ನದಿ ಹರಿವಾಗ ಕಸ, ಕಡ್ಡಿ ಅಡ್ಡ ಬರುತ್ತದೆ: ಬಿ.ವೈ.ವಿಜಯೇಂದ್ರ

| Published : Mar 12 2025, 12:48 AM IST

ನದಿ ಹರಿವಾಗ ಕಸ, ಕಡ್ಡಿ ಅಡ್ಡ ಬರುತ್ತದೆ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯೇಂದ್ರಗೆ ಸಣ್ಣಪುಟ್ಟ ಸಮಸ್ಯೆಯಾದಾಗ ಜಗದ್ಗುರುಗಳು ನೊಂದುಕೊಳ್ಳುತ್ತಾರೆ. ನದಿ ಹರಿಯುವಾಗ ಕಲ್ಲು, ಮಣ್ಣು, ಕಸ ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ತನ್ನ ಜಾಗವನ್ನು ಸೇರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ವಿಜಯೇಂದ್ರಗೆ ಸಣ್ಣಪುಟ್ಟ ಸಮಸ್ಯೆಯಾದಾಗ ಜಗದ್ಗುರುಗಳು ನೊಂದುಕೊಳ್ಳುತ್ತಾರೆ. ನದಿ ಹರಿಯುವಾಗ ಕಲ್ಲು, ಮಣ್ಣು, ಕಸ ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ತನ್ನ ಜಾಗವನ್ನು ಸೇರುತ್ತದೆ. ಅದೇ ರೀತಿ ನನಗೆ ಯಾವುದೇ ಸಮಸ್ಯೆ ಬಂದರೂ ಗುರುಗಳ ಆಶೀರ್ವಾದದಿಂದ ಅದನ್ನು ಮೆಟ್ಟಿ ನಿಂತು, ಸಂಘಟನೆ ಮಾಡಿ ನನ್ನ ಗುರಿ ತಲುಪುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ನುಡಿದರು.

ಮಂಗಳವಾರ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಇಚ್ಛೆ ನನ್ನದು. ಈಗ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನದ ನಂತರ ಎಲ್ಲರೊಂದಿಗೆ ಕೂತು ಚರ್ಚೆ ನಡೆಸುತ್ತೇನೆ ಎಂದರು. ‘ನಾನು ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಯಡಿಯೂರಪ್ಪ ಅವರಿಗೆ ಸಮಸ್ಯೆ ಬಂದಾಗ ಅವರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದವರು ರಂಭಾಪುರಿ ಜಗದ್ಗುರುಗಳು. ಈಗ ನಾನು ಅವರ ಆಶೀರ್ವಾದ ಪಡೆಯಲು ಹೋದಾಗಲೂ ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಅದರಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಿ, ಪಕ್ಷ ಬಲಪಡಿಸುವುದು ನನ್ನ ಉದ್ದೇಶ. ಎಲ್ಲದಕ್ಕೂ ಒಂದು ತಾರ್ಕಿಕ ಅಂತ್ಯ ಎಂಬುದಿದೆ’ ಎಂದರು.

ವೀರಶೈವ-ಲಿಂಗಾಯತ ಸಮಾವೇಶಕ್ಕೆ ಪರೋಕ್ಷ ಬೇಸರ ವ್ಯಕ್ತಪಡಿಸಿದ ವಿಜಯೇಂದ್ರ, ‘ಯಾರೇ ಆಗಲಿ ಜಾತಿ ಸಮಾವೇಶ, ಒಂದು ಸಮಾಜದ ಸಭೆ ನಡೆಸುವುದು ಬಿಜೆಪಿಗೆ ಲಾಭ ತರುವುದಿಲ್ಲ. ಈ ಹಿಂದೆಯೇ ಜಾತಿ ಸಮ್ಮೇಳನ ಮಾಡಬಾರದು ಎಂದು ನಾನು ಸೂಚಿಸಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಬಿಜೆಪಿ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದರು.