿಂದೂ ದೇವರುಗಳನ್ನೇ ಟಾರ್ಗೆಟ್ ಮಾಡಿ ನಡಿತಾ ಇರುವಂತಹ ಪ್ರಕ್ರಿಯೆ ಇದು. ಇದು ಶ್ರೀಗಳಿಗೆ ಶೋಭೆ ತರುವುದಿಲ್ಲ. ದೇಶದಲ್ಲಿ ಸಾವಿರಾರು ವರ್ಷಗಳಿಂದ ಪ್ರಥಮ ಪೂಜೆ ಗಣೇಶನಿಗೆ ಸಲ್ಲಿಸುತ್ತಾ ಬಂದಿದ್ದೇವೆ. ಪೂಜೆ ಮಾಡಿ ಮುಂದಿನ ಶುಭ ಕಾರ್ಯ ಪ್ರಾರಂಭ ಮಾಡುತ್ತೇವೆ. ನಿಮಗೆ ನಂಬಿಕೆ, ವಿಶ್ವಾಸ ಇಲ್ಲದೇ ಇದ್ದರೆ ಹಿಂದೂ ಧರ್ಮ ನಿಮಗೇನು ಒತ್ತಾಯ ಮಾಡುತ್ತಿಲ್ಲ. ಅದನ್ನು ಬಹಿರಂಗವಾಗಿ ಹೇಳಿಕೆ ಕೊಡುವುದು ಒಬ್ಬ ನಂಬಿಗಸ್ತನ ಮೇಲೆ ಘಾಸಿ ಮಾಡಿದಂತೆ. ಇದು ಸಂವಿಧಾನ, ಕಾನೂನು ಉಲ್ಲಂಘನೆಯಾಗುತ್ತದೆ.
ಗಣಪತಿ ದೇವರಲ್ಲ ಮೂಢನಂಬಿಕೆ ಅಂತ ಹೇಳುವವರು ಇಸ್ಲಾಂ, ಕ್ರಿಶ್ಚಿಯನ್‌ಗಳಲ್ಲಿ ಮೂಢನಂಬಿಕೆಗಳಿಲ್ಲವೇ? ಅದರ ಬಗ್ಗೆ ಮಾತನಾಡಿ. ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಏಕೆಂದರೆ ಅವರು ನಿಮ್ಮ ಮಠವನ್ನು ಧ್ವಂಸ ಮಾಡುತ್ತಾರೆ ಅಂತ ಹೇಳಿ. ಹಿಂದೂ ಸಮಾಜ ಶಾಂತವಾಗಿದೆ ಏನ್ ಬೇಕಾದ್ದನ್ನು ಮಾತನಾಡಬಹುದು, ಪ್ರಚೋದನೆ ಕೊಡುವಂಥದ್ದಾ?. ಶ್ರೀಗಳ ಬಗ್ಗೆ ಬಹಳ ದೊಡ್ಡ ಗೌರವವಿದೆ. ನಿಮ್ಮ ಬಾಯಲ್ಲಿ ಈ ರೀತಿ ಗಣೇಶನ ಬಗ್ಗೆ ಬರಬಾರದು. ಈ ಹೇಳಿಕೆ ನಿಮಗೆ ಶೋಭೆ ತರುವುದಿಲ್ಲ ಎಂದರು.