ಬುದ್ಧಿ ಸರಿಯಾಗಿದ್ದಾಗ ಆಯುಧ ಸಮರ್ಪಕ ಬಳಕೆ ಸಾಧ್ಯ: ಎಸ್‌ಪಿ

| Published : Jan 22 2024, 02:23 AM IST

ಬುದ್ಧಿ ಸರಿಯಾಗಿದ್ದಾಗ ಆಯುಧ ಸಮರ್ಪಕ ಬಳಕೆ ಸಾಧ್ಯ: ಎಸ್‌ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಬಂದೂಕಿನಂತಹ ಆಯುಧವನ್ನು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಸಬೇಕು. ಯಾವುದೇ ಆಯುಧಗಳಿಗೆ ಬುದ್ಧಿ ಇರುವುದಿಲ್ಲ. ಅದು ಯಾರ ಕೈಯಲ್ಲಿ ಇರುತ್ತದೆಯೋ ಅವರ ಬುದ್ಧಿ ಸರಿಯಾಗಿದ್ದಾಗ ಸಮರ್ಪಕ ಕೆಲಸಕ್ಕೆ ಆ ಆಯುಧ ಬಳಕೆಯಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಸಾಗರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ಆಯುಧಗಳಿಗೆ ಯಾವುದೇ ಬುದ್ಧಿ ಇರುವುದಿಲ್ಲ. ಅದು ಯಾರ ಕೈಯಲ್ಲಿ ಇರುತ್ತದೆಯೋ ಅವರ ಬುದ್ಧಿ ಸರಿಯಾಗಿದ್ದಾಗ ಸಮರ್ಪಕ ಕೆಲಸಕ್ಕೆ ಆ ಆಯುಧ ಬಳಕೆಯಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪಟ್ಟಣದಲ್ಲಿ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂದೂಕಿನಂತಹ ಆಯುಧವನ್ನು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಸಬೇಕು ಎಂದರು.

ಸಮಾಜದಲ್ಲಿ ಒಂದಷ್ಟು ಮಂದಿ ಕೆಟ್ಟವರಿರುವಂತೆ ಎಲ್ಲ ಇಲಾಖೆಯಲ್ಲೂ ತಪ್ಪು ಮಾಡುವವರಿರುತ್ತಾರೆ. ಅದರರ್ಥ ಇಲಾಖೆಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದಲ್ಲ. ಅವರ ಪ್ರಮಾಣ ಕಡಿಮೆ ಇರುತ್ತದೆ ಎನ್ನುವುದು ಹತ್ತಿರದಿಂದ ಬಲ್ಲವರಿಗೆ ಮಾತ್ರ ತಿಳಿದಿರುತ್ತದೆ. ಸಮಾಜದ ಎಲ್ಲರನ್ನೂ ಸಮಾಧಾನಿಸಲು ಪೊಲೀಸರಿಗೆ ಸಾಧ್ಯವಿಲ್ಲ. ಆದ್ದರಿಂದ ಕೆಲವರಿಗೆ ನಾವು ಸರಿಯಾಗಿ ಅರ್ಥವಾಗಿರುವುದಿಲ್ಲ. ಆದರೆ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವವರು ಇಲಾಖೆಯ ಬಗ್ಗೆ ಸದಭಿಪ್ರಾಯ ಬೆಳೆಸಿಕೊಳ್ಳುವುದಲ್ಲದೆ, ಸುತ್ತಲಿನವರಿಗೂ ಅದರ ಅರಿವು ಮೂಡಿಸಬೇಕು ಎಂದರು.

ಇಂತಹ ಶಿಬಿರದಲ್ಲಿ ಪೊಲೀಸರನ್ನು ಹೊರತುಪಡಿಸಿ, ಬಂದೂಕು ಬಳಸುವ ಕುರಿತು ಶಿಬಿರಾರ್ಥಿಗಳು ಸಾಕಷ್ಟು ಮಾಹಿತಿ ಪಡೆಯುತ್ತಾರೆ. ನಿಮ್ಮಂಥ ಶಿಬಿರಾರ್ಥಿಗಳನ್ನು ಇಲಾಖೆ ಅಗತ್ಯವಿದ್ದ ಸಂದರ್ಭದಲ್ಲಿ ಬಳಸಿಕೊಳ್ಳುತ್ತದೆ. ಮುಖ್ಯವಾಗಿ ಸಾಗರ ಭಾಗದಲ್ಲಿ ತರಬೇತಿ ಶಿಬಿರ ಆಯೋಜಿಸಬೇಕು ಎನ್ನುವ ಕೂಗು ಹೆಚ್ಚಿತ್ತು. ಮುಂದೆಯೂ ಇದರ ಬಗ್ಗೆ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಶಿಬಿರದ ಶೂಟಿಂಗ್ ಸ್ಪರ್ಧೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಗೌರವಿಸಲಾಯಿತು. ತರಬೇತಿ ನೀಡಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಡಿ.ಸುಭಾಷ್ಚಂದ್ರ, ಲಕ್ಷ್ಮೀಕಾಂತ್, ಪ್ರವೀಣಕುಮಾರ್, ಸಾಗರದ ನರಸಿಂಹಸ್ವಾಮಿ, ಚಂದ್ರಕಾಂತ್‌ ಅವರಿಗೆ ಶಿಬಿರಾರ್ಥಿಗಳು ಅಭಿನಂದಿಸಿದರು. ಶಿಬಿರಾರ್ಥಿಗಳಾದ ಸಂಜಯ್, ಅರುಣಕುಮಾರ್, ಅನಿಲ್‌ಕುಮಾರ್ ಬರದವಳ್ಳಿ, ಕಸ್ತೂರಿ ಸಾಗರ ಅನಿಸಿಕೆ ವ್ಯಕ್ತಪಡಿಸಿದರು.

ಸಾಗರದ ಪೊಲೀಸ್ ಉಪ ಅಧೀಕ್ಷಕ ಗೋಪಾಲಕೃಷ್ಣ ನಾಯಕ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಉಪ ಅಧೀಕ್ಷಕ ಕೃಷ್ಣಮೂರ್ತಿ, ಪೇಟೆ ಠಾಣೆ ವೃತ್ತ ನಿರೀಕ್ಷಕ ಸೀತಾರಾಮ್ ಹಾಜರಿದ್ದರು. ಚೇತನ್‌ರಾಜ್ ಕಣ್ಣೂರು ಸ್ವಾಗತಿಸಿದರು. ಅಶೋಕ್ ಬೇಳೂರು ವಂದಿಸಿದರು. ಕಾವ್ಯ ಶಿರವಾಳ ನಿರೂಪಿಸಿದರು. ಶಿಬಿರದಲ್ಲಿ 300ಕ್ಕೂ ಹೆಚ್ಚು ಮಂದಿ ಬಂದೂಕು ತರಬೇತಿ ಪಡೆದುಕೊಂಡರು.

- - - -21ಕೆ.ಎಸ್.ಎ.ಜಿ.2:

ಸಾಗರದಲ್ಲಿ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ಹೆಚ್ಚು ಅಂಕ ಪಡೆದವರನ್ನು ಜಿಲ್ಲಾ ಎಸ್‌ಪಿ ಮಿಥುನ್‌ಕುಮಾರ್ ಅಭಿನಂದಿಸಿದರು.