ಶಾಸಕರೇ ಮಡಹಳ್ಳಿ ಸರ್ಕಲ್‌ನ ಅವ್ಯವಸ್ಥೆ ತಪ್ಪೋದು ಯಾವಾಗ!

| Published : Nov 05 2024, 12:33 AM IST

ಸಾರಾಂಶ

ಗುಂಡ್ಲುಪೇಟೆ ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಂತಾಗ ಸವಾರರು ಸಂಚರಿಸಲು ಪರದಾಡುತ್ತಿರುವ ದೃಶ್ಯ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುವ ಮೈಸೂರು-ಊಟಿ ಹೆದ್ದಾರಿಯ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆಯ ನೀರು ನಿಂತು ಮುಕ್ತವಾಗಿ ಸಂಚರಿಸೋದು ಯಾವಾಗ ಶಾಸಕರೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.!

ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದ ಬಳಿ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಂದಾಗಲೆಲ್ಲ ಮಳೆ ನೀರು ನಿಂತು ಬೈಕ್‌, ಆಟೋ ಸವಾರರು, ಪಾದಚಾರಿಗಳಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಇನ್ನೂ ಮಳೆಗಾಲದಲ್ಲಂತು ಜನರು ಮಡಹಳ್ಳಿ ಸರ್ಕಲ್‌ ಎಂದರೆ ಭಯ ಪಡುತ್ತಿದ್ದಾರೆ.

ರಸ್ತೆಯ ಅವ್ಯವಸ್ಥೆ:

ಮಡಹಳ್ಳಿ ಸರ್ಕಲ್‌ನಿಂದ ಜೆಎಸ್ಎಸ್‌ ಅನುಭವ ಮಂಟಪದ ತನಕ ಗುಂಡಿಗಳದ್ದೇ ಕಾರುಬಾರು. ಮಳೆಗಾಲದಲ್ಲಿ ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನಗಳು ಬಂದಾಗ ಪಾದಚಾರಿಗಳು ಹಾಗೂ ಬೈಕ್‌ ಸವಾರರಿಗೆ ಎರಚುತ್ತದೆ. ಇನ್ನೂ ಮಳೆ ನೀರು ನಿಂತು ಬಿಸಿಲು ಬಂದು ನೀರು ಹೀರಿಕೊಂಡ ಬಳಿಕ ಧೂಳಿನ ಉಚಿತ ಸಿಂಚಿನ ಈ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಸಿಗುತ್ತಿದೆ. ಈ ರಸ್ತೆ ಹಾಗೂ ಸರ್ಕಲ್‌ ಮಳೆಗಾಲದಲ್ಲೊಂದು ಸಮಸ್ಯೆ, ಮಳೆ ನಿಂತಾಗ ಇನ್ನೊಂದು ಸಮಸ್ಯೆ ಇರುತ್ತೇ ಎಂದು ಜೆಎಸ್‌ಎಸ್‌ ಬಡಾವಣೆಯ ನಿವಾಸಿ ನಟೇಶ್‌ ಹೇಳಿದ್ದಾರೆ.

ಜನಸಂದಣಿ ರಸ್ತೆ:

ಮಡಹಳ್ಳಿ ಸರ್ಕಲ್‌ನಿಂದ ಜೆಎಸ್‌ಎಸ್‌ ಅನುಭವ ಮಂಟಪದ ತನಕ ಶಾಲಾ ಕಾಲೇಜುಗಳಿವೆ. ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ನ್ಯಾಯಾಲಯ, ಕಂದಾಯ ಇಲಾಖೆ, ವಸತಿ ಗೃಹ, ವಿದ್ಯಾರ್ಥಿ ನಿಲಯ, ಅಂಗಡಿ ಮುಂಗಟ್ಟಗಳ ಜೊತೆಗೆ ಜನ ವಸತಿ ಬಡಾವಣೆಗಳಿರುವ ಕಾರಣ ಈ ರಸ್ತೆಯಲ್ಲಿ ಜನ ಸಂದಣಿ ಇದೆ.

ಮಳೆ ನೀರು ಮಡಹಳ್ಳಿ ಸರ್ಕಲ್‌ನಲ್ಲಿ ನಿಲ್ಲಲು ಪೊಲೀಸರು ಕಾಗೇ ಹಳ್ಳ ಒತ್ತುವರಿ ಮಾಡಿಕೊಂಡು ಹಳ್ಳದಲ್ಲಿ ಮಣ್ಣು ಹಾಕಿರುವುದೇ ಕಾರಣ ಎನ್ನಲಾಗುತ್ತಿದೆ. ಕಾಗೇಹಳ್ಳ ಒತ್ತುವರಿ ತೆರವುಗೊಳಿಸಲು ತಾಲೂಕು ಆಡಳಿತದಿಂದ ಕಳೆದೊಂದು ವರ್ಷದಿಂದ ಸಾಧ್ಯವಾಗಿಲ್ಲ ಇದಕ್ಕೆ ಕಾರಣವೂ ತಿಳಿಯುತ್ತಿಲ್ಲ ಎಂದು ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳ ಮಾತು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಕನ್ನಡಪ್ರಭ ವರದಿ ಬಳಿಕ ಕಾಗೇಹಳ್ಳ ಒತ್ತುವರಿ ತೆರವಿಗೂ ಮುನ್ನ ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿ ೮೦ ಲಕ್ಷ ರು. ವೆಚ್ಚದಲ್ಲಿ ಡೆಕ್‌ ಸ್ಲ್ಯಾಬ್‌ ಕೂಡ ನಿರ್ಮಿಸಲು ಕಾರಣರಾಗಿದ್ದಾರೆ. ಆದರೆ ಪೊಲೀಸರು ಒತ್ತುವರಿ ಮಾಡಿಕೊಂಡ ಕಾಗೇಹಳ್ಳ ಒತ್ತುವರಿ ತೆರವುಗೊಳಿಸಿದರೆ ಮಳೆ ನೀರು ಕಾಗೇ ಹಳ್ಳದಲ್ಲಿ ಹರಿದು ಹೋದರೆ ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಲ್ಲಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್‌) ರ ವಾದವಾಗಿದೆ. ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಲ್ಲದಂತೆ ಮಾಡಬೇಕು. ಜೊತೆಗೆ ಮಡಹಳ್ಳಿ ಸರ್ಕಲ್‌ನಿಂದ ಜೆಎಸ್‌ಎಸ್‌ ಅನುಭವ ಮಂಟಪದ ತನಕ ರಸ್ತೆ ದುರಸ್ತಿ ಪಡಿಸಿ ಸಾರ್ವಜನಿಕರು ಧೂಳು, ನಿಲ್ಲುವ ನೀರಿನಿಂದ ಮುಕ್ತವಾಗಿ ಸಂಚರಿಸಲು ಶಾಸಕರು ಇನ್ನಾದರೂ ಮನಸ್ಸು ಮಾಡಲಿ ಎಂದು ಒತ್ತಾಯಿಸಿದ್ದಾರೆ.