ವಿಕ್ಟೋರಿಯಾ ರಾಣಿ ಕೆರೆಯ ಹೂಳಿಗೆ ಮುಕ್ತಿ ಯಾವಾಗ?

| Published : May 24 2024, 12:50 AM IST

ಸಾರಾಂಶ

ಸರ್ಕಾರ ಆದಷ್ಟು ಬೇಗ ಹೂಳು ತೆಗೆಯಬೇಕು. ರೈತರಿಗೆ ಮತ್ತು ಇಟ್ಟಿಗೆ ಭಟ್ಟಿಯವರಿಗೆ ಕೆರೆಯ ಹೂಳು ತೆಗೆಯಲು ಅವಕಾಶ ಮಾಡಿಕೊಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುವುದರ ಮೂಲಕ ಜಮೀನುಗಳಲ್ಲಿ ಸಮೃದ್ಧ ಬೆಳೆ ಬಂದರೆ, ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯ

ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ

ಇಲ್ಲಿನ 430 ಎಕರೆ ವಿಸ್ತಾರ ಹೊಂದಿರುವ ವಿಕ್ಟೋರಿಯಾ ಮಹಾರಾಣಿ ಕೆರೆಯಲ್ಲಿ ತುಂಬಿರುವ ಅಪಾರ ಪ್ರಮಾಣದ ಹೂಳನ್ನು ಸರ್ಕಾರ ತಾನೂ ತೆಗೆಯುತ್ತಿಲ್ಲ, ನಾವೇ ಒಯ್ಯುತ್ತೇವೆ ಎಂದು ಬೇಡಿಕೆ ಇಟ್ಟಿರುವ ಸ್ಥಳೀಯ ರೈತರು, ಇಟ್ಟಿಗೆ ಭಟ್ಟಿ ಮಾಲೀಕರಿಗೂ ಅವಕಾಶ ನೀಡುತ್ತಿಲ್ಲ. ಹಾಗಾಗ ವರ್ಷದಿಂದ ವರ್ಷಕ್ಕೆ ನೀರು ಹಿಡಿದಿಟ್ಟುಕೊಳ್ಳುವ ಕೆರೆಯ ಸಾಮರ್ಥ್ಯ ಕುಸಿಯುತ್ತಿದೆ.

ವಿಕ್ಟೋರಿಯಾ ಮಹಾರಾಣಿ ಕೆರೆ 10 ವರ್ಷಗಳ ಹಿಂದೆ ಸಂಪೂರ್ಣ ತುಂಬಿತ್ತು. ಆದರೆ ಈಗ ಬರಗಾಲದಿಂದ ಕೆರೆ ಖಾಲಿಯಾಗಿದೆ. ಸುಮಾರು ದಿನಗಳಿಂದ ಕೆರೆಯಲ್ಲಿ ಹೂಳು ತುಂಬಿದ್ದರಿಂದ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಿದೆ.

ಸರ್ಕಾರ ಆದಷ್ಟು ಬೇಗ ಹೂಳು ತೆಗೆಯಬೇಕು. ರೈತರಿಗೆ ಮತ್ತು ಇಟ್ಟಿಗೆ ಭಟ್ಟಿಯವರಿಗೆ ಕೆರೆಯ ಹೂಳು ತೆಗೆಯಲು ಅವಕಾಶ ಮಾಡಿಕೊಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುವುದರ ಮೂಲಕ ಜಮೀನುಗಳಲ್ಲಿ ಸಮೃದ್ಧ ಬೆಳೆ ಬಂದರೆ, ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯ ಮತ್ತು ಇಟ್ಟಿಗೆ ಭಟ್ಟಿಗಳಿಂದ ಬಡ ಕೂಲಿಕಾರ್ಮಿಕರ ಬದುಕಿಗೆ ಸಹಕಾರ ನೀಡಿದಂತಾಗುತ್ತದೆ ಎಂದು ರೈತ ಯಮನಪ್ಪ, ಕೂಲಿಕಾರ್ಮಿಕ ರಾಮಪ್ಪ ಹೇಳುತ್ತಾರೆ.

ಕೂಲಿಕಾರ್ಮಿಕರ ಬದುಕಿಗೆ ಆಸರೆ:

ಈ ಕೆರೆಯ ಹೂಳು ಮಣ್ಣು ಬಳಸಿಕೊಳ್ಳಲು ಇಟ್ಟಿಗೆ ಭಟ್ಟಿಗಳಿಗೆ ಅವಕಾಶ ನೀಡಿದರೆ ಬರಗಾಲದಿಂದ ತತ್ತರಿಸಿರುವ ಹಾಗೂ ಉದ್ಯೋಗವಿಲ್ಲದೇ ಕುಳಿತ ಕೂಲಿಕಾರ್ಮಿಕರ ಬದುಕಿಗೆ ಆಶಾಕಿರಣವಾಗಲಿದೆ. ಜೊತೆಗೆ ಇಟ್ಟಿಗೆ ಭಟ್ಟಿಗಳಿಂದ ಹಲವಾರು ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಸಿಗುತ್ತದೆ. ಹಲವು ಕಲ್ಯಾಣ ಕಾರ್ಯಕ್ರಮಕ್ಕೂ ಇದು ನೆರವಾಗಲಿದೆ.

ಡಂಬಳ ಗ್ರಾಮದ ಹೊರವಲಯದಲ್ಲಿ ಕೆಲ ಇಟ್ಟಿಗೆ ಭಟ್ಟಿಗಳಿದ್ದು, ಅವು ನೂರಾರು ಕೂಲಿ ಕಾರ್ಮಿಕರ ಅನ್ನಕ್ಕೆ ಆಧಾರವಾಗಿವೆ. ಜಿಲ್ಲೆ ಮತ್ತು ಹೊರಜಿಲ್ಲೆಯ ಸುತ್ತಮುತ್ತಲಿನ ಗ್ರಾಮದ ಕೂಲಿಕಾರ್ಮಿಕರು ಕೆಲಸ ಅರಸಿ ಬಂದು ತಮ್ಮ ಬದುಕು ಇಲ್ಲಿ ಕಟ್ಟಿಕೊಳ್ಳುತಾರೆ.

ಇಟ್ಟಿಗೆ ಭಟ್ಟಿ ಉದ್ಯೋಗ ಅರಿಸಿ ಬರುವ ಬಡ ಕೂಲಿ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣ, ಹೆಣ್ಣು ಮಕ್ಕಳ ಮದುವೆ, ಇನ್ನಿತರ ಕಾರ್ಯಕ್ಕೆ ಮಾಲೀಕರು ಆರ್ಥಿಕ ನೆರವು ನೀಡುತ್ತಾರೆ. ದೀಪಾವಳಿ, ರಮ್‌ಜಾನ್‌ ಗಳಲ್ಲಿ ಉಚಿತ ಬಟ್ಟೆ ನೀಡುವುದರ ಜತೆಗೆ ಗ್ರಾಮಗಳಲ್ಲಿ ನಡೆಯುವ ಜಾತ್ರಾಮಹೋತ್ಸವಕ್ಕೆ ಧನ ಸಹಾಯ, ದೇವಾಲಯ ನಿರ್ಮಾಣಕ್ಕೆ ಉಚಿತ ಇಟ್ಟಿಗೆ ವಿತರಿಸುವುದರ ಮೂಲಕ ಮಾನವೀಯತೆ ಮೆರೆಯುತ್ತಾರೆ.

ಇಟ್ಟಿಗೆಗೆ ಬಲು ಬೇಡಿಕೆ:

ಡಂಬಳದಲ್ಲಿ ಕೆಂಪು ಮಣ್ಣು ಬಳಸಿ ತಯಾರಿಸಲಾದ ಇಟ್ಟಿಗೆಗಳಿಗೆ ಬೇಡಿಕೆ ಹೆಚ್ಚಿದ್ದು, ಉತ್ತಮ ಗುಣಮಟ್ಟ ಹೊಂದಿವೆ. ಬೇರೆ ಜಿಲ್ಲೆಯ ಗ್ರಾಹಕರು ಈ ಇಟ್ಟಿಗೆಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಭೀಕರ ಬರಗಾಲದಲ್ಲಿ ತಯಾರಿಸಿದ ಇಟ್ಟಿಗೆಗಳು ಮಾರಾಟವಾಗದೇ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೂ ಎದೆಗುಂದದೇ ಕಾರ್ಮಿಕರ ವೇತನ, ಸಂಕಷ್ಟಕ್ಕೆ ಸಹಕಾರ ನೀಡುತ್ತ ಬಂದಿದ್ದಾರೆ.

ಬರಗಾಲದಲ್ಲಿ ಕೆಲಸವಿಲ್ಲದೇ ಪರದಾಡುತ್ತಿದ್ದ ನಮಗೆ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಕೊಟ್ಟು ದುಡಿದ ವೇತನ ಸರಿಯಾದ ಸಮಯಕ್ಕೆ ನೀಡಿದ್ದರಿಂದ ಮಕ್ಕಳ ಶಿಕ್ಷಣ ಮತ್ತು ಮಗಳ ಮದುವೆ ಹಾಗೂ ತಂದೆ ಆರೋಗ್ಯ ಚಿಕಿತ್ಸೆಗೆ ಸಹಕಾರಿಯಾಗಿದೆ ಎಂದು ಕೂಲಿ ಕಾರ್ಮಿಕ ಗೋಪಾಲ ಅಡವಿಭೋವಿ ಹೇಳಿದರು.

30 ವರ್ಷಕ್ಕೂ ಹೆಚ್ಚು ಕಾಲದಿಂದ ವಿಕ್ಟೋರಿಯಾ ಮಹಾರಾಣಿ ಕೆರೆಯ ಹೂಳು ತೆಗೆಯದ ಕಾರಣ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಿದೆ. ಸರ್ಕಾರ ಕೆರೆಯ ಹೂಳು ತೆಗೆಯಬೇಕು. ಇಲ್ಲದಿದ್ದರೆ ರೈತರಿಗೆ, ಇಟ್ಟಿಗೆ ಭಟ್ಟಿಗಳಿಗೆ ಕೆರೆಯ ಹೂಳು ತೆಗೆಯಲು ಅವಕಾಶ ಮಾಡಿಕೊಟ್ಟರೆ ಕೆರೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ನಿಲ್ಲಲಿದೆ ಎಂದು ಗ್ರಾಮಸ್ಥ ಬಸವರಾಜ ಹೇಳಿದರು.