ಸಾರಾಂಶ
ವಿಶೇಷ ವರದಿ
ಮುಳಗುಂದ: ಪಟ್ಟಣದಿಂದ ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 64 ಪಾಳಾ- ಬಾದಾಮಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ರಸ್ತೆ ಸ್ಥಿತಿ ಕಂಡು ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.ಕಳೆದ ಒಂದು ದಶಕದ ಹಿಂದೆ ಅಭಿವೃದ್ಧಿಪಡಿಸಿದ್ದ ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿ ಹೋಗಿದೆ. ರಸ್ತೆ ಮಾರ್ಗವಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರತಿ ನಿತ್ಯ ಸಾಕಷ್ಟು ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ತೆರಳುತ್ತವೆ. ಆದರೂ ಈ ರಸ್ತೆ ಅಭಿವೃದ್ಧಿಪಡಿಸದೇ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ರಸ್ತೆಯುದ್ದಕ್ಕೂ ಮೊಣಕಾಲುದ್ದದ ಗುಂಡಿಗಳು ಬಿದ್ದು, ರಸ್ತೆಯೇ ಇಲ್ಲದಂತಾಗಿದೆ. ದುರಸ್ತಿಗಾಗಿ ಸಾರ್ವಜನಿಕರು ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಾರ್ಗವಾಗಿ ಸಂಚರಿಸುವ ಬೈಕ್ ಸವಾರರು ಒಂದು ಸಾಹಸ ಮಾಡಿದಂತೆಯೇ. ಹೀಗೆ ಸಾಗುವಾಗ ಸ್ವಲ್ಪ ಆಯ ತಪ್ಪಿ ಬಿದ್ದರೂ ಕೈ ಕಾಲು ಮುರಿದುಕೊಳ್ಳುವುದಂತೂ ಗ್ಯಾರಂಟಿ. ಸರ್ಕಾರ ಜನತೆಗೆ ನೀಡಿದ ಇದು ಒಂದು ರೀತಿಯ ಗ್ಯಾರಂಟಿ ಯೋಜನೆಯೇ ಎಂದು ಪ್ರಶ್ನಿಸುತ್ತಾರೆ ಸಾರ್ವಜನಿಕರು.ಮಾರ್ಗ ಬದಲಾವಣೆ: ರಸ್ತೆಯೇ ದುಸ್ಥಿತಿ ಕಂಡು ಗದಗದಿಂದ ಲಕ್ಷ್ಮೇಶ್ವರಕ್ಕೆ ತೆರಳುವ ಕೆಲ ವಾಹನಗಳು ನಾಗಾವಿ, ಶಿರಹಟ್ಟಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಹೋಗುವಂತಾಗಿದ್ದು, ಕಿಮೀ ಜಾಸ್ತಿಯಾದರೂ ಪರವಾಗಿಲ್ಲ, ಜೀವಕ್ಕೆ ಏನೂ ಹಾನಿಯಾಗದೆ ಸುರಕ್ಷಿತವಾಗಿ ಪ್ರಯಾಣಿಸಿದರೆ ಸಾಕು ಎನ್ನುವಂತಾಗಿದೆ.
ದಶಕಗಳ ಹಿಂದೆಯೇ ಅಭಿವೃದ್ಧಿಪಡಿಸಿದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹಾಳಾಗಿದೆ. ಇಷ್ಟೊಂದು ನಿರ್ಲಕ್ಷ್ಯಕ್ಕೊಳಗಾದ ರಸ್ತೆ ನಮ್ಮ ರಾಜ್ಯದಲ್ಲಿಯೇ ಇಲ್ಲ ಎನ್ನಬಹುದು. ರಸ್ತೆಯ ಗುಂಡಿಗಳನ್ನು ನೋಡಲಾಗದ ಜನ ಇಲ್ಲಿನ ಗುಂಡಿಗಳಿಗೆ ಹಳೆಯ ಬಟ್ಟೆ ಹಾಗೂ ದಿಂಬುಗಳನ್ನು ಎಸೆದು ಸರ್ಕಾರದ ಕಾರ್ಯವೈಖರಿ ವಿರುದ್ಧ ಅಣಕು ಪ್ರದರ್ಶನ ಮಾಡಿದ್ದಾರೆ.ಪ್ರಯೋಜನವಾಗಿಲ್ಲ: ರಸ್ತೆ ಕಿತ್ತು ವರ್ಷಗಳೇ ಕಳೆದರೂ ಈವರೆಗೂ ದುರಸ್ತಿಯಾಗುತ್ತಿಲ್ಲ. ಅರ್ಧ ಗಂಟೆಯಲ್ಲಿ ಗದಗ ನಗರಕ್ಕೆ ತಲುಪುವವರು ಗಂಟೆಗಟ್ಟಲೇ ಸಮಯ ವ್ಯಯಿಸಬೇಕಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ರಸ್ತೆ ಅಭಿವೃದ್ಧಿಪಡಿಸಿ, ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಗೊಜನೂರು ಗ್ರಾಮಸ್ಥರಾದ ಸಿದ್ದಪ್ಪ ಸವಣೂರ ತಿಳಿಸಿದರು.
ಪ್ರಸ್ತಾವನೆ: ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಂದಿಲ್ಲ. ಗುಂಡಿ ತುಂಬುವ ನಿರ್ವಹಣೆಗೆ ಮಾತ್ರ ಟೆಂಡರ್ ಕರೆದು, ಗುತ್ತಿಗೆ ನೀಡಿದೆ. ಆದಷ್ಟು ಬೇಗನೆ ಕಾಮಗಾರಿ ಕೈಗೊಳ್ಳಲು ತಿಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಉಮೇಶ ನಾಯಕ ತಿಳಿಸಿದರು.