ಲಕ್ಷ್ಮೇಶ್ವರ ಪಟ್ಟಣದ ಜನಸಂಖ್ಯೆಯು 50 ಸಾವಿರ ಮೇಲ್ಪಟ್ಟಿದ್ದರೂ ಸರ್ಕಾರ ನಗರಸಭೆಯಾಗಿ ಘೋಷಣೆ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯು ಕಳೆದ ಹಲವು ವರ್ಷಗಳಿಂದ ನಗರಸಭೆಯಾಗಿ ಮೇಲ್ದರ್ಜೆಗೇರಬೇಕಾದ ಎಲ್ಲ ಅರ್ಹತೆ ಹೊಂದಿದೆ. ಆದರೂ ಯಾಕೆ ನಗರಸಭೆಯಾಗಿ ಮೇಲ್ದರ್ಜೆಗೇರಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಲಕ್ಷ್ಮೇಶ್ವರ ಪಟ್ಟಣವು ಗದಗ- ಬಂಕಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪಾಳಾ- ಬಾದಾಮಿ ಹೆದ್ದಾರಿಯಯಲ್ಲಿ ಬರುವ ಪ್ರಮುಖ ಪಟ್ಟಣವಾಗಿದೆ. ಅಲ್ಲದೆ ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಹೊಮ್ಮುತ್ತಿದೆ. ಲಕ್ಷ್ಮೇಶ್ವರ ಪಟ್ಟಣಕ್ಕೆ ನಿತ್ಯವೂ ಅಂದಾಜು 20 ಸಾವಿರ ಜನ ಶಿರಹಟ್ಟಿ, ಸವಣೂರು, ಕುಂದಗೋಳ, ಮುಂಡರಗಿ, ಗದಗ ಹಾಗೂ ಹಾವೇರಿ ತಾಲೂಕಿನ ರೈತರು ಹಾಗೂ ಸಾರ್ವಜನಿಕರು ವ್ಯಾಪಾರ ವಹಿವಾಟಿಗಾಗಿ ಆಗಮಿಸುತ್ತಾರೆ.
ಲಕ್ಷ್ಮೇಶ್ವರ ಪಟ್ಟಣದ ಜನಸಂಖ್ಯೆಯು 50 ಸಾವಿರ ಮೇಲ್ಪಟ್ಟಿದ್ದರೂ ಸರ್ಕಾರ ನಗರಸಭೆಯಾಗಿ ಘೋಷಣೆ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.ಪಟ್ಟಣಕ್ಕೆ ಪ್ರತಿನಿತ್ಯ 15- 20 ಸಾವಿರ ಜನರು ವ್ಯಾಪಾರ ಮತ್ತು ವಹಿವಾಟು ನಡೆಸಲು ಆಗಮಿಸುತ್ತಾರೆ. ಲಕ್ಷ್ಮೇಶ್ವರ ಪಟ್ಟಣಕ್ಕೆ ಹೊಂದಿಕೊಂಡಿರುವ ಅಡರಕಟ್ಟಿ, ರಾಮಗೇರಿ. ಒಡೆಯರ ಮಲ್ಲಾಪುರ, ಗುಲಗಂಜಿಕೊಪ್ಪ ಗ್ರಾಮಗಳತ್ತ ಚಾಚಿಕೊಂಡು ನಗರಸಭೆಯಾಗುವ ಎಲ್ಲ ಅರ್ಹತೆ ಹೊಂದಿದೆ.
ಲಕ್ಷ್ಮೇಶ್ವರ ಪಟ್ಟಣವು 2011ರ ಜನಸಂಖ್ಯೆ ಅನುಗುಣವಾಗಿ 40 ಸಾವಿರ ಇತ್ತು. ಆದರೆ ಈಗ 50 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇಲ್ಲಿ ವಾಸಿಸುತ್ತಿದ್ದಾರೆ. ಲಕ್ಷ್ಮೇಶ್ವರ ಪಟ್ಟಣವು ಐತಿಹಾಸಿಕವಾಗಿ ಗುರುತಿಸಿಕೊಂಡಿದೆ. ಪಟ್ಟಣವನ್ನು ಪುಲಿಗೆರೆ ಎಂದು ಕರೆಯುತ್ತಿದ್ದರು. ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯ. ಜೈನರ ಶಂಖ ಬಸದಿ, ಮುಸ್ಲಿಮರ ಪವಿತ್ರ ಕೇತ್ರ ದೂದನಾನಾ ದರ್ಗಾ ಸೇರಿದಂತೆ ತ್ರಿಕೋಟಿ ಲಿಂಗ ಸ್ಥಾಪನೆಯಾಗುತ್ತಿರುವ ಮುಕ್ತಿಮಂದಿರ ಹೀಗೆ ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಿದೆ.ಕುಡಿಯುವ ನೀರಿನ ಸಮಸ್ಯೆ: ಪಟ್ಟಣದ ಜನಸಂಖ್ಯೆ ಏರುತ್ತಿರುವುದರಿಂದ ಕುಡಿಯುವ ನೀರು ಸರಬರಾಜು ಸಮಸ್ಯೆಯಾಗಿ ಕಾಡುತ್ತಿದೆ. ಕಳೆದ 25 ವರ್ಷಗಳ ಹಿಂದೆ ತಯಾರಿಸಿದ ಯೋಜನೆಯು ಈಗಿನ ಜನಸಂಖ್ಯೆಗೆ ಅನುಗುಣವಾಗಿ ಇರದೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗಿ ಕಾಡುತ್ತಿದೆ. ಅದಕ್ಕಾಗಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಪೌರ ಕಾರ್ಮಿಕರ ಕೊರತೆ: ಪಟ್ಟಣವು ಪುರಸಭೆಯಾಗಿರುವುದರಿಂದ ಪೌರಕಾರ್ಮಿಕರ ಸಂಖ್ಯೆಯ ಕೊರತೆ ಕಾಡುತ್ತಿದೆ. ಈಗ ಕೇವಲ 28 ಪೌರ ಕಾರ್ಮಿಕರು ಇರುವುದರಿಂದ ಸ್ವಚ್ಛತೆ ಸಮಸ್ಯೆಯಾಗಿ ಕಾಡುತ್ತಿದೆ. ಇದರಿಂದ ಪ್ರತಿನಿತ್ಯ ಪೌರ ಕಾರ್ಮಿಕರು ಒತ್ತಡದಲ್ಲಿ ಕಾಲ ಕಳೆಯುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ಅನುದಾನದ ಕೊರತೆ: ಪಟ್ಟಣದ ಪುರಸಭೆಗೆ ಸಿಗುವ ಅನುದಾನ ಕಡಿಮೆಯಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಪಟ್ಟಣದಲ್ಲಿ ನೂತನವಾಗಿ ತಲೆ ಎತ್ತಿರುವ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆಗೆ ಸರ್ಕಾರ ನೀಡುತ್ತಿರುವ ಅನುದಾನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಆದ್ದರಿಂದ ಪಟ್ಟಣದ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವ ಎಲ್ಲ ಲಕ್ಷಣಗಳು ಇವೆ ಎಂದು ಶಕ್ತಿ ಕತ್ತಿ ಅಭಿಪ್ರಾಯ ಪಟ್ಟಿದ್ದಾರೆ.