ಸಾರಾಂಶ
ಮುಂಡಗೋಡ ತಾಲೂಕಿನ ಸನವಳ್ಳಿ, ಕಾತೂರ, ಮರಗಡಿ, ಓಣಿಕೇರಿ, ಹನುಮಾಪುರ, ನಾಗನೂರ ಸೇರಿದಂತೆ ವಿವಿಧೆಡೆ ಅಕ್ರಮ ಇಟ್ಟಿಗೆ ಭಟ್ಟಿಗಳು ತಲೆ ಎತ್ತಿವೆ.
ಸಂತೋಷ ದೈವಜ್ಞಮುಂಡಗೋಡ: ಬೇಸಿಗೆ ಆರಂಭಕ್ಕೂ ಮುನ್ನ ಬಹುತೇಕ ಕೆರೆ, ಜಲಾಶಯಗಳ ನೀರು ಬತ್ತುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೆರೆ, ಕಟ್ಟೆಗಳ ನೀರು ಬಳಸಿ ಎಲ್ಲೆಂದರಲ್ಲಿ ಅಕ್ರಮವಾಗಿ ಇಟ್ಟಿಗೆ ಗಣಿಗಾರಿಕೆ ನಡೆಸಲಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಸನವಳ್ಳಿ, ಕಾತೂರ, ಮರಗಡಿ, ಓಣಿಕೇರಿ, ಹನುಮಾಪುರ, ನಾಗನೂರ ಸೇರಿದಂತೆ ವಿವಿಧೆಡೆ ಅಕ್ರಮ ಇಟ್ಟಿಗೆ ಭಟ್ಟಿಗಳು ತಲೆ ಎತ್ತಿವೆ.ಈ ಹಿಂದೆ ಕೆಲವೇ ಕೆಲವೇ ಜನ ಇಟ್ಟಿಗೆ ತಯಾರಿಕೆಯಲ್ಲಿ ತೊಡಗುತ್ತಿದ್ದರು. ಹೆಚ್ಚಿನ ಲಾಭ ಗಳಿಕೆಯ ಆಮಿಷದಿಂದ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಕೃಷಿ ಭೂಮಿಗಳಲ್ಲಿ ಇಟ್ಟಿಗೆ ಭಟ್ಟಿಗಳು ತಲೆ ಎತ್ತಿವೆ. ಹಲವರು ಇದನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ. ಕೆಲವೆಡೆ ಕೃಷಿ ಚಟುವಟಿಕೆ ನಡೆಸಬೇಕಾದ ಭೂಮಿಯಲ್ಲಿ ಅಕ್ರಮವಾಗಿ ಇಟ್ಟಿಗೆ ತಯಾರಿಸುವ ಕಸುಬು ಆರಂಭಿಸಿದ್ದಾರೆ.
ಇಟ್ಟಿಗೆ ತಯಾರಿಸಲು ಕೃಷಿ ಭೂಮಿಯ ಮಣ್ಣು ಬಳಸುತ್ತಿರುವುದರಿಂದ ಜಮೀನಿನ ಫಲವತ್ತತೆ ಕೂಡ ಕಡಿಮೆಯಾಗುತ್ತಿದೆ. ತಾಲೂಕಿನಲ್ಲಿ ಬಹುತೇಕರು ಬಿನ್ ಶೇತ್ಕಿ ಆಗದ ಕೃಷಿ ಭೂಮಿಯಲ್ಲಿಯೇ ಅನಧಿಕೃತವಾಗಿ ಇಟ್ಟಿಗೆ ತಯಾರಿಸುವಲ್ಲಿ ನಿರತರಾಗಿದ್ದಾರೆ. ಇಟ್ಟಿಗೆ ಸುಡಲು ಗದ್ದೆಯ ಅಂಚಿನಲ್ಲಿರುವ ಅರಣ್ಯದ ಕಟ್ಟಿಗೆ ಬಳಕೆ ಮಾಡಲಾಗುತ್ತಿದ್ದು, ಅರಣ್ಯ ನಾಶವಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇದಕ್ಕೆ ಲಗಾಮು ಹಾಕುವವರು ಯಾರು ಇಲ್ಲವೇ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರದ್ದಾಗಿದೆ. ಸರ್ಕಾರದ ಆದೇಶ ಮತ್ತು ನಿಯಮದ ಪ್ರಕಾರ ಬಿನ್ ಶೇತ್ಕಿ ಭೂಮಿಯಲ್ಲಿ ಮಾತ್ರ ಇಟ್ಟಿಗೆ ತಯಾರಿಸಲು ಅವಕಾಶವಿದೆ. ಅನಧಿಕೃತವಾಗಿ ಇಟ್ಟಿಗೆ ತಯಾರಿಸುವುದನ್ನು ಸ್ಥಗಿತ ಮಾಡುವಂತೆ ಈ ಹಿಂದೆ ಅಧಿಕಾರಿಗಳು ಇಟ್ಟಿಗೆ ತಯಾರಕರಿಗೆ ಸೂಚಿಸಿ ಸ್ಥಗಿತಗೊಳಿಸಲು ಪ್ರಯತ್ನಿಸಿದ್ದರು. ಆದರೆ ಮತ್ತೆ ತಾಲೂಕಿನಾದ್ಯಂತ ಅವ್ಯಾಹತವಾಗಿ ಇಟ್ಟಿಗೆ ತಯಾರಿಕೆ ದಂಧೆ ಎಗ್ಗಿಲ್ಲದೇ ಸಾಗಿದೆ. ಕೆರೆ ನೀರು ಬಳಕೆ: ಬೇಸಿಗೆ ಪ್ರಾರಂಭವಾಗುತ್ತಿದ್ದು, ಪ್ರಖರ ಬಿಸಿಲು ಬೀಳುತ್ತಿರುವುರಿಂದ ಗ್ರಾಮೀಣ ಭಾಗದ ಬಹುತೇಕ ಕೆರೆ ಜಲಾಶಯಗಳಲ್ಲಿ ಬತ್ತುತ್ತಿವೆ. ಆದರೆ ಇಟ್ಟಿಗೆ ತಯಾರಕರು ಕೆರೆಯ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೆರೆ- ಕಟ್ಟೆಗಳಲ್ಲಿ ನೀರು ಖಾಲಿಯಾಗಿ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೂ ಕುಡಿಯಲು ನೀರು ಸಿಗದಂತಾಗುವ ಪರಿಸ್ಥಿತಿ ಸನ್ನಿಹಿತವಾಗಿದೆ. ಇದರಿಂದ ಅಕ್ರಮ ಚಟುವಟಿಗೆ ನೀರು ಉಪಯೋಗಿಸುವುದನ್ನು ತಡೆಯಬೇಕು ಎಂದು ಕೆರೆ ಬಳಕೆದಾರರು ಒತ್ತಾಯಿಸುತ್ತಿದ್ದಾರೆ. ಅಕ್ರಮ ವಿದ್ಯುತ್ ಬಳಕೆ: ಕೃಷಿ ಚಟುವಟಿಕೆಗಾಗಿ ಬಳಸಲು ಪಡೆಯಲಾಗಿರುವ ವಿದ್ಯುತ್ ಸಂಪರ್ಕದ ಬೋರ್‌ವೆಲ್ ನೀರನ್ನು ಅಕ್ರಮವಾಗಿ ಇಟ್ಟಿಗೆ ತಯಾರಿಸಲು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆಲ್ಲ ಬ್ರೇಕ್ ಬೀಳುವುವುದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ. ಇಷ್ಟೆಲ್ಲ ಅನಧಿಕೃತ ಅವಾಂತರಗಳು ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೆ ಮೂಕಪ್ರೇಕ್ಷಕರಂತೆ ವರ್ತಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.ಕಾನೂನು ಕ್ರಮ: ಇಟ್ಟಿಗೆ ತಯಾರಿಕಾ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿ ನೋಟಿಸ್ ನೀಡಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂಡಗೋಡ ತಹಸೀಲ್ದಾರ್‌ಗೆ ಸೂಚಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ ತಿಳಿಸಿದರು.