ಸೇತುವೆ ಗುಂಡಿ ಮುಚ್ಚುವುದು ಯಾವಾಗ?

| Published : Oct 16 2025, 02:00 AM IST

ಸಾರಾಂಶ

ತಾಲೂಕಿನಿಂದ ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ದೇವರಕೊಟ್ಟದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಅರ್ಧ ಭಾಗದಲ್ಲಿ ಗುಂಡಿಗಳದೇ ದರ್ಬಾರು. ವಾಹನ ಸವಾರರು ಸೇತುವೆ ಮೇಲಿನ ಗುಂಡಿಗಳ ತಪ್ಪಿಸಲು ಹೋಗಿ ಅಪಾಯ ತಂದುಕೊಳ್ಳುವ ಮುನ್ನ ಗುಂಡಿ ಮುಚ್ಚಿಸಿ ಎಂದು ಪ್ರಯಾಣಿಕರು ಕಳೆದ ಒಂದು ವರ್ಷದಿಂದ ಕೇಳುತ್ತಿದ್ದಾರೆ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನಿಂದ ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ದೇವರಕೊಟ್ಟದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಅರ್ಧ ಭಾಗದಲ್ಲಿ ಗುಂಡಿಗಳದೇ ದರ್ಬಾರು. ವಾಹನ ಸವಾರರು ಸೇತುವೆ ಮೇಲಿನ ಗುಂಡಿಗಳ ತಪ್ಪಿಸಲು ಹೋಗಿ ಅಪಾಯ ತಂದುಕೊಳ್ಳುವ ಮುನ್ನ ಗುಂಡಿ ಮುಚ್ಚಿಸಿ ಎಂದು ಪ್ರಯಾಣಿಕರು ಕಳೆದ ಒಂದು ವರ್ಷದಿಂದ ಕೇಳುತ್ತಿದ್ದಾರೆ.

ಮಳೆ ಬಂದಾಗಲಂತೂ ಸೇತುವೆ ಮೇಲಿನ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಗುಂಡಿಯ ಆಳ ಗೊತ್ತಾಗದೆ ಗುಂಡಿಯೊಳಕ್ಕೆ ವಾಹನ ಇಳಿಸಿ ಸವಾರರು, ಪ್ರಯಾಣಿಕರು ಪರದಾಡುತ್ತಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸೇತುವೆಯ ಒಂದು ಮಗ್ಗುಲಲ್ಲಿ ಮಣ್ಣು ಜರುಗಿ ಆತಂಕ ಸೃಷ್ಟಿಸಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದಷ್ಟು ಸಲಹೆ ಸೂಚನೆ ನೀಡಿ ಹೋಗಿದ್ದರು.

ಆಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೇತುವೆಯ ಮಣ್ಣು ಜರುಗಿದ ಭಾಗಕ್ಕೆ ಮತ್ತಷ್ಟು ಮಣ್ಣು ಹರಡಿಸಿ ರಸ್ತೆಯ ನೀರು ಸೇತುವೆ ಮೇಲೆ ಹರಿಯದಂತೆ ಮಾಡಿದ್ದರು. ಮಳೆ ಮುಗಿದ ಮೇಲೆ ಮಣ್ಣು ಕುಸಿದ ಜಾಗದಲ್ಲಿ ಕಾಂಕ್ರಿಟ್ ಗೋಡೆ ಕಟ್ಟಿ ಮತ್ತಷ್ಟು ಮಣ್ಣು ಸುರಿದು ರಿವಿಟ್ಮೆಂಟ್ ಕಟ್ಟಲಾಗುವುದು ಎಂದಿದ್ದರು. ಅದರಂತೆ ರಿವಿಟ್ಮೆಂಟ್ ಕಟ್ಟಿ ಒಂದಷ್ಟು ಮಣ್ಣು ಹರಡಲಾಗಿತ್ತು. ಆದರೆ ಸೇತುವೆ ಮೇಲಿನ ಗುಂಡಿಗಳು ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡು ವಾಹನ ಸವಾರರನ್ನು ಆತಂಕದಿಂದ ಪ್ರಯಾಣಿಸುವಂತೆ ಮಾಡುತ್ತಲೇ ಇವೆ.

ಸುಮಾರು 86 ವರ್ಷಗಳ ಹಿಂದೆ 1939ರಲ್ಲಿ ಮೈಸೂರು ಮಹಾರಾಜರು ಕಟ್ಟಿಸಿದ್ದ ಈ ಸೇತುವೆ ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ. ಈ ಸೇತುವೆ ಮೇಲೆ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಈ ರಸ್ತೆಯು ಶಿರಾ, ಅಮರಾಪುರ, ಪಾವಗಡ, ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅಂತರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಗುಂಡಿ ಮುಚ್ಚುತ್ತಿಲ್ಲ. ಸೇತುವೆಗೆ ಅಂಟಿಕೊಂಡು ಬೆಳೆಯುವ ಗಿಡಮರ ತೆಗೆಯುತ್ತಿಲ್ಲ, ಬಣ್ಣ ಹೊಡೆದಿಲ್ಲ. ಸೇತುವೆ ಮೇಲಿನ ಗುಂಡಿಗಳ ಆಳ ಅರಿಯದ ಸವಾರರು ಕಡಿಮೆಯೆಂದರು ವಾರಕ್ಕೆ ಒಬ್ಬರಾದರೂ ಬೀಳುತ್ತಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ದಿನನಿತ್ಯ ಸಾವಿರಾರು ಬೈಕ್, ಕಾರು, ಬಸ್ಸುಗಳು ಈ ಸೇತುವೆ ಮೇಲಿಂದಲೇ ಸಂಚರಿಸುತ್ತವೆ. ರಾತ್ರಿ ಹೊತ್ತು ಒಂದೇ ಒಂದು ದೀಪದ ಬೆಳಕಿಲ್ಲ. ವಾಹನಗಳ ಬೆಳಕಲ್ಲೇ ಗುಂಡಿ ತಪ್ಪಿಸಿಕೊಂಡು ಸೇತುವೆ ದಾಟುವ ಪರಿಸ್ಥಿತಿ ಇದೆ. ವಿವಿ ಸಾಗರ ಜಲಾಶಯ 2022ರಲ್ಲಿ ಎರಡನೇ ಬಾರಿ ಕೋಡಿ ಬಿದ್ದಾಗಿನಿಂದಲೂ ವೇದಾವತಿ ನದಿ ತುಂಬಿ ಹರಿಯುತ್ತಿದೆ.

ಆನಂತರ ಜಲಾಶಯ ಮೂರನೇ ಬಾರಿ ಕೋಡಿ ಬಿದ್ದು ಇದೀಗ ನಾಲ್ಕನೇ ಬಾರಿ ಕೋಡಿ ಬೀಳುವ ಸನಿಹದಲ್ಲಿದೆ. ಮತ್ತಷ್ಟು ನೀರು ವೇದಾವತಿ ನದಿಯಲ್ಲಿ ಹರಿಯುವ ಎಲ್ಲಾ ಮುನ್ಸೂಚನೆಗಳು ಇದ್ದು, ಸ್ವತಃ ತಹಸೀಲ್ದಾರ್ ರವರೇ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳದಲ್ಲಿರಲು ಸೂಚನೆ ನೀಡಿದ್ದಾರೆ. ನಿರಂತರವಾಗಿ ನದಿಯಲ್ಲಿ ನೀರು ಹರಿಯುತ್ತಿದ್ದು ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು ಓಡಾಡುವುದರಿಂದ ಆದಷ್ಟು ಬೇಗ ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚಿಸುವ ಜೊತೆಗೆ, ತಜ್ಞರನ್ನು ಕರೆಸಿ ಅದರ ಗುಣಮಟ್ಟ ಮತ್ತು ಸಾಮರ್ಥ್ಯ ಪರೀಕ್ಷಿಸಬೇಕಾಗಿದೆ.

ರಸ್ತೆಯ ದುರಸ್ತಿಗೆ ಟೆಂಡರ್‌:

ಶೀಘ್ರ ಕೆಲಸ ಆರಂಭ ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣಮೂರ್ತಿ ಪ್ರತಿಕ್ರಿಯೆ ನೀಡಿ, ಕಳೆದ ವರ್ಷ ಸೇತುವೆ ಒಂದು ಮಗ್ಗುಲಿನ ಮಣ್ಣು ಕುಸಿದಾಗ ರಿವಿಟ್ಮೆಂಟ್ ಕಟ್ಟಲಾಗಿತ್ತು. ಇದೀಗ ಮಾರಿಕಣಿವೆಯಿಂದ ಧರ್ಮಪುರದವರೆಗೆ ರಸ್ತೆಯ ಪ್ಯಾಚ್ ವರ್ಕ್ ಟೆಂಡರ್ ಕರೆದಿದ್ದು ಎಜೆನ್ಸಿ ಫಿಕ್ಸ್ ಆಗಿ ಕೆಲಸ ಶುರುವಾಗಲಿದೆ. ಆಗ ಸೇತುವೆ ಮೇಲಿನ ಗುಂಡಿ ಮುಚ್ಚಲಾಗುತ್ತದೆ. ಸೇತುವೆ ಮೇಲಿನ ನೀರು ಹೋಗುವ ಹೋಲ್‌ಗಳು ಮಣ್ಣು ತುಂಬಿ ಮುಚ್ಚಿ ಹೋಗಿದ್ದು, ಅವುಗಳನ್ನೆಲ್ಲಾ ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಮಾಡಲಾಗುವುದು ಎಂದರು.