ಶಿಕ್ಷಣವೆಂದರೆ ಕೇವಲ ಪಾಠ ಹೇಳುವುದಲ್ಲ, ಅದು ಭವಿಷ್ಯದ ಪೀಳಿಗೆಯನ್ನು ರೂಪಿಸುವ ಮಹತ್ತರ ಜವಾಬ್ದಾರಿ. ಇಂತಹ ಜವಾಬ್ದಾರಿಯನ್ನು ಹೊತ್ತು ಹಲವು ವರ್ಷಗಳಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ ತಮ್ಮ ಬದುಕು ಮಾತ್ರ ಇನ್ನೂ ಅತಂತ್ರವಾಗಿಯೇ ಉಳಿದಿದೆ ಎಂಬ ಕೊರಗು ಅತಿಥಿ ಉಪನ್ಯಾಸಕರ ಜೀವ ಹಿಂಡುತಿದೆ

ಚಂದ್ರಶೇಖರ ನಾಯಕ ಗುಡ್ಡಕಾಯಿ

ಕನ್ನಡಪ್ರಭ ವಾರ್ತೆ ಸುರಪುರ

ಶಿಕ್ಷಣವೆಂದರೆ ಕೇವಲ ಪಾಠ ಹೇಳುವುದಲ್ಲ, ಅದು ಭವಿಷ್ಯದ ಪೀಳಿಗೆಯನ್ನು ರೂಪಿಸುವ ಮಹತ್ತರ ಜವಾಬ್ದಾರಿ. ಇಂತಹ ಜವಾಬ್ದಾರಿಯನ್ನು ಹೊತ್ತು ಹಲವು ವರ್ಷಗಳಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ ತಮ್ಮ ಬದುಕು ಮಾತ್ರ ಇನ್ನೂ ಅತಂತ್ರವಾಗಿಯೇ ಉಳಿದಿದೆ ಎಂಬ ಕೊರಗು ಅತಿಥಿ ಉಪನ್ಯಾಸಕರ ಜೀವ ಹಿಂಡುತಿದೆ.

ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ನೀಗಿಸುವಲ್ಲಿ ಅತಿಥಿ ಉಪನ್ಯಾಸಕರ ಸೇವೆ ಪ್ರಮುಖವಾಗಿದೆ. ವಿದ್ಯಾರ್ಥಿಗಳಿಗೆ ನಿರಂತರ ಬೋಧಿಸುವುದು, ಶೈಕ್ಷಣಿಕ ಚಟುವಟಿಕೆಗಳನ್ನು ಸುಗಮವಾಗಿ ನಡೆಯಲು ಹಾಗೂ ಉತ್ತಮ ಫಲಿತಾಂಶಕ್ಕೆ ಶ್ರಮಿಸುವ ಮೂಲಕ ಶಿಕ್ಷಣ ವ್ಯವಸ್ಥೆಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಆದರೆ ವರ್ಷಗಳ ಸೇವೆ, ಅನುಭವಕ್ಕೆ ತಕ್ಕಂತೆ ಗೌರವಧನ ಹಾಗೂ ಸೇವಾ ಭದ್ರತೆ ಮಾತ್ರ ಸಿಗುತ್ತಿಲ್ಲ ಎಂಬುದು ಅವರ ಅಳಲು.

ಪ್ರಸ್ತುತ ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಹಲವರು 10 ರಿಂದ 15 ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ. ಇಷ್ಟೊಂದು ವರ್ಷ ಸೇವೆ ಸಲ್ಲಿಸಿದವರನ್ನು ಪ್ರತಿ ವರ್ಷ ಹೊಸದಾಗಿ ನೇಮಕವಾಗುವ ತಾತ್ಕಾಲಿಕ ಸಿಬ್ಬಂದಿಯಂತೆ ಪರಿಗಣಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.

14 ಸಾವಿರ ಗೌರವಧನ: ಇಂದಿನ ದುಬಾರಿ ಜೀವನದ ನಡುವೆ ಮಾಸಿಕ 14 ಸಾವಿರ ರು. ಗೌರವಧನದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟ. ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ದಿನಸಿ, ಆರೋಗ್ಯ ಹಾಗೂ ಪ್ರಯಾಣ ವೆಚ್ಚ ಸಹಿತ ದಿನನಿತ್ಯದ ಖರ್ಚುಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗೌರವಧನವನ್ನು ಕನಿಷ್ಠ 30 ಸಾವಿರಕ್ಕೆ ಹೆಚ್ಚಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ.

ಭದ್ರತೆ ಮಾತ್ರ ಇಲ್ಲ: ಒಂದೇ ಕಾಲೇಜಿನಲ್ಲಿ ಹಲವು ವರ್ಷ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲೂ ಸೇವೆ ಮುಂದುವರಿಕೆ ಕುರಿತು ಆತಂಕ ಎದುರಾಗುತ್ತದೆ. ಸೇವಾ ಹಿರಿತನ, ವಿದ್ಯಾರ್ಹತೆ ಮತ್ತು ಅನುಭವಕ್ಕೆ ಆದ್ಯತೆ ನೀಡಿ ಸೇವೆಯ ನಿರಂತರತೆ ಕಲ್ಪಿಸಬೇಕು ಎಂಬುದು ಅತಿಥಿ ಉಪನ್ಯಾಸಕರ ಸಂಘದ ಪ್ರಮುಖ ಬೇಡಿಕೆಯಾಗಿದೆ.

12 ತಿಂಗಳು ಕರ್ತವ್ಯ-10 ತಿಂಗಳ ಗೌರವಧನ: ಶೈಕ್ಷಣಿಕ ವರ್ಷದ ಉದ್ದಕ್ಕೂ ವಿವಿಧ ಬೋಧನಾ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು ಅತಿಥಿ ಉಪನ್ಯಾಸಕರಿಗೆ ಪೂರ್ಣ 12 ತಿಂಗಳ ಗೌರವಧನ ಸಿಗುತ್ತಿಲ್ಲ. ಮಾರ್ಚಿನಲ್ಲೇ ಗೌರವಧನ ಸ್ಥಗಿತಗೊಳ್ಳುವುದರಿಂದ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಆದ್ದರಿಂದ 12 ತಿಂಗಳ ಸೇವೆಗೆ 12 ತಿಂಗಳ ಗೌರವಧನ ನೀಡಬೇಕು ಎಂಬ ಆಗ್ರಹವೂ ಇದೆ. ವರ್ಷಗಳ ಸೇವೆ, ಅನುಭವ ಹಾಗೂ ಶ್ರಮವನ್ನು ಪರಿಗಣಿಸಿ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸರ್ಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಒತ್ತಾಯವಾಗಿದೆ.

ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಇಂದಿಗೂ ಸೇವಾ ಭದ್ರತೆ ಇಲ್ಲ. 14 ಸಾವಿರ ರು. ಗೌರವಧನದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಮಾದರಿಯಲ್ಲಿ ಕನಿಷ್ಠ 30 ಸಾವಿರ ರು. ಗೌರವಧನ, ನಿವೃತ್ತಿ ಸಂದರ್ಭದಲ್ಲಿ ಇಡಿಗಂಟು, ಸೇವಾ ನಿರಂತರತೆ ಹಾಗೂ ಸಾಮಾಜಿಕ ಭದ್ರತೆ ಕಲ್ಪಸಬೇಕು ಎಂದು ಯಾದಗಿರಿ ಅತಿಥಿ ಉಪನ್ಯಾಸಕರ ಸಂಘ ಜಿಲ್ಲಾ ಅಧ್ಯಕ್ಷ ಶರಣಪ್ಪ ಟಿ.ಹೊಸಮನಿ

ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಲು ನಾವು ಶ್ರಮಿಸುತ್ತೇವೆ. ಆದರೆ ಪ್ರತಿವರ್ಷ ನಮ್ಮ ಸೇವೆ ಮುಂದುವರಿಯುತ್ತದೆಯೇ ಎಂಬ ಆತಂಕ ಇರುತ್ತದೆ. ದುಬಾರಿ ಜೀವನಕ್ಕೆ ತಕ್ಕಂತೆ ಕನಿಷ್ಠ 30 ಸಾವಿರ ರು.ಗೌರವಧನ, ಸೇವಾ ಭದ್ರತೆ ಹಾಗೂ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ಸುರಪುರದ ಅತಿಥಿ ಉಪನ್ಯಾಸಕ ರಾಜಪ್ಪ ಅಜ್ಜಾಕೊಲ್ಲಿ ಹೇಳಿದರು.