ಮಳೆ ಬಂದಾಗ ನೆನಪಾಗುವ ರಾಜ ಕಾಲುವೆ ಸಮಸ್ಯೆ

| Published : May 16 2024, 12:47 AM IST

ಸಾರಾಂಶ

ಮಳೆ ನೀರು ಸರಾಗವಾಗಿ ಸಾಗಬೇಕಾದರೆ ರಾಜಕಾಲುವೆಗಳು ಅತಿ ಮುಖ್ಯ. ಜಿಲ್ಲೆಯ ದುರಾದೃಷ್ಟವೆಂದರೆ ಮಾನವನ ಸ್ವಾರ್ಥಕ್ಕೆ ಅನೇಕ ರಾಜ ಕಾಲುವೆಗಳು ಒತ್ತುವರಿಯಾಗಿವೆ. ಕೆಲವು ಕಾಲುವೆಗಳು ಸರಿಯಾದ ನಿರ್ವಹಣೆ ಇಲ್ಲದೆ ಮುಚ್ಚಿ ಹೋಗಿವೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹೆಚ್ಚು ಕೆರೆಗಳನ್ನು ಹೊಂದಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚ ನದಿಗಳಿದ್ದರೂ ಅವು ಮಳೆ ಬಂದರೆ ಮಾತ್ರ ಹರಿಯುತ್ತವೆ. ಆದರೆ ಆ ನದಿಗಳ ನೀರು ನೆರೆಯ ಆಂಧ್ರ ತಮಿಳುನಾಡು ಕಡೆಗೆ ಹೊರಟು ಹೋಗುತ್ತವೆ. ಇದನ್ನು ಮನಗಂಡ ಅಂದಿನ ಪೂರ್ವಿಕರು ಜಿಲ್ಲೆಯಲ್ಲಿ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದರು.

ಮಳೆ ಬಿದ್ದಾಗ ನೀರು ಕೆರೆಗಳಿಗೆ ಹರಿಯುವುದಕ್ಕೆ ರಾಜ ಕಾಲುವೆಗಳನ್ನು ನಿರ್ಮಿಸಿದ್ದರು. ಒಂದು ಕೆರೆ ತುಂಬಿ ಕೋಡಿ ಹರಿದಾಗ ಮತ್ತೊಂದು ಕೆರೆಗೆ ನೀರು ಹರಿಯುವಂತೆ ಈ ರಾಜ ಕಾಲವೆಗಳನ್ನು ನಿರ್ಮಿಸಿದ್ದಾರೆ.

ರಾಜಕಾಲುವೆಗಳ ಒತ್ತುವರಿ

ಆದರೆ ನೀರು ಸರಾಗವಾಗಿ ಸಾಗಬೇಕಾದರೆ ರಾಜಕಾಲುವೆಗಳು ಅತಿ ಮುಖ್ಯ. ಜಿಲ್ಲೆಯ ದುರಾದೃಷ್ಟವೆಂದರೆ ಮಾನವನ ಸ್ವಾರ್ಥಕ್ಕೆ ಅನೇಕ ರಾಜ ಕಾಲುವೆಗಳು ಒತ್ತುವರಿಯಾಗಿವೆ. ಕೆಲವು ಕಾಲುವೆಗಳು ಸರಿಯಾದ ನಿರ್ವಹಣೆ ಇಲ್ಲದೆ ಮುಚ್ಚಿ ಹೋಗಿವೆ. ಇದರ ಪರಿಣಾಮ ಕಳೆದ ಬಾರಿ ಬಿದ್ದ ಮಳೆಗೆ ಸಾಕಷ್ಟು ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು.

ಸದ್ಯದಲ್ಲೇ ಮಳೆಗಾಲ ಆರಂಭವಾಗಲಿದೆ. ಬಹುತೇಕ ಕಡೆಗಳಲ್ಲಿ ರಾಜ ಕಾಲುವೆಗಳು ಒತ್ತುವರಿಯಾಗಿ ಮುಚ್ಚಿ ಹೋಗಿವೆ. ಸ್ವಲ್ಪ ಮಳೆ ಬಂದರೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿಬಿಟ್ಟಿದೆ. ಇದು ನಗರ ವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಕಾಲುವೆಗಳ ಸ್ವಚ್ಛಗೊಳಿಸಲಿ

ನಗರದ ಬಹುತೇಕ ಕಡೆಗಳಲ್ಲಿ ಚರಂಡಿಗಳು ಮಾತ್ರವಲ್ಲದೇ ರಾಜಕಾಲುವೆಗಳು ಸಹ ಮುಚ್ಚಿ ಹೋಗಿದ್ದು, ಕೆಲವೆಡೆಗಳಲ್ಲಿ ರಾಜ ಕಾಲುವೆಗಳನ್ನು ಬಲಾಡ್ಯರು ಮುಚ್ಚಿ ಒತ್ತುವರಿ ಮಾಡಿಕೊಂಡಿದ್ದಾರೆ. ಮಳೆಯಿಂದ ಸಂಭವಿಸುವ ಅನಾಹುತಗಳನ್ನು ತಪ್ಪಿಸಲು ನಗರದಲ್ಲಿ ಮುಚ್ಚಿ ಹೋಗಿರುವ ಚರಂಡಿ ಮತ್ತು ರಾಜ ಕಾಲುವೆಗಳ ಸ್ವಚ್ಛಗೊಳಿಸಬೇಕೆಂದು ಸ್ಥಳೀಯ ಜನತೆ ಅವಲತ್ತು ಕೊಂಡಿದ್ದಾರೆ.ರಾಜಕಾಲುವೆಗಳು, ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ಕೊಂಡಿರುವುದರಿಂದ ಕಳೆದ ಬಾರಿ ಅನಾಹುತಗಳು ಸಂಭವಿಸಿದ್ದವು. ರೈತರ ಬೆಳೆ ಹಾನಿ, ಮನೆಗಳು ನೆಲಕಚ್ಚಿದ್ದು, ಅನೇಕ ಕಡೆಗಳಲ್ಲಿ ಜಾನುವಾರುಗಳು ಮೃತಪಟ್ಟಿದ್ದವು. ನಗರದಲ್ಲಿ ಬಹುತೇಕ ಚರಂಡಿಗಳು ಮತ್ತು ರಾಜ ಕಾಲುವೆಗಳು ಉಕ್ಕಿ ರಸ್ತೆಯ ಮೇಲೆ ಹರಿದ ಪರಿಣಾಮ ಮೋರಿಯ ತ್ಯಾಜ್ಯ ರಸ್ತೆಯ ಮೇಲೆ ಹರಿದಿತ್ತು. ಉದ್ಯಾನವನಗಳು,ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡಿತ್ತು.

ಕೊತ್ತನೂರಿಗೆ ಜಲದಿಗ್ಬಂಧನ

ಕಳೆದ ಒಂದೂವರೆ ವರ್ಷದ ಹಿಂದೆ ಬಿದ್ದ ಅಕಾಲಿಕ ಮಳೆಗೆ ತಾಲೂಕಿನ ಕೊತ್ತನೂರು ಗ್ರಾಮ ಜಲ ದಿಗ್ಬಂಧನಕ್ಕೆ ಒಳಗಾಗಿ ಜನ ಜಾನುವಾರುಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು, ರಾತ್ರಿಯ ವೇಳೆಯೇ ಜೋರು ಮಳೆ ಯಾಗಿದ್ದರಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ನಗರ ಪ್ರದೇಶದ ಡಿವೈನ್ ಸಿಟಿ, ಎಪಿಎಂಸಿ, ವಾಪಸಂದ್ರ, ಟಿಜಿ ಟ್ಯಾಂಕ್, ಜಿಲ್ಲಾಸ್ಪತ್ರೆ ಮುಂಭಾಗ, ಪ್ರಶಾಂತ ನಗರ, ಎಂಜಿ ರಸ್ತೆ,ವಾಪಸಂದ್ರ,ಸಿಎಂಸಿ ಲೇಔಟ್, ಚಾಮರಾಜ ಪೇಟೆ ಸೇರಿದಂತೆ ಹಲವಡೆ ಸತತ ಮೂರು-ನಾಲ್ಕು ದಿನಗಳು ಜನತೆ ತೊಂದರೆಯ ಅನುಭವಿಸಿದ್ದರು. ಮಳೆ ಆರಂಭಕ್ಕೆ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೆ ಒತ್ತುವರಿಯಾಗಿರುವ, ನಿರ್ವಹಣೆ ಇಲ್ಲದ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.

ಕಾಲುವೆಗಳಲ್ಲಿ ಜೊಂಡು

ಕಂದವಾರ ಕೆರೆಯಿಂದ ಅಮಾನಿ ಗೋಪಾಲಕೃಷ್ಣ ಸ್ವಾಮಿ ಕೆರೆ ಮಾರ್ಗದ ರಾಜ ಕಾಲುವೆ ಅನೇಕ ಕಡೆ ಒತ್ತುವರಿಯಾಗಿರುವುದು ಮತ್ತು ರಾಷ್ಟ್ರೀಯ ಹೆದ್ದಾರಿ ಬಿ.ಬಿ. ರಸ್ತೆ ಶನಿಮಹಾತ್ಮ ಸ್ವಾಮಿ ದೇವಾಲಯದ ಪಕ್ಕ ರಾಜಕಾಲುವೆ ಒತ್ತುವರಿಯಾಗಿರುವುದು, ರಾಜ ಕಾಲುವೆಗಳಲ್ಲಿ ಜೊಂಡು ಗಿಡಗಳು ಬೆಳೆದು, ತ್ಯಾಜ್ಯ ತುಂಬಿದ್ದು , ಹಲವು ಪ್ರಭಾವಿಗಳು ರಾಜ ಕಾಲುವೆಯ ಜಾಗದಲ್ಲಿ ಕಟ್ಟಡ ಕಟ್ಟಿದ್ದಾರೆ. ಕೇವಲ ೧೦ ಅಡಿ ಸಹ ಅಗಲ ರಾಜ ಕಾಲವೇ ಇಲ್ಲದಿರುವುದು ನಗರದಲ್ಲಿ ಕಾಣಬಹುದಾಗಿದೆ.