ಕರ್ನಾಟಕ ಹೈಕೋರ್ಟ್ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನಿರ್ದೇಶನಗಳ ಪ್ರಕಾರ, ಪಶುವೈದ್ಯಾಧಿಕಾರಿಗಳನ್ನು ತಾಪಂ ಇಒಗಳನ್ನಾಗಿ ನೇಮಿಸಬಾರದು ಎಂಬ ನಿಯಮವಿದೆ.

ಶಿವಕುಮಾರ ಕುಷ್ಟಗಿ

ಗದಗ: ಗದಗ ತಾಪಂ ಇಒ ಡಾ. ಎಚ್.ಎಸ್. ಜಿನಗಿ ತಮ್ಮ ಮೂಲ ಇಲಾಖೆಯಾದ ಪಶುಪಾಲನಾ ಇಲಾಖೆಗೆ ಹೋಗೋದು ಯಾವಾಗ?

ಜಲ್ಲೆಯಲ್ಲಿ ಇಂಥದೊಂದು ಪ್ರಶ್ನೆ ಮತ್ತೆ ಬಲವಾಗಿ ಕೇಳಿ ಬರುತ್ತಿದೆ. ಕಾರಣ, ಗದಗ ಪಾಲಿಕ್ಲಿನಿಕ್‌ ಮುಖ್ಯ ಪಶುವೈದ್ಯಾಧಿಕಾರಿ ಆಗಿರುವ ಡಾ. ಎಚ್.ಎಸ್. ಜಿನಗಿ ಅವರು ಗದಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಹುದ್ದೆಯಲ್ಲೇ ಹೆಚ್ಚು ಅವಧಿ ಕಾರ್ಯ ನಿರ್ವಹಿಸಿದ್ದಾರೆ.

ಗದಗ ತಾಪಂ ಇಒ ಹುದ್ದೆ ಎನ್ನುವುದು ಗದಗ ಜಿಲ್ಲೆ ಮಾತ್ರವಲ್ಲ, ರಾಜ್ಯಾದ್ಯಂತ ಈಗ ಮತ್ತೊಮ್ಮೆ ಚರ್ಚೆಯ ವಸ್ತುವಾಗಿದೆ. ಈ ಹಿಂದೆ ಕೂಡಾ ಪಶು ವೈದ್ಯರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ (ಮೂವರು) ತಾಪಂ ಇಒಗಳನ್ನಾಗಿ ಗದಗ ಜಿಲ್ಲಾಡಳಿತ ನೇಮಕ ಮಾಡಿತ್ತು. ಇದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರರು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದರು.

ರಾಜ್ಯ ಸರ್ಕಾರದ ಸೂಚನೆಯಂತೆ ಮತ್ತೆ ಅವರನ್ನು ಮೂಲ ಇಲಾಖೆಗೆ ಬಿಡುಗಡೆ ಕೂಡಾ ಮಾಡಲಾಗಿತ್ತು. ಆದರೆ ಅದೇ ಅಧಿಕಾರಿಯನ್ನು, ಅದೇ ಸ್ಥಳಕ್ಕೆ ಮತ್ತೆ ತಾಪಂ ಇಒ ಆಗಿ ನೇಮಕ ಮಾಡಿ ಜಿಲ್ಲಾಡಳಿತ ತಮ್ಮ ಸರ್ಕಾರದ ಆದೇಶವನ್ನು ತಾನೇ ಉಲ್ಲಂಘಿಸಿತ್ತು. ಈಗ ಮತ್ತೊಮ್ಮೆ ಅದನ್ನು ರದ್ದು ಮಾಡುವಂತೆ ಮೂಲ ಇಲಾಖೆ ಹೇಳಿದ್ದರೂ ಗದಗ ಜಿಲ್ಲಾಡಳಿತ ಸುಮ್ಮನಿದೆ.

ಸಿಬ್ಬಂದಿ ಕೊರತೆ: ಪ್ರಸ್ತುತ ಗದಗ ತಾಪಂ ಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಎಚ್.ಎಸ್. ಜಿನಗಿ ಅವರನ್ನು ನಿಯಮಗಳ ಆಧಾರದಲ್ಲಿ ತಕ್ಷಣವೇ ಮೂಲ ಇಲಾಖೆಯಲ್ಲಿ ಕೆಲಸ ಮಾಡಲು ಕಳುಹಿಸಬೇಕು ಎಂದು ರವಿ ವಗ್ಗನವರ ಎನ್ನುವ ಯುವ ರೈತ ಹೋರಾಟ ಮಾಡುತ್ತಿದ್ದಾರೆ.

ಗದಗ ಡಿಸಿ ಮತ್ತು ಜಿಪಂ ಸಿಇಒ ಹುದ್ದೆಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ಅವರಿಗೆ ಮೇಲ್‌ ಮೂಲಕ ಆದೇಶ ಬಂದರೆ ಸಾಕಾಗುವುದಿಲ್ಲವಂತೆ, ನನ್ನ ಕೈಯಲ್ಲಿ ಆರ್ಡರ್ ಕಾಪಿ ಬರಬೇಕು, ಇಲ್ಲವೇ ನೀವು ಕೋರ್ಟ್‌ನಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಮಹತ್ವದ ಆದೇಶ: ರೈತ ಮುಖಂಡರ ಮನವಿ ಮತ್ತು ಸರ್ಕಾರದ ಆದೇಶಗಳ ಆಧಾರದಲ್ಲಿ ಪಶುಪಾಲನಾ ಇಲಾಖೆಯು ಜು. 10ರಂದು ಪತ್ರದ ಸಂಖ್ಯೆ: ಆಪಸಂ: ಸಿಬ್ಬಂದಿ-ಎ3:ಇ-78/2026 ಮೂಲಕ ನೀಡಿದ ಆದೇಶದಲ್ಲಿ ಡಾ. ಎಚ್.ಎಸ್. ಜಿನಗಿ ಅವರಿಗೆ ನೀಡಲಾಗಿದ್ದ ಗದಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ.

ಇದಕ್ಕೆ ಮುಖ್ಯ ಕಾರಣ ಕರ್ನಾಟಕ ಹೈಕೋರ್ಟ್ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನಿರ್ದೇಶನಗಳ ಪ್ರಕಾರ, ಪಶುವೈದ್ಯಾಧಿಕಾರಿಗಳನ್ನು ತಾಪಂ ಇಒಗಳನ್ನಾಗಿ ನೇಮಿಸಬಾರದು ಎಂಬ ನಿಯಮವಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಇವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿತ್ತು. ಈ ಹೆಚ್ಚುವರಿ ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸಲು ಗದಗ ಜಿಪಂ ಸಿಇಒಗೆ ಆಯುಕ್ತರು ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದಾರೆ.

ನಾನು ಹಲವಾರು ತಿಂಗಳುಗಳಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಆದರೆ ಜಿಲ್ಲಾಡಳಿತ ಮಾತ್ರ ರಾಜಕೀಯ ಒತ್ತಡಕ್ಕೆ ಮಣಿದು ಅವರನ್ನೇ ಪದೇ ಪದೇ ತಾಪಂ ಇಒ ಆಗಿ ನೇಮಕ ಮಾಡುತ್ತಿದೆ. ಅವರನ್ನು ಮೂಲ ಇಲಾಖೆಗೆ ಬಿಡುಗಡೆ ಮಾಡಬೇಕು ಎಂದು ಜು. 10ರಂದೇ ಆದೇಶ ಮಾಡಿದ್ದರೂ ಗದಗ ಜಿಪಂ- ಸಿಇಒ ಅವರು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆ ತೀವ್ರವಾಗಿದೆ. ಕೂಡಲೇ ಅವರನ್ನು ಮೂಲ ಇಲಾಖೆಗೆ ಬಿಡುಗಡೆ ಮಾಡಬೇಕು ಎಂದು ಪ್ರಕರಣದಲ್ಲಿ ಹೋರಾಟ ಮಾಡುತ್ತಿರುವ ವ್ಯಕ್ತಿ ರವಿ ವಗ್ಗನವರ ತಿಳಿಸಿದರು.