ಪಟ್ಟಣದಲ್ಲಿ ಬೀದಿನಾಯಿ ಹಾವಳಿಯಿಂದ ಇನ್ನಷ್ಟು ತೊಂದರೆಯಾಗುವ ಮೊದಲು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶರಣು ಸೊಲಗಿ

ಮುಂಡರಗಿ: ಪಟ್ಟಣದ 23 ವಾರ್ಡುಗಳ ಪೈಕಿ ಯಾವುದೇ ವಾರ್ಡಿಗೆ ಹೋದರೂ ಸಾರ್ವಜನಿಕರು ನೆಮ್ಮದಿಯಿಂದ ಓಡಾಡುವಂತಿಲ್ಲ. ಬಹುತೇಕ ಎಲ್ಲ ವಾರ್ಡುಗಳಲ್ಲಿಯೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿ ಜನತೆ ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನ್ಯಾಯಾಲಯ ಬೀದಿನಾಯಿಗಳ ಹಾವಳಿಯಿಂದ ಜನರನ್ನು ಕಾಪಾಡುವಂತೆ ಆದೇಶಿಸಿದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ನಾಯಿಗಳನ್ನು ಹಿಡಿಸಲು ಮುಂದಾಗುತ್ತಿಲ್ಲ. ಪಟ್ಟಣದ ಎಸ್.ಎಸ್. ಪಾಟೀಲ ನಗರ, ದುರ್ಗಾದೇವಿ ನಗರ, ಕೋಟೆ ಭಾಗ, ಜಾಗೃತ ವೃತ್ತ, ಕೊಪ್ಪಳ ವೃತ್ತ, ಗದಗ- ಮುಂಡರಗಿ ರಸ್ತೆ, ಶಿರೋಳ, ಬ್ಯಾಲವಾಡಗಿ, ವಿದ್ಯುತ್ ನಗರ, ಹೆಸರೂರು ರಸ್ತೆ ಆಶ್ರಯ ಕಾಲನಿ, ರಾಮೇನಹಳ್ಳಿ ರಸ್ತೆ, ವಿದ್ಯಾನಗರ, ಭಜಂತ್ರಿ ಓಣಿ, ಅಂಭಾಭವಾನಿ ನಗರ, ಮಾಬೂಸುಭಾನಿ ನಗರ, ಬಜಾರ, ಹಳೆ ತರಕಾರಿ ಮಾರುಕಟ್ಟೆ, ಬ್ರಾಹ್ಮಣರ ಓಣಿ, ಹೊಸ ಬಸ್ ನಿಲ್ದಾಣದ ಹತ್ತಿರ, ಹಳೆ ಎಪಿಎಂಸಿ ಮಾರುಕಟ್ಟೆ, ಹೊಸ ಎಪಿಎಂಸಿ ಮಾರುಕಟ್ಟೆ, ಕೆಇಬಿ ಗ್ರಿಡ್ ಹತ್ತಿರ ಹೀಗೆ ಬಹುತೇಕ ಎಲ್ಲ ಕಡೆಗಳಲ್ಲಿಯೂ ಬೀದಿನಾಯಿಗಳ ಕಾಟ ವಿಪರೀತವಾಗಿದೆ.

ಮಕ್ಕಳು, ಮಹಿಳೆಯರು, ವೃದ್ಧರು, ಮೋಟಾರ್ ಸೈಕಲ್ ಸವಾರರು ನಿಶ್ಚಿಂತೆಯಿಂದ ಓಡಾಡುವಂತಿಲ್ಲ. ಮಕ್ಕಳನ್ನು ಯಾವುದೇ ವಸ್ತುಗಳನ್ನು ತೆಗೆದುಕೊಡು ಬರಲು ಅಂಗಡಿಗಳಿಗೆ ಕಳಿಸುವಂತಿಲ್ಲ. ಕೈಯಲ್ಲಿ ಏನಾದರೂ ಹಿಡಿದುಕೊಂಡು ಬಂದರೆ ಅವರ ಮೇಲೆ ದಾಳಿ ನಡೆಸುತ್ತವೆ. ನಿತ್ಯ ಬೆಳಗ್ಗೆ ದಿನಪತ್ರಿಕೆ, ಹಾಲು ಹಾಕುವ ಹುಡುಗರಿಗೆ ಬೆನ್ನಟ್ಟಿಕೊಂಡು ಹೋಗುತ್ತವೆ. ಅಲ್ಲದೇ ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಮೇಲೂ ಅನೇಕ ಬಾರಿ ದಾಳಿ ನಡೆಸುತ್ತಿವೆ.

2024ರ ಡಿ. 8ರಂದು ನರಗುಂದ ಪಟ್ಟಣದ ಮಗುವೊಂದು ಮುಂಡರಗಿಯ ತಮ್ಮ ಸಂಬಂಧಿಕರ ಮನೆಗೆ ಬಂದಾಗ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿನಾಯಿಯೊಂದು ಮಾರಣಾಂತಿಕವಾಗಿ ದಾಳಿ ನಡೆಸಿತ್ತು. ಅದಾದ ನಂತರ 2025ರಲ್ಲಿ ಕೋಟೆ ಭಾಗದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಪುರಸಭೆ ಸದಸ್ಯರ ಸಂಬಂಧಿಕರ ಮಗುವಿನ ಮೇಲೆ ಹಾಗೂ ವೃದ್ಧರೊಬ್ಬರ ಮೇಲೆ ಬೀದಿನಾಯಿ ದಾಳಿ ನಡೆಸಿದೆ. ಹೀಗಾಗಿ ಜನತೆ ನಿರಂತರ ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿದ್ದಾರೆ. ಕಳೆದ ವರ್ಷ ಪುರಸಭೆ ಅನೇಕ ಬೀದಿನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಿದ್ದು, ಇದೀಗ ಮತ್ತೆ ಪಟ್ಟಣದಾದ್ಯಂತ ಎಲ್ಲೆಂದರಲ್ಲಿ ಹೆಚ್ಚಾಗಿವೆ.

ಬೀದಿನಾಯಿಗಳ ಹಾವಳಿ ತಡೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಮಟ್ಟದ ಅಧಿಕಾರಿಗಳಿಗೆ ತಾಪಂ ಇಒ ವಿಶ್ವನಾಥ ಹೊಸಮನಿ ನಿರ್ದೇಶನ ನೀಡಿದ್ದಾರೆ. ಇದುವರೆಗೂ ಬೀದಿನಾಯಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದಲೇ ಪಟ್ಟಣ ಹಾಗೂ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಬೀದಿನಾಯಿ ಉಪಟಳ ಹೆಚ್ಚಾಗಿದೆ ಎನ್ನುವುದು ಸಾರ್ವಜನಿಕರ ಆರೋಪ. ಪಟ್ಟಣದಲ್ಲಿ ಬೀದಿನಾಯಿ ಹಾವಳಿಯಿಂದ ಇನ್ನಷ್ಟು ತೊಂದರೆಯಾಗುವ ಮೊದಲು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶೀಘ್ರವೇ ಕಾರ್ಯಾಚರಣೆ: ಬೀದಿನಾಯಿಗಳಿಗೆ‌ ಚುಚ್ಚುಮದ್ದು ಹಾಗೂ ಸಂತಾನಶಕ್ತಿಹರಣ‌ ಶಸ್ತ್ರಚಿಕಿತ್ಸೆ ಮಾಡುವುದಕ್ಕಾಗಿ ಟೆಂಡರ್ ಕರೆದಿದ್ದು, ಶೀಘ್ರವೇ ಕಾರ್ಯಾಚರಣೆ ಶುರುವಾಗಲಿದೆ. ಬೀದಿನಾಯಿಗಳಿಗೆ ಚುಚ್ಚುಮದ್ದು ಮತ್ತು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಆಪರೇಷನ್ ಥೇಟರ್ ಹಾಗೂ ಶೆಲ್ಟರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಕಾರ್ಯಚರಣೆ ನಡೆಯಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ತಿಳಿಸಿದರು.