ಕನ್ನಡಪ್ರಭ ವಾರ್ತೆ ವಿಜಯಪುರ

ಒಕ್ಕಲುತನದ ಬಗ್ಗೆ ಹಸಿವು ಬೇಕು. ಹಸಿವು ಇದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ ಎಂದು ಕೃಷಿ ಜಂಟಿನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ತಾಲೂಕಿನ ಹಿಟ್ಟಿನಹಳ್ಳಿಯಲ್ಲಿರುವ ​ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಪ್ರತಿ ಎಕರೆಗೆ 100 ಟನ್ ಕಬ್ಬು ಬೆಳೆಯುವುದು ಹೇಗೆ? ಎಂಬ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಣ್ಣು ರೈತನ ಕಣ್ಣು ಹಾಗಾಗಿ ರೈತರು ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಬೇಕು ಎಂದ ಅವರು, ಮಣ್ಣಿನ ಪೋಷಕಾಂಶಗಳ ಹೇರಳವಾಗಿರುವಂತೆ ನೋಡಿಕೊಳ್ಳಬೇಕು. ಕಬ್ಬಿನ ಹೆಚ್ಚಿನ ಇಳುವರಿಗಾಗಿ ನಮ್ಮದು ಕಬ್ಬು ಬೆಳೆಯಲು ನಮ್ಮಲ್ಲಿನ ಮಣ್ಣು ಬಹು ಸೂಕ್ತವಾಗಿದೆ. ಮಣ್ಣಿನ ಸತ್ವ ನೋಡಿಕೊಂಡು ಕಬ್ಬಿನ ಸಾಲಿನಿಂದ ಸಾಲಿಗೆ ಇರುವ ಅಗಲ ಖಚಿತಗೊಳಿಸಿಕೊಳ್ಳಬೇಕು. ಕಬ್ಬಿಗೆ ಅವಶ್ಯಕತೆ ಇರುವಷ್ಟು ನೀರು ನೀಡಬೇಕು. ಕಬ್ಬಿನ ಇಳುವರಿಯಲ್ಲಿ ನೀರಿನ ಪಾತ್ರ ಬಹು ಮುಖ್ಯವಾಗಿದೆ. ಹನಿನೀರಾವರಿ ಅಳವಡಿಸಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬೇಕು. ರೈತರಿಗಾಗಿ ತಾಂತ್ರಿಕ ಕಾರ್ಯಾಗಾರ ನಿಜವಾದ ಹಸಿವು ರೈತರಲ್ಲಿದೆ. ಈ ಕಾರ್ಯಾಗಾರಕ್ಕೆ ಬಹಳಷ್ಟು ಜನ ರೈತರು ಆಗಮಿಸಿ, ಇಲ್ಲಿನ ವಿಷಯ ತಜ್ಞರು ಮಂಡಿಸಿದ ವಿಷಯಗಳು ತಮ್ಮ ಕಬ್ಬು ಕೃಷಿಯಲ್ಲಿ ಬಳಕೆ ಮಾಡಿಕೊಂಡು ಕೃಷಿಯಲ್ಲಿ ಯಶಸ್ಸು ಕಾಣಬೇಕು ಎಂದರು.

ಪ್ರಗತಿಪರ ರೈತರಾದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಬಾಳಪ್ಪ ಬೆಳಕೋಡ, ಇಂಡಿ ತಾಲೂಕಿನ ಶ್ರೀಮಂತ ಇಂಡಿ ಹಾಗೂ ಗೊಳಸಂಗಿಯ ನಾರಾಯಣ ಸಾಲುಂಕೆ ಅವರು ಪ್ರತಿ ಎಕರೆಗೆ 100 ಟನ್ ಕಬ್ಬು ಬೆಳೆಯುವುದು ಹೇಗೆ ಎಂಬ ವಿಷಯದ ಕುರಿತು ತಮ್ಮ ಅನುಭವ ಹಂಚಿಕೊಂಡರು.


ಕೃಷಿ ಮಹಾವಿದ್ಯಾಲಯದ ಮುಖ್ಯ ಕೀಟ ತಜ್ಞ ಎ.ಪಿ.ಬಿರಾದಾರ ಅವರು ಕಬ್ಬು ಬೆಳೆಯಲ್ಲಿ ಕೀಟ ನಿರ್ವಹಣೆ ಕುರಿತು ರೈತರೊಂದಿಗೆ ವಿಷಯ ವಿನಿಮಯ ಮಾಡಿಕೊಂಡರು. ಕಬ್ಬು ಬೆಳೆಗಾರರು ನಾಲ್ಕು ಪ್ರಮುಖ ಸಮಸ್ಯೆಗಳ ಬಗ್ಗೆ ಕೃಷಿ ತಜ್ಞರ ಎಚ್ಚರಿಕೆ ನೀಡಿದರು. ಕಬ್ಬು ಬೆಳೆಗಾರರನ್ನು ಕಾಡುತ್ತಿರುವ 4 ನಾಲ್ಕು ಪ್ರಮುಖ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಅವರು, ಕಬ್ಬಿನ ಇಳುವರಿ ಕುಸಿತಕ್ಕೆ ಕಾರಣವಾಗುತ್ತಿರುವ ಪ್ರಮುಖ ಕೀಟ ಹಾಗೂ ರೋಗಬಾಧೆಗಳ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದರು.

​ಸವಳು ಜವಳು ಸಮಸ್ಯೆ, ಬಿಳಿ ಕಸ (ಉರಮಲ್ಲಿಗೆ), ​ಗೊಣ್ಣೆ ಹುಳು, ​ಕಾಡಿಗೆ ರೋಗಗಳ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಕಳೆ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ಸುಳಿ ಕೊರೆಯುವ ಕೀಟ, ಬಿಳಿ ಉಣ್ಣಿ, ಬಿಳಿ ನೋಣ, ಗೊಣ್ಣೆ ಹುಳ ಕೀಟ ಬಾಧೆಯ ನಿರ್ವಹಣೆ ಬಗ್ಗೆ ಮಾತನಾಡಿದರು.

ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ಎಸ್.ಎಸ್.ನೂಲಿ ಅವರು ಕಬ್ಬಿನಲ್ಲಿ ಮಣ್ಣು ಪೋಷಕಾಂಶ ಹಾಗೂ ನೀರು ನಿರ್ವಹಣೆ ಕುರಿತು ಮಾತನಾಡಿದರು. ಕಾರ್ಯಾಗಾರದಲ್ಲಿ ಕೃಷಿ ಉಪನಿರ್ದೇಶಕ ಶರಣಗೌಡ ಪಾಟೀಲ, ಚಂದ್ರಕಾಂತ ಪವಾರ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಜಾನಮಟ್ಟಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ, ಎಸ್.ಬಿ.ಜಗ್ಗಿನವರ, ಪ್ರಗತಿಪರ ರೈತರಾದ ಶಿವಪ್ಪಗೌಡ ಬಿರಾದಾರ, ಶ್ರೀಮಂತ ಇಂಡಿ, ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳು, ರೈತರು ಉಪಸ್ಥಿತರಿದ್ದರು.

ಬೆಳೆಯಲ್ಲಿ ವೈಜ್ಞಾನಿಕ ಜ್ಞಾನದ ಕೊರತೆಯಿಂದ ಇಳುವರಿಯಲ್ಲಿ ಕೊರತೆ ಕಾಣಬಹುದಾಗಿದೆ. ಇದು ವಾಣಿಜ್ಯ ಬೆಳೆಯೂ ಹೌದು. ಇದು ವಾರ್ಷಿಕ ಬೆಳೆಯೂ ಆಗಿದೆ. ಪೂರಕ ವಾತಾವರಣ ಒದಗಿಸಿಕೊಟ್ಟು ಬೆಳೆಯಲ್ಲಿ ಇಳುವರಿ ಹೆಚ್ಚಿಸಿಕೊಳ್ಳಬಹುದಾಗಿದೆ. ಆಸಕ್ತಿ ಹೊಂದಿ, ಜ್ಞಾನಾರ್ಜನೆ ಹಳೆ ಅನುಭವಗಳೊಂದಿಗೆ ಹೊಸತನ ಮೈಗೂಡಿಸಿಕೊಂಡು ಕೃಷಿಯಲ್ಲಿ ಖುಷಿ ಕಾಣಬೇಕು. ಕೊಯ್ಲೋತ್ತರ ನಿರ್ವಹಣೆ ವೈಜ್ಞಾನಿಕವಾಗಿ ಮಾಡಬೇಕು.

-ಶಿವನಗೌಡ ಪಾಟೀಲ, ಜಂಟಿನಿರ್ದೇಶಕ, ಕೃಷಿ ಇಲಾಖೆ