ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಾಲ್ಕು ವರ್ಷಗಳಿಂದ ನಿರ್ಮಾಣವಾಗಿ ನಿಂತಿರುವ ವೀರರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆಯನ್ನು ಇದುವರೆಗೂ ಅನಾವರಣ ಮಾಡಲು ಸರ್ಕಾರ ಮುಂದಾಗಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯ ಪ್ರತಿಮೆ ಅನಾವರಣ ಮಾಡುವಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿ ತೋರಿಸುತ್ತಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದರು.ನಗರದ ಕಸಾಪ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಎಂದರೆ ರಾಜ್ಯ ಸರ್ಕಾರಕ್ಕೆ ಅಲರ್ಜಿ. ಉತ್ತರ ಕರ್ನಾಟಕದ ಪ್ರತಿ ವಿಚಾರದಲ್ಲೂ ತಾತ್ಸಾರ ತೋರುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೇ ಅಶ್ವಾರೂಢ ಚನ್ನಮ್ಮನ ಪ್ರತಿಮೆ ಅನಾವರಣಕ್ಕೆ ಮೀನಾಮೇಷ ತೋರುತ್ತಿರುವುದು ಎಂದರು.ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಸಮಾಜದ ಮುಖಂಡರು ಅದರ ಬಗ್ಗೆ ಕಾಳಜಿ ವಹಿಸಬೇಕಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆಗೆ ಸರ್ಕಾರ ಹಣ ಕೊಟ್ಟಿಲ್ಲ. ಸಮಾಜದವರೇ ದೇಣಿಗೆ ಸಂಗ್ರಹಿಸಿ ಚನ್ನಮ್ಮನ ಮೂರ್ತಿ ತಯಾರು ಮಾಡಿದ್ದಾರೆ. ಶರಣರು, ಮಹಾತ್ಮರು, ಸ್ವಾತಂತ್ರ್ಯ ಹೋರಾಟಗಾರರು ಯಾವತ್ತಿಗೂ ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ. ಅಂತಹವರೆಲ್ಲ ಜಾತಿ ಮೀರಿ ಬೆಳೆದವರು. ಚನ್ನಮ್ಮನ ಬಗ್ಗೆ ಮಾತನಾಡುವ ಮಠಾಧೀಶರು ಕೇಂದ್ರ ಬಸ್ ನಿಲ್ದಾಣದಲ್ಲಿ ಉದ್ಘಾಟನೆಯಾಗದ ಮೂರ್ತಿಯ ಬಗ್ಗೆ ಗಮನ ಹರಿಸಬೇಕು. ತಕ್ಷಣವೇ ಸರ್ಕಾರ ಪ್ರತಿಮೆ ಅನಾವರಣಕ್ಕೆ ಮುಂದಾಗಬೇಕು, ಸರ್ಕಾರ ಮಾಡದಿದ್ದರೆ ಹಲವು ಮಠಾಧೀಶರ ನೇತ್ರತ್ವದಲ್ಲಿಯೇ ಚನ್ನಮ್ಮನ ಮೂರ್ತಿ ಉದ್ಘಾಟನೆ ಮಾಡಬೇಕು ಎಂದು ಒತ್ತಾಯಿಸಿದರು.ಶೀಘ್ರದಲ್ಲಿಯೇ ಸಮಾಜದ ಎಲ್ಲ ವರ್ಗಗಳು ಸೇರಿ ಚರ್ಚಿಸಿ ಮೂರ್ತಿ ಅನಾವರಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಚನ್ನಮ್ಮನ ಮೂರ್ತಿ ಅನಾವರಣವಾಗದಿರುವ ವಿಚಾರದ ಕುರಿತು ಜಿಲ್ಲಾಡಳಿತ ಸಹ ಸರ್ಕಾರಕ್ಕೆ ಪತ್ರ ಬರೆಯಬೇಕು. ಈ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದರೆ ಅನಿವಾರ್ಯವಾಗಿ ನಾವು ಹೋರಾಟ ಮಾಡಬೇಕಾಗುತ್ತದೆ. ಚನ್ನಮ್ಮಳ ಜಯಂತಿ ದಿನ ಕೇವಲ ಯಾರೋ ಒಬ್ಬರು ಅಧಿಕಾರಿ ಬಂದು ಕಾರ್ಯಕ್ರಮ ನಡೆಸಿಕೊಡುತ್ತಾರೆ. ಆದರೆ ಇನ್ನುಮುಂದೆ ಚನ್ನಮ್ಮನ ಜಯಂತಿಯಲ್ಲಿ ಜಿಲ್ಲಾಧಿಕಾರಿಗಳು, ನಗರ ಶಾಸಕರು, ಉಸ್ತುವಾರಿ ಸಚಿವರು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.ರಾಣಿ ಚನ್ನಮ್ಮಳನ್ನು ಪಂಚಮಸಾಲಿ ಸಮಾಜಕ್ಕೆ ಸೀಮಿತಗೊಳಿಸುವುದು ಸರಿ ಅಲ್ಲ. ಎಲ್ಲ ಸಮುದಾಯಕ್ಕೂ ರಾಣಿ ಚನ್ನಮ್ಮ ಅತ್ಯವಶ್ಯಕ. ನಾಡಿನ ಮಠಾಧೀಶರು ಕೂಡ ಪುತ್ಥಳಿ ಅನಾವರಣದ ಬಗ್ಗೆ ಧ್ವನಿ ಎತ್ತದಿರುವುದು ದೌರ್ಭಾಗ್ಯ, ಮೂರ್ತಿ ಅನಾವರಣಕ್ಕೆ ಜಾತಿ ಹಾಗೂ ರಾಜಕಾರಣ ಬೇಡ. ಯಾವುದಕ್ಕೆಲ್ಲ ಮಠಾಧೀಶರು ಹೋರಾಟ ಮಾಡುತ್ತಾರೆ. ಆದರೆ ರಾಣಿ ಚನ್ನಮ್ಮಳ ಪುತ್ಥಳಿ ಅನಾವರಣ ಮಾಡುವುದಕ್ಕೆ ಧ್ವನಿ ಎತ್ತುತ್ತಿಲ್ಲ ಏಕೆ? ಎಂದು ಅರವಿಂದ ಕುಲಕರ್ಣಿ ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಮಹೇಶ ಯಂಕಂಚಿ, ಸುರೇಶ ಬಿರಾದಾರ, ಸಂಜು ಸೀಳಿನ, ಸಂದೀಪ ಇಂಡಿ ಉಪಸ್ಥಿತರಿದ್ದರು.ಶೀಘ್ರದಲ್ಲಿಯೇ ಸಮಾಜದ ಎಲ್ಲ ವರ್ಗಗಳು ಸೇರಿ ಚರ್ಚಿಸಿ ಮೂರ್ತಿ ಅನಾವರಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಚನ್ನಮ್ಮನ ಮೂರ್ತಿ ಅನಾವರಣವಾಗದಿರುವ ವಿಚಾರದ ಕುರಿತು ಜಿಲ್ಲಾಡಳಿತ ಸಹ ಸರ್ಕಾರಕ್ಕೆ ಪತ್ರ ಬರೆಯಬೇಕು. ಈ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದರೆ ಅನಿವಾರ್ಯವಾಗಿ ನಾವು ಹೋರಾಟ ಮಾಡಬೇಕಾಗುತ್ತದೆ.
ಅರವಿಂದ ಕುಲಕರ್ಣಿ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))