ಸಾರಾಂಶ
30 ವರ್ಷಗಳಿಂದ ಈಡೇರದ ಜನರ ಬೇಡಿಕೆ । ಶವಸಂಸ್ಕಾರಕ್ಕೆ ಸರ್ವಿಸ್ ರಸ್ತೆಯೇ ಆಸರೆ
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುತಾಲೂಕಿನ ಆದಿವಾಲ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ವಾಸ ಮಾಡುತ್ತಿದ್ದು, ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಅಂತ್ಯ ಸಂಸ್ಕಾರ ಮಾಡಲಿಕ್ಕೆ ಒಂದು ರುದ್ರಭೂಮಿ ಇಲ್ಲದಂತಾಗಿದೆ.
ದುರದೃಷ್ಟವೆಂದರೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯ ದಂಡೆ ಮೇಲೆ ಶವಸಂಸ್ಕಾರ ಮಾಡುವ ಪದ್ದತಿ ದಶಕಗಳಿಂದಲೂ ಮುಂದುವರಿದುಕೊಂಡು ಬಂದಿದೆ. ಸ್ವಂತ ಜಮೀನು ಹೊಂದಿರುವವರು ತಮ್ಮ ಜಮೀನುಗಳಲ್ಲಿಯೇ ಶವ ಸಂಸ್ಕಾರ ಮಾಡಿಕೊಂಡರೆ, ಜಮೀನು ರಹಿತ ವರ್ಗದವರು ರಸ್ತೆಯ ಆಸುಪಾಸುನ್ನೇ ಆಶ್ರಯಿಸಬೇಕಾಗಿದೆ.ಹಿಂದೊಮ್ಮೆ ಆದಿವಾಲ ಗ್ರಾಮಕ್ಕೆ ಸರ್ವೇ ನಂ.109 ರಲ್ಲಿ ರುದ್ರಭೂಮಿ ಗುರುತಿಸಲಾಗಿತ್ತು. ಆದರೆ ಅಲ್ಲಿನ ಗ್ರಾಮಸ್ಥರು ರುದ್ರಭೂಮಿ ತುಂಬಾ ದೂರವಿದ್ದು, ಅಲ್ಲದೆ ಆ ದಿಕ್ಕಿನತ್ತ ಶವ ಸಾಗಿಸಬಾರದೆಂದು ಅದರ ಬಳಕೆಗೆ ಒಪ್ಪಲಿಲ್ಲ. ಆನಂತರ ಆದಿವಾಲ ಗ್ರಾಮಸ್ಥರಾದ ಟಿ. ರಾಜಶೇಖರಯ್ಯ, ಟಿ.ತ್ರಿಯಂಬಕ ಮೂರ್ತಿ, ಟಿ.ರವಿಶಂಕರ್ ತಮ್ಮ ಜಂಟಿ ಜಮೀನಿನಿ ಸರ್ವೆ.ನಂ. 287/3 ರಲ್ಲಿನ 4 ಎಕರೆ 1 ಗುಂಟೆ ಜಮೀನನ್ನು ಸರ್ಕಾರದ ಮೊತ್ತಕ್ಕೆ ಭೂಮಿ ಬಿಟ್ಟು ಕೊಡಲು ತಹಸೀಲ್ದಾರ್‌ಗೆ ಒಪ್ಪಿಗೆ ಪತ್ರ ನೀಡಿದ್ದರು. ಆಗ ಆದಿವಾಲ ಗ್ರಾಪಂ ನಿಂದ 2022 ರಲ್ಲಿ ಸರ್ವ ಸದಸ್ಯರು ಒಪ್ಪಿ ಸಾಮಾನ್ಯ ಸಭಾ ನಡಾವಳಿ ಮತ್ತು ಒಪ್ಪಿಗೆ ಪತ್ರವನ್ನು ತಹಸೀಲ್ದಾರ್ ಕಚೇರಿಗೆ ಸಲ್ಲಿಸಿ ಜಮೀನನ್ನು ರುದ್ರಭೂಮಿಗೆ ಅನುಮೋದಿಸಿ ಕೊಡಿ ಎಂದು ಕೋರಲಾಗಿತ್ತು. ಆದರೆ ಅದಾಗಿ ಒಂದು ವರ್ಷವಾದರೂ ಸಮಸ್ಯೆ ಪರಿಹಾರ ಕಂಡಿಲ್ಲ. ಜೂ. 10.2023ರಲ್ಲಿ ಸಚಿವ.ಡಿ.ಸುಧಾಕರ್ ಅವರಿಗೆ ಮನವಿ ಮಾಡಿ ಸದರಿ 4 ಎಕರೆ 1 ಗುಂಟೆ ಜಮೀನನ್ನು ರುದ್ರಭೂಮಿಗೆ ಅನುಮೋದಿಸಿ ಕೊಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಕೋರಿಲಾಯಿತು. ಮರುದಿನವೇ ಸಚಿವರು ಪತ್ರ ಬರೆದು ರುದ್ರಭೂಮಿಗೆ ಕೋರಿರುವ ಜಮೀನನ್ನು ಪರಿಗಣಿಸಿ ಅನುಮೋದಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.
ದುರಂತವೆಂದರೆ ಜಿಲ್ಲಾಧಿಕಾರಿಗೆ ಕೋರಿಗೆ ಸಲ್ಲಿಸಿ ಒಂದು ವರ್ಷ ಕಳೆದರೂ ಸಹ ಗ್ರಾಮಸ್ಥರು ಕೇಳಿಕೊಂಡ ಜಮೀನನ್ನು ರುದ್ರಭೂಮಿಯಾಗಿ ಅನುಮೋದಿಸಿಕೊಡುವ ಕೆಲಸವಾಗಿಲ್ಲ. ಇನ್ನಾದರೂ ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನಹರಿಸಿ ದಶಕದ ಸಮಸ್ಯೆ ಪರಿಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಆದಿವಾಲ ಗ್ರಾಮಸ್ಥರ ಬೇಡಿಕೆ ಈಡೇರಿಸಿ: ಕಿರಣ್
ಆದಿವಾಲ ಗ್ರಾಮಸ್ಥರ ಬಹು ವರ್ಷದ ಬೇಡಿಕೆಯಾದ ರುದ್ರಭೂಮಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಆಡಳಿತ ಯಂತ್ರ ಸೂಚಿಸಿದ ಜಾಗ ದೂರವಿದ್ದು, ಇದೀಗ ಅದರ ಆಸುಪಾಸಿನಲ್ಲೇ ನೂತನ ತಾಪಂ ಕಟ್ಟಡ, ಸಾರ್ವಜನಿಕ ಆಸ್ಪತ್ರೆ ಕಟ್ಟಡಗಳು ನಿರ್ಮಾಣವಾಗುತ್ತಿರುವುದರಿಂದ ಗ್ರಾಪಂ ಮತ್ತು ಗ್ರಾಮಸ್ಥರು ಒಪ್ಪಿದ ಜಮೀನನ್ನೇ ರುದ್ರಭೂಮಿಯಾಗಿ ಅನುಮೋದಿಸಿ ಕೊಡಿ ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸುಮಾರು 20- 30 ವರ್ಷ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮದ ಜನರ ಬೇಡಿಕೆ ಈಡೇರಿಸಬೇಕೆಂದು ಎಂದು ಆದಿವಾಲ ಗ್ರಾಪಂ ಸದಸ್ಯ ಕಿರಣ್ ಪಟ್ರೆಹಳ್ಳಿ ಮನವಿ ಕೊಂಡಿದ್ದಾರೆ.