ಬೆಳ್ತಂಗಡಿ ತಾಲೂಕಿನಲ್ಲಿ ಕನ್ನಡದ ತೇರು ಎಳೆಯುವುದು ಯಾವಾಗ ?

| Published : Feb 16 2025, 01:49 AM IST

ಬೆಳ್ತಂಗಡಿ ತಾಲೂಕಿನಲ್ಲಿ ಕನ್ನಡದ ತೇರು ಎಳೆಯುವುದು ಯಾವಾಗ ?
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ ತಾಲೂಕುಗಳಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಪನ್ನಗೊಂಡಿವೆ. ಆದರೆ ಕಸಾಪದ ಬೆಳ್ತಂಗಡಿ ತಾಲೂಕು ಘಟಕ ತಾಲೂಕಿನಲ್ಲಿ ಕನ್ನಡದ ತೇರು ಎಳೆಯುವುದು ಯಾವಾಗ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.

ದೀಪಕ ಅಳದಂಗಡಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ ತಾಲೂಕುಗಳಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಪನ್ನಗೊಂಡಿವೆ. ಆದರೆ ಕಸಾಪದ ಬೆಳ್ತಂಗಡಿ ತಾಲೂಕು ಘಟಕ ತಾಲೂಕಿನಲ್ಲಿ ಕನ್ನಡದ ತೇರು ಎಳೆಯುವುದು ಯಾವಾಗ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.

ಪ್ರತಿ ವರ್ಷ ನವೆಂಬರ್‌ನಿಂದ ಫೆಬ್ರವರಿಯೊಳಗೆ ತಾಲೂಕಿನ ಒಂದಿಲ್ಲೊಂದು ಕಡೆ ಸಮ್ಮೇಳನ ನಡೆಯುತ್ತಾ ಬರುತ್ತಿದೆ. ಉಜಿರೆ, ಬೆಳ್ತಂಗಡಿ, ವೇಣೂರು, ಮಡಂತ್ಯಾರು, ಕೊಲ್ಲಿ, ಮುಂಡಾಜೆ, ನಿಡ್ಲೆ, ಗುರುವಾಯನಕೆರೆ, ಸೌತಡ್ಕ, ಇಳಂತಿಲ, ಶಿಶಿಲ, ಬೆಳಾಲು, ಅಳದಂಗಡಿ, ಪೆರಿಂಜೆ ಮೊದಲಾದೆಡೆ ಸಮ್ಮೇಳನಗಳು ಅತ್ಯಂತ ವ್ಯವಸ್ಥಿತವಾಗಿ ನಡೆದಿವೆ. ಕಳೆದ ಬಾರಿ ಬೆಳ್ತಂಗಡಿಯ ಹಳೇಪೇಟೆ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸಮ್ಮೇಳನ ನಡೆದಿತ್ತು. ಆದರೆ ಈ ಬಾರಿ ಯಾಕೋ ತಾಲೂಕಿನಲ್ಲಿ ಕನ್ನಡದ ತೇರನ್ನು ಎಳೆಯಲು ಕಸಾಪದ ತಾಲೂಕು ಘಟಕ ಮನಸ್ಸು ಮಾಡಿಲ್ಲದಿರುವುದು ಕನ್ನಡಿಗರಿಗೆ ಬೇಸರ ತಂದಿದೆ.

ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನ.23ರಂದು, ಕಡಬದಲ್ಲಿ ನ.30 ರಂದು, ಬಂಟ್ವಾಳದಲ್ಲಿ ಜ.4ರಂದು, ಮೂಲ್ಕಿ ತಾಲೂಕಿನಲ್ಲಿ ಫೆ.8ರಂದು ನಡೆದಿದೆ. ಉಳ್ಳಾಲ ತಾಲೂಕಿನ ಮಂಗಳೂರು ವಿ.ವಿ.ಯಲ್ಲಿ ಫೆ.21 ಮತ್ತು 22ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಪುತ್ತೂರಿನಲ್ಲಿ ಕ್ರಿಯಾಶೀಲ ಅಧ್ಯಕ್ಷರೇ ಇದ್ದಾರೆ. ಅವರು ಗ್ರಾಮ ಸಾಹಿತ್ಯದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ತಾಲೂಕು ಸಮ್ಮೇಳನ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಕದ ಜಿಲ್ಲೆಯ ಹೆಬ್ರಿಯ ಶಿವಪುರದಲ್ಲಿ ಫೆ.16ರಂದು ಸಮ್ಮೇಳನ ನಡೆಯಲಿದೆ.

ಸರ್ಕಾರದ ಅನುದಾನ ಬರುವುದಿಲ್ಲ ಎಂಬ ಮಾತು ಇದ್ದರೂ ಅನ್ಯ ತಾಲೂಕಿನಲ್ಲಿ ಸಮ್ಮೇಳನಗಳು ವ್ಯವಸ್ಥಿತವಾಗಿ ನಡೆದಿರುವುದು ಗಮನಿಸಬೇಕಾದ ಸಂಗತಿ. ಬೆಳ್ತಂಗಡಿ ತಾಲೂಕಿನಲ್ಲಿ ಕನ್ನಡದ ಮನಸ್ಸುಗಳು ಒಂದಾಗಿ ಸಮ್ಮೇಳನ ನಡೆಸಲು ಸಶಕ್ತವಾಗಿವೆ, ಆದರೆ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಆಗಿಲ್ಲ. ಒಂದೆಡೆ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿರುವ ಕಸಾಪ ಅಧ್ಯಕ್ಷರು, ಕಳೆದ ಬಾರಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿಯೇ ಸಮ್ಮೇಳನ ಸಂಘಟಿಸಿದ್ದರು. ಆದರೆ ಸಂಘಟಿತ ಪ್ರಯತ್ನದಿಂದ ತಾಲೂಕಿನ ಬೇರೆ ಊರಿನಲ್ಲಿ ಕೇವಲ ಒಂದು ದಿನದ ಸಮ್ಮೇಳನ ಅವರಿಂದ ನಡೆಸಲಾಗದಿರುವುದು ತಾಲೂಕಿನ ಕನ್ನಡ ಪ್ರೇಮಿಗಳು ಹುಬ್ಬೇರಿಸುವಂತೆ ಮಾಡಿದೆ. ಇನ್ನೊಂದೆಡೆ ಜಿಲ್ಲಾಧ್ಯಕ್ಷರು ಬೆಳ್ತಂಗಡಿ ತಾಲೂಕಿನವರೇ ಆಗಿದ್ದರೂ ತವರು ತಾಲೂಕಿನಲ್ಲೇ ಸಮ್ಮೇಳನ ನಡೆಸಲು ಪರದಾಡುವಂತಾಗಿರುವುದು ವಿಚಿತ್ರವಾದರೂ ಸತ್ಯ.

-----

ಇಷ್ಟರೊಳಗೆ ಸಮ್ಮೇಳನ ನಡೆಸಬೇಕಿತ್ತು. ಜವಾಬ್ದಾರಿ ತೆಗೆದುಕೊಂಡು, ಕೆಲಸ ಮಾಡುವ ಸಾಮರ್ಥ್ಯದವರು ಯಾರಾದರು ಇದ್ದರೆ ಸಮ್ಮೇಳನ ನಡೆಸಬಹುದು. ಇನ್ನು ಕಾಲೇಜು, ಹೈಸ್ಕೂಲು ಮಕ್ಕಳಿಗೆ ಪರೀಕ್ಷೆಗಳು ಇರುವುದರಿಂದ ಸಮ್ಮೇಳನ ನಡೆಸುವುದು ಕಷ್ಟ ಸಾಧ್ಯ. ಹೀಗಾಗಿ ಈ ಬಾರಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲ.

। ಯದುಪತಿ ಗೌಡ, ಅಧ್ಯಕ್ಷರು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್

------

ತಾಲೂಕಿನಲ್ಲಿ ಸಮ್ಮೇಳನ ನಡೆಸಲಾಗದಿರುವುದು ಬೇಸರದ ಸಂಗತಿ. ಈ ಬಾರಿ ನಾರಾವಿಯಲ್ಲಿ ಸಮ್ಮೇಳನ ನಡೆಸುವುದು ಎಂಬ ಚಿಂತನೆ ಇತ್ತು. ಆದರೆ ಇದುವರೆಗೆ ಸಾಧ್ಯವಾಗಿಲ್ಲ. ನನಗೆ ಜಿಲ್ಲೆಯ ಜವಾಬ್ದಾರಿ ಇರುವುದರಿಂದ ತಾಲೂಕಿನ ಕಡೆ ಗಮನ ಕಡಿಮೆಯಾಯಿತು.

। ಎಂ.ಪಿ. ಶ್ರೀನಾಥ್, ಅಧ್ಯಕ್ಷ ದ.ಕ.ಜಿಲ್ಲಾ ಕ.ಸಾ.ಪ.