ಸಾರಾಂಶ
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ, ಶ್ರದ್ಧಾಂಜಲಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಭಯೋತ್ಪಾದನೆ ಬೆಳೆಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವದ ಕೆಲವು ರಾಷ್ಟ್ರಗಳು ಹಣ ನೀಡುತ್ತಿದ್ದು ಇದನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಆಗ್ರಹಿಸಿದರು.
ಶನಿವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಶ್ಮೀರದಲ್ಲಿ ಉಗ್ರಗಾಮಿಗಳು 28 ಜನ ಹಿಂದೂಗಳಿಗೆ ಗುಂಡಿಕ್ಕಿ ಕೊಂದಿರುವುದನ್ನು ಜೆಡಿಎಸ್ ಖಂಡಿಸುತ್ತದೆ. ದೇಶದ ಸಮಗ್ರತೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಪಾಕಿಸ್ತಾನ ಜನಾಂಗ ದ್ವೇಷ ಮಾಡುತ್ತಿದೆ. ಈ ಪ್ರಕರಣ ಇಡೀ ಭಾರತ ದೇಶದ ಮೇಲೆ ಪರಿಣಾಮ ಬೀರಿದ್ದು ಮುಂದೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳನ್ನು ವಿರೋಧ ಪಕ್ಷ ಹಾಗೂ ಎಲ್ಲರೂ ಬೆಂಬಲಿಸಬೇಕು ಎಂದರು.ಉಗ್ರಗಾಮಿಗಳು ಏಕಾಏಕಿ ದಾಳಿ ಮಾಡುವ ಸಂಭವ ಇರುವುದಿಲ್ಲ. ಇದು ಪೂರ್ವ ನಿಯೋಜಿತ ಕೃತ್ಯ. ಕಾಶ್ಮೀರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಭದ್ರತೆ ಇರಬೇಕಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಕಡಿಮೆಯಾಗಿರುವುದರಿಂದ ಭದ್ರತೆಯೂ ಕಡಿಮೆಯಾಗಿರಬಹುದು. ಆದರೆ, ಈ ಉಗ್ರಗಾಮಿ ಗಳ ಕೃತ್ಯ ಕ್ರೂರವಾಗಿದೆ. ಪತ್ನಿ, ಮಕ್ಕಳ ಎದುರೇ ಗಂಡಸರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದರು.
ಕಾಶ್ಮೀರದಲ್ಲಿ ಉಗ್ರಗಾಮಿಗಳ ದಾಳಿ ಹಿಂದೆ ನಾಡಿನಲ್ಲಿರುವ ಕೆಲವರ ಸಹಕಾರ ಇರಬಹುದು. ಮೊದಲು ಅವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಕೇಂದ್ರ ಸರ್ಕಾರ ರಾಜ ತಾಂತ್ರಿಕ ಯುದ್ಧ ಶುರು ಮಾಡಿದ್ದು ಪಾಕಿಸ್ತಾನಕ್ಕೆ ಸಿಂದೂ ನದಿ ನೀರನ್ನು ನಿಲ್ಲಿಸಲಾಗಿದೆ. ಪಾಕಿಸ್ತಾನದ ಕೈವಾಡ ಇದೆ ಎಂಬುದಕ್ಕೆ ಅಲ್ಲಿನ ಸಚಿವ ರೊಬ್ಬರ ಹೇಳಿಕೆಯೇ ಸಾಕ್ಷಿ. ಪಾಕಿಸ್ತಾನಕ್ಕೆ ಮುಂದುವರಿದ ಕೆಲವು ರಾಷ್ಟ್ರಗಳು ನೆರವು ನೀಡುತ್ತಿದ್ದು ಇದನ್ನು ನಿಲ್ಲಿಸಬೇಕು. ಈಗ ಪಾಕಿಸ್ತಾನ ದಿವಾಳಿಯಾಗಿರುವ ದೇಶ. ಚೀನಾ ದೇಶ ಪಾಕಿಸ್ತಾನಕ್ಕೆ ನೆರವು ನೀಡುತ್ತಿದ್ದು ಇದನ್ನು ನಿಲ್ಲಿಸಬೇಕು.ಇಂತಹ ಅಮಾನೀಯ ಕೃತ್ಯವನ್ನು ತಾಲೂಕು ಜೆಡಿಸ್ ಪಕ್ಷ ಖಂಡಿಸುತ್ತದೆ ಎಂದರು.ನಂತರ ಉಗ್ರಗಾಮಿಗಳಿಂದ ಹತರಾದ 28 ಭಾರತೀಯರಿಗಾಗಿ 2 ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭ ದಲ್ಲಿ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಶಿವದಾಸ್, ನಗರ ಅಧ್ಯಕ್ಷ ಕೆ.ಟಿ.ಚಂದ್ರು, ಪ್ರಧಾನ ಕಾರ್ಯದರ್ಶಿ ಕೆ.ಜಿ.ವಿಜಯನ್, ತಾಲೂಕು ಉಪಾಧ್ಯಕ್ಷ ಎ.ಸಿ.ವರ್ಗೀಸ್, ಜೆಡಿಎಸ್ ಮುಖಂಡರಾದ ಎಂ.ಓ.ಜೋಯಿ, ಚಿನ್ನಯ್ಯಗೌಡರು, ಮೆಣಸೂರು ಜಾರ್ಜ್, ಶೆಟ್ಟಿಕೊಪ್ಪ ನವೀನ್ ಇದ್ದರು.