ಉತ್ತರ ಕನ್ನಡದಲ್ಲಿ ಸಚಿವರ ಬರ ಪ್ರವಾಸ ಯಾವಾಗ?

| Published : Nov 16 2023, 01:15 AM IST

ಸಾರಾಂಶ

ಉಸ್ತುವಾರಿ ಸಚಿವರಾಗಿ 5 ತಿಂಗಳಾದರೂ ಮಂಕಾಳ ವೈದ್ಯ ಈ ವರೆಗೂ ಜಿಲ್ಲೆಯ ಕೆಲವು ತಾಲೂಕುಗಳಿಗೆ ಕಾಲಿಟ್ಟಿಲ್ಲ. ಹಳಿಯಾಳ, ದಾಂಡೇಲಿ, ಜೋಯಿಡಾ, ಮುಂಡಗೋಡ ತಾಲೂಕುಗಳನ್ನು ಸಚಿವರಾದ ಮೇಲೆ ವೈದ್ಯ ನೋಡೇ ಇಲ್ಲ.

ವಸಂತಕುಮಾರ್ ಕತಗಾಲ

ಕಾರವಾರ:

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರೂ ಉಸ್ತುವಾರಿ ಸಚಿವರ “ಬರ” ಪ್ರವಾಸ ಆಗದೆ ಇರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ರೈತರ ಗೋಳು ಕೇಳುವ ಸಚಿವರೇ ಇಲ್ಲವಾಗಿದೆ. ಸಚಿವರು ಕೆಲವು ತಾಲೂಕುಗಳಿಗೆ ಇನ್ನೂ ಕಾಲಿಡದೆ ಇರುವುದರಿಂದ ಆ ತಾಲೂಕುಗಳಲ್ಲಿ ಸಚಿವರ ಬರವೂ ಎದುರಾಗಿದೆ.

ರಾಜ್ಯದ ಎಲ್ಲ ಉಸ್ತುವಾರಿ ಸಚಿವರು ನ. 15ರೊಳಗೆ ತಮ್ಮ ಜಿಲ್ಲೆಯ ಪ್ರತಿ ತಾಲೂಕಿಗೆ ಬರ ಪ್ರವಾಸ ಮಾಡಿ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಕುರಿತು ಎಲ್ಲ ಸಚಿವರಿಗೆ ಪತ್ರವನ್ನೂ ಬರೆದಿರುವುದಾಗಿ ತಿಳಿಸಿದ್ದರು. ಆದರೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬರ ಪ್ರವಾಸ ಮಾಡುವ ಗೋಜಿಗೇ ಹೋಗಿಲ್ಲ. ಆ ಮೂಲಕ ಮುಖ್ಯಮಂತ್ರಿ ಸೂಚನೆಯನ್ನೂ ಧಿಕ್ಕರಿಸಿದರೆ ಎಂಬ ಪ್ರಶ್ನೆ ಉಂಟಾಗಿದೆ.

ಉತ್ತರ ಕನ್ನಡ ಜಿಲ್ಲೆಯ 11 ತಾಲೂಕುಗಳು ಬರ ಪೀಡಿತವಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಘಟ್ಟದ ಮೇಲಿನ ತಾಲೂಕುಗಳಾದ ಹಳಿಯಾಳ, ಮುಂಡಗೋಡ, ಯಲ್ಲಾಪುರ, ಸಿದ್ದಾಪುರ, ಶಿರಸಿ, ಜೋಯಿಡಾಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಮಂಕಾಳ ವೈದ್ಯ ಬರ ಪ್ರವಾಸವನ್ನು ನಡೆಸದೆ ಇರುವುದು ರೈತರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಉಸ್ತುವಾರಿ ಸಚಿವರಾಗಿ 5 ತಿಂಗಳಾದರೂ ಮಂಕಾಳ ವೈದ್ಯ ಈ ವರೆಗೂ ಜಿಲ್ಲೆಯ ಕೆಲವು ತಾಲೂಕುಗಳಿಗೆ ಕಾಲಿಟ್ಟಿಲ್ಲ. ಹಳಿಯಾಳ, ದಾಂಡೇಲಿ, ಜೋಯಿಡಾ, ಮುಂಡಗೋಡ ತಾಲೂಕುಗಳನ್ನು ಸಚಿವರಾದ ಮೇಲೆ ವೈದ್ಯ ನೋಡೇ ಇಲ್ಲ.

ಭಟ್ಕಳ ಹಾಗೂ ಕಾರವಾರ ಈ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಣಿಸುತ್ತಿದ್ದಾರೆ. ಇವೆರಡು ತಾಲೂಕುಗಳಿಗೆ ಮಾತ್ರ ಉಸ್ತುವಾರಿ ಸಚಿವರೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳೋಣ ಎಂದು ಸಚಿವರಿಗಾಗಿ ಕಾದು ಕುಳಿತಿದ್ದಾರೆ. ಊಹೂಂ ಸಚಿವರು ಮಾತ್ರ ಜಿಲ್ಲೆಯನ್ನು ಸುತ್ತುತ್ತಿಲ್ಲ. ಇದು ವಿವಿಧ ಕ್ಷೇತ್ರಗಳ ಜನತೆಯ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಸಚಿವ ಮಂಕಾಳ ವೈದ್ಯ ಬಿಡುವಿಲ್ಲದ ಕಾರ್ಯಗಳಿಂದ ಬರ ಪ್ರವಾಸಕ್ಕೆ ಹೋಗಿಲ್ಲ ಎಂಬ ಮಾತುಗಳು ಅವರ ಬೆಂಬಲಿಗರಿಂದ ಕೇಳಿಬರುತ್ತಿವೆ. ಹಾಗಿದ್ದರೆ ಬರಕ್ಕಿಂತ ಗಂಭೀರ ವಿಷಯ ಯಾವುದಿರಬಹುದು, ಯಾವ ಕೆಲಸದಲ್ಲಿ ಬಿಸಿ ಆಗಿರಬಹುದು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಬರ ಪ್ರವಾಸ ಮಾಡಿಲ್ಲ. ರೈತರು, ಜನತೆ ಕಷ್ಟದಲ್ಲಿದ್ದಾರೆ. ಉಸ್ತುವಾರಿ ಸಚಿವರು ಮಾತ್ರ ರೈತರ ಗೋಳನ್ನು ಕೇಳಲು ಮುಂದಾಗುತ್ತಿಲ್ಲ ಎಂದು ಜಿಲ್ಲಾಧ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.

ಬೇರೆ ಬೇರ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ಬರ ಪ್ರವಾಸ ಮಾಡಲಾಗಿಲ್ಲ. ದೀಪಾವಳಿಯ ನಂತರ ಬರ ಪ್ರವಾಸ ಮಾಡುವುದಾಗಿ ಉಸ್ತುವಾರಿ ಸಚಿವರು ಹೇಳಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ತಿಳಿಸಿದ್ದಾರೆ.