ಸಾರಾಂಶ
ಶರಣು ಸೊಲಗಿ ಮುಂಡರಗಿ
ಮುಂಡರಗಿ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಹತ್ತಿರ ಆಶ್ರಯ ನಿವೇಶನಕ್ಕಾಗಿ ಖರೀದಿಸಿದ್ದ 24 ಎಕರೆ ಜಮೀನಿನಲ್ಲಿ ನಿವೇಶನ ಹಂಚುವ ಕಾರ್ಯ ಬಹು ವರ್ಷಗಳಿಂದ ವಿಳಂಬವಾಗುತ್ತಾ ಬಂದಿದ್ದು, ಮುಂಡರಗಿ ಪಟ್ಟಣದ ಅರ್ಹ ಫಲಾನುಭವಿಗಳ ಆಶ್ರಯ ನಿವೇಶನಗಳ ಹಂಚಿಕೆ ಯಾವಾಗ ಎನ್ನುವುದು ಇಲ್ಲಿನ ನಿರಾಶ್ರಿತರ ಪ್ರಶ್ನೆಯಾಗಿದೆ.ಪಟ್ಟಣದ 23 ವಾರ್ಡ್‌ಗಳೂ ಸೇರಿದಂತೆ ಸಾವಿರಾರು ಜನ ನಿರಾಶ್ರಿತರಿದ್ದು, ಎಲ್ಲರಿಗೂ ನಿವೇಶ ಹಂಚಿಕೆ ಮಾಡುವ ಉದ್ದೇಶದಿಂದ 2017ರಲ್ಲಿ ಅಂದಿನ ಕಾಂಗ್ರೆಸ್ ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿ ಸರ್ಕಾರದಿಂದ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಹತ್ತಿರ 24 ಎಕರೆ ಜಮೀನು ಖರೀದಿಸಿದರು. ಜಮೀನು ಖರೀದಿಸಿ 8 ವರ್ಷಗಳು ಕಳೆದರೂ ನಿರಾಶ್ರಿತರಿಗೆ ಮಾತ್ರ ನಿವೇಶನ ನೀಡುತ್ತಿಲ್ಲ.
ಪುರಸಭೆಯ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸುಮಾರು 3ರಿಂದ 4 ಸಾವಿರಕ್ಕೂ ಹೆಚ್ಚು ನಿರಾಶ್ರಿತರ ಅರ್ಜಿಗಳಿದ್ದು, ಅವರಿಗೆ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡಬೇಕು ಎನ್ನುವ ಉದ್ದೇಶದಿಂದಲೇ ದೊಡ್ಡಮನಿ ಜಮೀನು ಖರೀದಿಸಿದ್ದರು. ಆದರೆ ನಿವೇಶನ ಹಂಚಬೇಕೆನ್ನುವಷ್ಟರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಜತೆಗೆ ರಾಮಕೃಷ್ಣ ದೊಡ್ಡಮನಿ ಸಹ ಪರಾಭವಗೊಂಡರು.ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ರಾಮಣ್ಣ ಲಮಾಣಿ ಶಾಸಕರಾದರು. ಅವರು ಪ್ರಾರಂಭದಿಂದ 2023ರ ವಿಧಾನಸಭೆ ಚುನಾವಣೆ ಘೋಷಣೆಯಾಗುವ ವರೆಗೂ ನಿವೇಶನ ಹಂಚಿಕೆಗೆ ಪ್ರಯತ್ನಿಸುತ್ತಾ ಬಂದರೂ ಸಹ ಒಂದಿಲ್ಲೊಂದು ಅಡೆತಡೆ, ರಾಜೀವ ಗಾಂಧಿ ವಸತಿ ನಿಗಮಕ್ಕೆ ಸ್ಥಳೀಯವಾಗಿ ತಕರಾರು ಅರ್ಜಿ ಹೋಗಿದ್ದರಿಂದ ನಿವೇಶನಗಳ ಹಂಚಿಕೆ ಆಗಲೇ ಇಲ್ಲ.
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಡಾ. ಚಂದ್ರು ಲಮಾಣಿ ಶಾಸಕರಾಗಿ ಆಯ್ಕೆಯಾದರು. ಅವರು ಶಾಸಕರಾದ ಪ್ರಾರಂಭದಲ್ಲಿ ತಮ್ಮ ಮೊದಲ ಆದ್ಯತೆಯೇ ಆಶ್ರಯ ನಿವೇಶನ ಹಂಚಿಕೆ ಎಂದಿದ್ದರು. ಈ ಕುರಿತು ನಿರಂತರ ಸಭೆಗಳನ್ನು ನಡೆಸುತ್ತಾ ಬಂದಿದ್ದಾರಾದರೂ ಶಾಸಕರಾಗಿ ಆಯ್ಕೆಯಾಗಿ 2 ವರ್ಷಗಳು ಆಗುತ್ತಾ ಬಂದರೂ ನಿವೇಶ ಹಂಚಿಕೆ ಮಾತ್ರ ಇದುವರೆಗೂ ಆಗುತ್ತಿಲ್ಲ.ಆಶ್ರಯ ನಿವೇಶನ ಹಂಚಿಕೆ ಕುರಿತು ಶಾಸಕ ಡಾ. ಚಂದ್ರು ಲಮಾಣಿ ಅನೇಕ ಸಭೆಗಳನ್ನು ನಡೆಸಿದ್ದು, ಕಳೆದ ಡಿ. 22 ರಂದು ಸಹ ಮುಂಡರಗಿ ಪುರಸಭೆಯಲ್ಲಿ ಆಶ್ರಯ ಕಮಿಟಿ ಸಭೆ ನಡೆಸಿ, ಡಿಸೆಂಬರ್ ಕೊನೆಯ ಅಥವಾ ಜನವರಿ ಮೊದಲ ವಾರದಲ್ಲಿ ಅರ್ಹ ಆಶ್ರಯ ಫಲಾನುಭವಿಗಳ ಮೊದಲ ಪಟ್ಟಿ ಸಿದ್ಧಪಡಿಸಿ ಪುರಸಭೆ ನೋಟಿಸ್ ಬೋರ್ಡಿಗೆ ಹಚ್ಚಿ, ನಂತರದಲ್ಲಿ ರಾಜೀವ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದರು. ಈ ವರೆಗೂ ಯಾವುದೇ ಪ್ರಕ್ರಿಯೆ ಆಗಿಲ್ಲ ಎನ್ನುವುದು ನಿರಾಶ್ರಿತರ ಆರೋಪವಾದರೆ, ಆಯಾ ವಾರ್ಡ್‌ನ ಸದಸ್ಯರು ಗುರುತಿಸಿದ ಅನರ್ಹರ ಹೆಸರುಗಳನ್ನು ಪುರಸಭೆಗೆ ಸಂಬಂಧಿಸಿದ ಕೆಲವು ಖಾಸಗಿ ವ್ಯಕ್ತಿಗಳು ತೆಗೆದು ಹಾಕಿ ತಮಗೆ ಬೇಕಾದವರ ಹೆಸರು ಸೇರಿಸುತ್ತಿದ್ದಾರೆ ಎನ್ನುವ ಮಾತುಗಳು ಪುರಸಭೆ ಸದಸ್ಯರ ವಲಯದಲ್ಲಿ ಕೇಳು ಬರುತ್ತಿದೆ.
ಪಟ್ಟಣದ ನಿರಾಶ್ರಿತರಿಗೆ ನಿವೇಶನ ಒದಗಿಸುವ ಉದ್ದೇಶದಿಂದ ತಾವು ಶಾಸಕರಾಗಿದ್ದಾಗ 24 ಎಕರೆ ಜಮೀನು ಖರೀದಿಸಿದ್ದು, ಎಂಟು ವರ್ಷ ಗತಿಸಿದರೂ ನಿವೇಶನ ಹಂಚಿಕೆ ಮಾಡದಿರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರೆತೆ ಎತ್ತಿ ತೋರಿಸುತ್ತಿದೆ. ಜತೆಗೆ ಇವರಿಗೆ ಬಡವರ ಬಗ್ಗೆ ಚಿಂತನೆ ಇಲ್ಲದಿರುವುದನ್ನು ಕಾಣುತ್ತದೆ ಎಂದು ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.ಆಶ್ರಯ ನಿವೇಶನ ಹಂಚಿಕೆ ಕುರಿತು ಶಾಸಕ ಡಾ. ಚಂದ್ರು ಲಮಾಣಿ ಅಧ್ಯಕ್ಷತೆಯಲ್ಲಿ ಈಗಾಗಲೇ ಅನೇಕ ಬಾರಿ ಸಭೆ ನಡೆಸಿದ್ದು, ಶೀಘ್ರದಲ್ಲಿಯೇ ಅಂತಿಮ ಫಲಾನುಭವಿಗಳ ಪಟ್ಟಿ ಪುರಸಭೆ ನೋಟಿಸ್ ಬೋರ್ಡಿಗೆ ಹಚ್ಚಿ ನಂತರ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುವುದು ಎಂದು ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳಿದ್ದಾರೆ.