ಸಾರಾಂಶ
- ಕುಂಬಳೂರು ಕುರುಬ ಸಮಾಜದಿಂದ ಕಂಬಳಿ ಹೊದಿಸಿ, ಗೆಲುವಿನ ಭವಿಷ್ಯ
- - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ತೀವ್ರ ಬರ ತಾಂಡವವಾಡುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲ್ಲೆಲ್ಲಾ ಮಳೆ, ಬೆಳೆಯೆಲ್ಲಾ ಉತ್ತಮವಾಗಿ, ಸಮೃದ್ಧಿ ಆಗುತ್ತದೆ. ದೇಶಕ್ಕೆ ಕಾಂಗ್ರೆಸ್ ಪಕ್ಷ ಶಾಪವಿದ್ದಂತೆ. ಕೆಟ್ಟ ಕಳೆ ಇದ್ದಂತೆ. ಇಂತಹ ಪಕ್ಷವನ್ನು ಬೇರುಸಮೇತ ಕಿತ್ತು ಹಾಕುವಂತೆ ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
ಹೊನ್ನಾಳಿ ಕ್ಷೇತ್ರದ ಕುಂಬಳೂರು, ಕುಂದೂರು, ಯಕ್ಕನಹಳ್ಳಿ, ತಿಮ್ಲಾಪುರ ಗ್ರಾಮಗಳಲ್ಲಿ ಬುಧವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿಯೆಂದರೆ ಸಮೃದ್ಧಿ. ಕಾಂಗ್ರೆಸ್ ಅಂದರೆ ತೀವ್ರ ಬರ ನಿಶ್ಚಿತ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ನೆಮ್ಮದಿಯಿಂದ ಜೀವನ ನಡೆಸುವುದು ಕಷ್ಟ. ಹಾಗಾಗಿ ಮತದಾರರು ಈ ಸಲ ಯೋಚಿಸಿ, ಬಿಜೆಪಿಗೆ ಮತ ನೀಡಬೇಕು ಎಂದರು.ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಜೊತೆಯಾಗಿ ಈ ತಾಲೂಕಿನಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸುಮಾರು ₹27 ಕೋಟಿ ವೆಚ್ಚದಲ್ಲಿ ಗ್ರಾಮ ಸಡಕ್‌ನಡಿ ರಸ್ತೆ ನಿರ್ಮಾಣದ ಪ್ರಧಾನಮಂತ್ರಿ ಗ್ರಾಮ ಯೋಜನೆಯಡಿ 18 ಗ್ರಾಮಗಳ ಅಭಿವೃದ್ಧಿಪಡಿಸಿದ್ದಾರೆ. ಫಸಲ್ ವಿಮಾದಡಿ ಪ್ರಸಕ್ತ ಸಾಲಿನಲ್ಲಿ ಈ ತಾಲೂಕಿನ ರೈತರಿಗೆ ₹15 ಕೋಟಿ ವಿಮೆ ಹಣ ಬಂದಿದೆ. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿಯಾಗಿವೆ. ಪ್ರತಿ ಗ್ರಾಮಕ್ಕೂ ಸಮುದಾಯ ಭವನ, ಅಂಗನವಾಡಿ ಕಟ್ಟಡ, ರಂಗ ಮಂದಿರ, ಶಾಲಾ ಕೊಠಡಿ, ಪ್ರಯಾಣಿಕರ ತಂಗುದಾಣ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ಶದ್ಧ ನೀರಿನ ಘಟಕಕ್ಕೆ ಅನುದಾನ ನೀಡಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಭೂಮಿ ಮೇಲೆ ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ ನರೇಂದ್ರ ಮೋದಿ 3ನೇ ಸಲ ಪ್ರಧಾನಿ ಆಗುವುದು, ದಾವಣಗೆರೆಯಿಂದ ಗಾಯತ್ರಕ್ಕ ಸಂಸದೆ ಆಗುವುದು ಅಷ್ಟೇ ಸತ್ಯ. ಗ್ರಾಪಂ ಚುನಾವಣೆಯಲ್ಲಿ ಹೇಗೆ ಮನೆ ಮನೆಗೆ ಹೋಗಿ ಮತ ಕೇಳುತ್ತೀರೋ ಅದೇ ರೀತಿ ಮನೆ ಮನೆಗೆ ಹೋಗಿ ಗಾಯತ್ರಿ ಸಿದ್ದೇಶ್ವರ ಅಕ್ಕನಿಗೆ ಮತ ಕೇಳಬೇಕು ಎಂದರು.ಪಕ್ಷದ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ, ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ, ಕುಬೇರಪ್ಪ, ಹನುಮಂತಪ್ಪ, ಅರಕೆರೆ ನಾಗರಾಜ, ರಂಗನಾಥ, ಸುರೇಂದ್ರ, ಮಾರುತಿ, ಮುರುಗೇಂದ್ರಪ್ಪ, ಯೋಗೇಶ, ವಿರೂಪಾಕ್ಷಪ್ಪ, ಮಂಡಲ ಸದಸ್ಯರು, ಗ್ರಾಪಂ ಸದಸ್ಯರು, ಬೂತ್ ಆಧ್ಯಕ್ಷರು, ಬಿಜೆಪಿ ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು. ಪ್ರಚಾರದ ವೇಳೆ ಕುಂಬಳೂರು ಗ್ರಾಮದ ಕುರುಬ ಸಮುದಾಯದ ಮುಖಂಡರು ಗಾಯತ್ರಿ ಸಿದ್ದೇಶ್ವರ ರಿಗೆ ಕಂಬಳಿ ಹೊದಿಸಿ, ಶುಭಾರೈಸಿದರಷ್ಟೇ ಅಲ್ಲ, ನಾವು ನಿಮ್ಮ ಜೊತೆಗಿದ್ದೇವೆ. ನಿಮ್ಮ ಗೆಲುವು ಖಚಿತ ಎಂಬ ಭವಿಷ್ಯ ನುಡಿದರು.
- - -ಬಾಕ್ಸ್ ಅಭಿವೃದ್ಧಿಗೆ ಸಿದ್ದೇಶಣ್ಣ ಸದಾ ಸ್ಪಂದನೆ ಸಂಸದ ಸಿದ್ದೇಶಣ್ಣ ಬೇರೆಯಲ್ಲ, ನಾನು ಬೇರೆಯಲ್ಲ. ನಾವಿಬ್ಬರೂ ಒಂದೇ. ಹೊನ್ನಾಳಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆ ಇದೆ ಎಂದು ರೇಣುಕಾಚಾರ್ಯ ಹೇಳಿದರು. ತಾಲೂಕಿನ ಅಭಿವೃದ್ಧಿ ವಿಚಾರವಾಗಿ ನಾವು ಯಾವಾಗ ಹೋಗಿ ಏನೇ ಕೇಳಿದರೂ ಸಿದ್ದೇಶಣ್ಣ ಸ್ಪಂದಿಸಿ, ಮಾಡಿಕೊಟ್ಟಿದ್ದಾರೆ. ಅನೇಕ ಗ್ರಾಮದಲ್ಲಿ ಇಂದು ಸಿಸಿ ರಸ್ತೆ, ಶಾಲಾ ಕಟ್ಟಡ, ಶುದ್ಧ ಕುಡಿಯುವ ನೀರು ಸೇರಿದಂತೆ ಗ್ರಾಮೀಣಾಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಕೇಂದ್ರದಿಂದ ಆಗಬೇಕಾದ ಕೆಲಸ ಮುಂದೆ ನಿಂತು ಮಾಡಿಸಿಕೊಟ್ಟಿದ್ದಾರೆ. ನೀವು ಗಾಯತ್ರಕ್ಕನಿಗೆ ನೀಡುವ ಒಂದೊಂದು ಮತವೂ ತಾಲೂಕಿನ ಅಭಿವೃದ್ಧಿಗೆ, ನನಗೆ ಹಾಕಿದಂತೆ ಎಂದು ಹೇಳಿದರು.
- - -ಕೋಟ್ ನೀವು ನೀಡುವ ಒಂದೊಂದು ಮತವೂ ರಾಜ್ಯ, ರಾಷ್ಟ್ರವನ್ನು ಸಮೃದ್ಧಿ ಕಡೆಗೆ ಕೊಂಡೊಯ್ಯುತ್ತದೆ. ದೇಶವನ್ನು ಸುರಕ್ಷಿತವಾಗಿಡುತ್ತದೆ. ದೇಶವು ಎಲ್ಲಾ ದೃಷ್ಟಿಯಿಂದ ಸಮೃದ್ಧವಾಗಿರಬೇಕು. ಅದಕ್ಕಾಗಿ ನೀವು, ನಿಮ್ಮ ಕುಟುಂಬದವರು, ಪ್ರತಿಯೊಬ್ಬ ಮತದಾರು ತಮ್ಮ ಅಮೂಲ್ಯ ಮತವನ್ನು ಬಿಜೆಪಿಯ ಚಿಹ್ನೆಯಾದ ಕಮಲದ ಹೂವಿಗೆ ನೀಡುವ ಮೂಲಕ ನನಗೆ ಆಶೀರ್ವದಿಸಬೇಕು
- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ- - -ಟಾಪ್ ಕೋಟ್ ಬರದಿಂದ ರೈತರು ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಸುಮಾರು ₹652 ಕೋಟಿ ಹಣ ನೀಡಬೇಕಿದೆ. ಈ ಹಣ ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲೇ ಇಡೀ ರಾಜ್ಯವನ್ನು ದಿವಾಳಿ ಮಾಡುತ್ತಿದೆ
- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ- - - -17ಕೆಡಿವಿಜಿ10, 11, 12:
ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಹೊನ್ನಾಳಿ ತಾ. ಕುಂಬಳೂರು ಗ್ರಾಮದ ಕುರುಬ ಸಮುದಾಯದ ಕಂಬಳಿ ಹೊದಿಸಿ, ನಾವು ನಿಮ್ಮ ಜೊತೆಗಿದ್ದೇವೆ. ನಿಮ್ಮ ಗೆಲುವು ಖಚಿತ ಎಂಬ ಭವಿಷ್ಯ ನುಡಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇದ್ದರು.