ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯಾವಾಗ ?

| Published : Jan 03 2025, 12:30 AM IST

ಸಾರಾಂಶ

ದೂರುದಾರರ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್‌ ಮುಂದಿನ ವಿಚಾರಣೆವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ ನೀಡಿತ್ತು

ಶಿವಕುಮಾರ ಕುಷ್ಟಗಿ ಗದಗ

ಗದಗ-ಬೆಟಗೇರಿ ನಗರಸಭೆಗೆ ಚುನಾಯಿತ ಆಡಳಿತ ಮಂಡಳಿ ಅಧಿಕಾರದಲ್ಲಿದ್ದರೂ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೇ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗುತ್ತಿದೆ.

35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 18 ಸ್ಥಾನ ಪಡೆದು ಬಹುಮತ ಪಡೆದುಕೊಂಡಿದ್ದು.17 ಸ್ಥಾನ ಪಡೆದಿರುವ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದ ಅವಧಿ ಪೂರ್ಣಗೊಂಡು 2ನೇ ಅವಧಿಗೆ ಮೀಸಲಾತಿ ನಿಗದಿಯಾಗಿ ನಾಲ್ಕೈದು ತಿಂಗಳು ಕಳೆದಿದ್ದರೂ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.

2ನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆದರೆ ಮೀಸಲಾತಿ ಘೋಷಣೆಯಲ್ಲಿ ರೋಸ್ಟರ್ ಪಾಲನೆಯಾಗಿಲ್ಲ ಎಂದು ಆರೋಪಿಸಿ 1 ನೇ ವಾರ್ಡ್‌ ಹಾಗೂ ಹಾಗೂ 10ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯರು 2024 ಆ.31 ರಂದು ಧಾರವಾಡ ಹೈಕೋರ್ಟ ಮೆಟ್ಟಿಲೇರಿದ್ದರು.

ದೂರುದಾರರ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್‌ ಮುಂದಿನ ವಿಚಾರಣೆವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ ನೀಡಿತ್ತು. ಅದಾದ ನಂತರ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್‌, ದೂರುದಾರರ ಅರ್ಜಿ ವಜಾಗೊಳಿಸಿ ಡಿ.13, 2024 ರಂದು ಆದೇಶ ಹೊರಡಿಸಿದ್ದು ಈ ಹಿಂದಿನ ಮೀಸಲಾತಿಯೇ ಅಂತಿಮ ಎನ್ನುವ ಅಂಶ ಉಲ್ಲೇಖಿಸಿದೆ.

ರಾಜಕೀಯ ಮೇಲಾಟ:

ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮೊದಲ ಅವಧಿ ಪೂರೈಸಿದೆ. ಹೀಗಾಗಿ 2ನೇ ಬಾರಿಗೆ ಬಿಜೆಪಿಗೆ ಅಧಿಕಾರ ತಪ್ಪಿಸಲು ಕಾಂಗ್ರೆಸ್ ವಿಪ ಸದಸ್ಯ ಸಲೀಂ ಅಹ್ಮದ್ ಅವರನ್ನು ಗದಗ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಯತ್ನ ನಡೆದಿತ್ತು. ಪ್ರತಿಯಾಗಿ ಬಿಜೆಪಿ ಸದಸ್ಯರು, ವಿಪ ಸದಸ್ಯ ಎಸ್.ವಿ. ಸಂಕನೂರ ಅವರನ್ನು ಗದಗ ಮತದಾರರ ಪಟ್ಟಿಯಲ್ಲಿ ಸೇರಿಸಲು ಮುಂದಾದರು. ಆದರೆ ಇಬ್ಬರ ಅರ್ಜಿಯೂ ತಿರಸ್ಕೃತವಾಗಿವೆ. ಈಗ ಮೀಸಲಾತಿ ವಿಚಾರದಲ್ಲಿ ಹೈಕೋರ್ಟ ದೂರುದಾರ ಅರ್ಜಿ ತಿರಸ್ಕರಿಸಿದ್ದು, ಕಾಂಗ್ರೆಸ್ ಸದಸ್ಯರ ಆಸೆಗೆ ತಣ್ಣೀರು ಎರಚಿದೆ.

ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಅನ್ಯ ಕಾರಣಕ್ಕಾಗಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅಭಿವೃದ್ಧಿ ವಿಷಯವಾಗಿ ಸಾರ್ವಜನಿಕರು ಕೇಳಿದರೆ ಅಧಿಕಾರಿಗಳು ಆಡಳಿತ ಮಂಡಳಿ ಇಲ್ಲ ಎನ್ನುತ್ತಲೇ ಸಾಗಿ ಹಾಕುತ್ತಿದ್ದಾರೆ. ಅದ್ಯಾವಾಗ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಸುತ್ತದೆ, ನಮ್ಮ ಸಮಸ್ಯೆ ಬಗೆಹರಿಯುತ್ತವೆ ಎನ್ನುವ ಆಸೆಗಣ್ಣುಗಳಿಂದ ಜನರು ನಗರಸಭೆಯನ್ನು ನೋಡುವಂತಾಗಿದೆ.

ಗದಗ-ಬೆಟಗೇರಿ ನಗರಸಭೆಯಲ್ಲಿ ಬಹುಮತವಿಲ್ಲದಿದ್ದರೂ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ಕಾಂಗ್ರೆಸ್ ನಾಯಕರು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಮೊದಲ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ವೇಳೆಯಲ್ಲಿಯೂ ಅನಗತ್ಯವಾಗಿ ಗೊಂದಲ ಸೃಷ್ಟಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ನ್ಯಾಯಾಲಯ ಸರಿಯಾದ ಸೂಚನೆ ನೀಡಿ ಪ್ರಕರಣ ವಜಾಗೊಳಿಸಿತ್ತು. ಈಗ 2 ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ವಿಷಯದಲ್ಲಿಯೂ ಕಾಂಗ್ರೆಸ್ ಸದಸ್ಯರು ಕೋರ್ಟ ಮೊರೆ ಹೋಗಿದ್ದರು ಎಂದು ಬಿಜೆಪಿ ಮುಖಂಡ ಮಹೇಶ ದಾಸರ ತಿಳಿಸಿದ್ದಾರೆ.

ಗದಗ- ಬೆಟಗೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ, ನ್ಯಾಯಾಲಯದಿಂದ ಅಧಿಕೃತವಾದ ಸೂಚನೆ ಬಂದ ನಂತರ ಚುನಾವಣೆ ನಡೆಯಲಿದೆ ಎಂದು ಗದಗ ಉಪವಿಭಾಗಾಧಿಕಾರಿ ಗಂಗಪ್ಪ.ಜಿ. ಹೇಳಿದ್ದಾರೆ.