ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷರ ಆಯ್ಕೆ ಯಾವಾಗ?

| Published : Oct 25 2025, 01:00 AM IST

ಸಾರಾಂಶ

ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಅವರು ಕಳೆದ ಆ. 23ರಂದು ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇದುವರೆಗೂ ಅಧ್ಯಕ್ಷರ ಆಯ್ಕೆಯಾಗುತ್ತಿಲ್ಲ.

ಶರಣು ಸೊಲಗಿ

ಮುಂಡರಗಿ: ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ ಸ್ಥಾನ ಖಾಲಿಯಾಗಿ ಎರಡು ತಿಂಗಳು ಕಳೆದರೂ ನೂತನ ಅಧ್ಯಕ್ಷರ ಆಯ್ಕೆ ಆಗಿಲ್ಲ. ಇನ್ನು ಅಧ್ಯಕ್ಷರ ಆಯ್ಕೆ ಯಾವಾಗ ? ಎನ್ನುವುದು ಕಾರ್ಯಕರ್ತರ ಪ್ರಶ್ನೆಯಾಗಿದೆ.ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಅವರು ಕಳೆದ ಆ. 23ರಂದು ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇದುವರೆಗೂ ಅಧ್ಯಕ್ಷರ ಆಯ್ಕೆಯಾಗುತ್ತಿಲ್ಲ. ಪಕ್ಷದ ಸಭೆ, ಸಮಾರಂಭಗಳಿಗಾಗಲಿ, ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಲಿ, ಪಕ್ಷದ ಇತರೆ ಚಟುವಟಿಕೆಗಳಿಗಾಗಲಿ ಈ ಭಾಗದಲ್ಲಿನ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಸರಿಯಾಗಿ ವಿಷಯ ತಿಳಿಯುತ್ತಿಲ್ಲ ಎನ್ನುವ ಮಾತುಗಳು ಬಹಿರಂಗವಾಗಿ ಕೇಳಿ ಬರುತ್ತಿವೆ.

ಅಧ್ಯಕ್ಷ ಸ್ಥಾನ ಖಾಲಿ ಇರುವುದರಿಂದ ಪಕ್ಷದ ಸಂಘಟನೆ ಹಾಗೂ ಇತರೆ ಚಟುವಟಿಕೆಗಳ ಕುರಿತು ಕಾರ್ಯಕರ್ತರಿಗೆ ವಿಷಯ ತಲುಪಿಸುವುದು, ಯಾವುದೇ ಸಭೆ ಸಮಾರಂಭಗಳನ್ನು ಸಂಘಟಿಸಿ, ಅದರ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು ಎನ್ನುವುದು ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ. ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷರ ಆಯ್ಕೆ ಕುರಿತು ಜಿಲ್ಲೆಯ ಮಾಜಿ ಸಚಿವರಾಲಿ, ಶಾಸಕರಾಗಲಿ, ಪಕ್ಷದ ಹಿರಿಯ ಮುಖಂಡರಾಗಲಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ.ಇದರಿಂದ ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತದೆ. ಆದ್ದರಿಂದ ತಾಲೂಕಿನಲ್ಲಿ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ತಕ್ಷಣವೇ ಅಧ್ಯಕ್ಷರ ಆಯ್ಕೆಯಾಗಬೇಕು ಎನ್ನುವುದು ಕಾರ್ಯಕರ್ತರ ಆಗ್ರಹ. ಈ ಕುರಿತು ಬಿಜೆಪಿ ವರಿಷ್ಠರು ಇನ್ನಷ್ಟು ವಿಳಂಬ ಮಾಡದೇ ತಕ್ಷಣವೇ ನೂತನ ಅಧ್ಯಕ್ಷರ ಆಯ್ಕೆಗೆ ಮುಂದಾಗುತ್ತಾರಾ? ಕಾದು ನೋಡಬೇಕಿದೆ.

ಆಯ್ಕೆ ಪ್ರಕ್ರಿಯೆ: ಬಿಜೆಪಿ ಮಂಡಲ ಅಧ್ಯಕ್ಷರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆ ಮುಂಡರಗಿ ಬಿಜೆಪಿ ಮಂಡಲದ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದು, ಇದೀಗ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈಗಾಗಲೇ ಚುನಾವಣಾಧಿಕಾರಿ ನೇಮಿಸಿದ್ದು, ಇದುವರೆಗೂ ಜಿಲ್ಲೆಯ 8 ಮಂಡಲಗಳ ಅಧ್ಯಕ್ಷರ ಆಯ್ಕೆ ಮುಕ್ತಾಯಗೊಂಡಿದೆ. ಶೀಘ್ರದಲ್ಲಿಯೇ ಜಿಲ್ಲಾಮಟ್ಟದಲ್ಲಿ ಕೋರ್ ಕಮಿಟಿ ಸಭೆ ಕರೆದು ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಿ ಮುಂದಿನ 8- 10 ದಿನಗಳಲ್ಲಿ ಮುಂಡರಗಿ ಮಂಡಲಕ್ಕೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ತಿಳಿಸಿದರು.