ಕೋವಿಡ್ ಸಂಕಷ್ಟದಲ್ಲಿ ಎಚ್ಡಿಕೆ ಕುಟುಂಬ ಎಲ್ಲಿ ಹೋಗಿತ್ತು

| Published : Mar 29 2024, 12:46 AM IST

ಕೋವಿಡ್ ಸಂಕಷ್ಟದಲ್ಲಿ ಎಚ್ಡಿಕೆ ಕುಟುಂಬ ಎಲ್ಲಿ ಹೋಗಿತ್ತು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಕೋವಿಡ್ ಸಮಯದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾಗ ಅವರ ಪರವಾಗಿ ಡಿ.ಕೆ. ಸುರೇಶ್ ನಿಂತಿದ್ದರು. ಇದು ಮಾನವೀಯತೆ, ಹೃದಯವಂತಿಕೆಯಲ್ಲವೇ? ಆಗ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಎಲ್ಲಿ ಹೋಗಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

ರಾಮನಗರ: ಕೋವಿಡ್ ಸಮಯದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾಗ ಅವರ ಪರವಾಗಿ ಡಿ.ಕೆ. ಸುರೇಶ್ ನಿಂತಿದ್ದರು. ಇದು ಮಾನವೀಯತೆ, ಹೃದಯವಂತಿಕೆಯಲ್ಲವೇ? ಆಗ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಎಲ್ಲಿ ಹೋಗಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಈ ಜಿಲ್ಲೆಯ ಕ್ಷೇತ್ರವೊಂದರ ಶಾಸಕರಾಗಿದ್ದರು. ಕೋವಿಡ್ ಬಂದಾಗ ಈ ಭಾಗದ ಬಡವರ ರಕ್ಷಣೆಗೆ ಒಬ್ಬರು ಮುಂದೆ ಬರಲಿಲ್ಲ. ಡಿ.ಕೆ ಸುರೇಶ್ ಅವರು ಪ್ರತಿ ಕುಟುಂಬಕ್ಕೆ ಆಹಾರ ಪದಾರ್ಥ, ಮೆಡಿಕಲ್ ಕಿಟ್ ವಿತರಿಸಿದರು. ರೈತರಿಗೆ ಮಾರುಕಟ್ಟೆ ಇಲ್ಲದಾಗ, ರೈತರು ಬೆಳೆದ ತರಕಾರಿಗಳನ್ನು ಕೋಟ್ಯಂತರ ರು. ಖರ್ಚು ಮಾಡಿ ಖರೀದಿಸಿ ಅದನ್ನು ಜನಸಾಮಾನ್ಯರಿಗೆ ಉಚಿತವಾಗಿ ಹಂಚಿ, ರೈತರು ಬಡವರ ರಕ್ಷಣೆ ಮಾಡಿದರು ಎಂದರು.

ಸರ್ಕಾರ ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಜೆಸಿಬಿಯಲ್ಲಿ ಎಸೆಯುತ್ತಿತ್ತು. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಮನೆಯವರು ಮುಂದೆ ಬಾರದಿದ್ದಾಗ ಡಿ.ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಶವಗಳ ಅಂತ್ಯ ಸಂಸ್ಕಾರ ಮಾಡಿದರು. ಸೋಂಕಿತರ ಸಮಸ್ಯೆ ಆಲಿಸಿದರು. ಅವರಿಗೆ ಧೈರ್ಯ ತುಂಬಿದರು. ಇದು ಮಾನವೀಯತೆ ಅಲ್ಲವೇ? ಇದು ಹೃದಯವಂತಿಕೆಯಲ್ಲವೇ? ಕುಮಾರಣ್ಣ ಆಗ ಎಲ್ಲಿ ಹೋಗಿದ್ದರು? ಅವರ ಅಭ್ಯರ್ಥಿ ಎಲ್ಲಿ ಹೋಗಿದ್ದರು? ಅವರ ಕುಟುಂಬ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಕಷ್ಟದಲ್ಲಿ ಜನರಿಗೆ ಸಹಾಯ ಮಾಡಲು ಕುಮಾರಸ್ವಾಮಿ ಅವರಿಂದ ಆಗಲಿಲ್ಲ. ಕೊಟ್ಟ ಕುದುರೆಯನು ಏರಲರಿಯದೇ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇ ರೀತಿ ಕುಮಾರಣ್ಣ ಅಧಿಕಾರ ಇಲ್ಲದಾಗ ಏನೂ ಮಾಡಲಿಲ್ಲ, ಅಧಿಕಾರ ಹೋದಾಗ ಏನು ಮಾಡುತ್ತೀರಿ ಎಂದು ಕೇಳಿದರು.

ನಾವು ಈ ಕ್ಷೇತ್ರದ ಅಭಿವೃದ್ಧಿಗೆ ಬದ್ಧ:

ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡಿತು. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡಿದಾಗ ರಾಜ್ಯದ ಪರ ಡಿ.ಕೆ.ಸುರೇಶ್ ಧ್ವನಿ ಎತ್ತಿ, ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟ ಮಾಡಿದರು. ಸುರೇಶ್ ಅವರನ್ನು ಆಯ್ಕೆ ಮಾಡಿದರೆ ಏನು ಲಾಭ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ನರೇಗಾ ಯೋಜನೆಯಲ್ಲೇ 2 ಸಾವಿರ ಕೋಟಿ ಅನುದಾನ ತಂದು ದೇಶದಲ್ಲೇ ಮಾದರಿ ತಾಲೂಕಾಗಿ ಮಾಡಿದರು. ಈ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಿ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಿಸಿದ್ದಾರೆ. ಪ್ರತಿ ಎರಡು ಮೂರು ರೈತರಿಗೆ ಒಂದೊಂದು ಟ್ರಾನ್ಸ್ ಫಾರ್ಮರ್ ಕೊಡಲಾಗಿದೆ. ಇಂತಹ ವ್ಯವಸ್ಥೆ ಈ ಕ್ಷೇತ್ರದ ಹೊರತಾಗಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಬೇರೆ ಯಾವುದೇ ಕ್ಷೇತ್ರದಲ್ಲಿಲ್ಲ ಎಂದರು.

ಈ ಜಿಲ್ಲೆಯ ಬಡವರಿಗೆ ನಿವೇಶನ ನೀಡಬೇಕೆಂಬುದು ಡಿ.ಕೆ.ಸುರೇಶ್ ಅವರ ಕನಸು. ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ನಾವು ಮನವಿ ಮಾಡಿದರೂ ಅವರು ಒಂದೇ ಒಂದು ಆಶ್ರಯ ಸಮಿತಿ ಸಭೆಗೂ ಬರಲಿಲ್ಲ. ನಾವು ಚರ್ಚೆ ಮಾಡಿ 60 ಎಕರೆ ಜಾಗ ಮೀಸಲಿಡಲು ತೀರ್ಮಾನಿಸಿದೆವು. ವಿಧಾನಸಭೆ ಚುನಾವಣೆಯಲ್ಲಿ ನನ್ನ ಮನವಿಗೆ ಸ್ಪಂದಿಸಿ ನೀವು ಇಕ್ಬಾಲ್ ಹುಸೇನ್ ಅವರನ್ನು ಆರಿಸಿ ಕಳುಹಿಸಿದ್ದೀರಿ. ಈಗ ಅವರಿಬ್ಬರು ಸೇರಿ ಬಡವರಿಗೆ ನಿವೇಶನ ನೀಡಲು 100 ಎಕರೆ ಜಾಗವನ್ನು ಮೀಸಲಿಡಲು ತೀರ್ಮಾನಿಸಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರಕ್ಕೆ ಕುಡಿವ ನೀರು ಪೂರೈಸಲು 540 ಕೋಟಿ ಯೋಜನೆ ರೂಪಿಸಲಾಗಿದೆ ಎಂದರು.

ಸುರೇಶ್ ನನ್ನ ಸಹೋದರ ಎನ್ನುವುದನ್ನು ಪಕ್ಕಕ್ಕಿಡಿ. ಒಬ್ಬ ಸಂಸತ್ ಸದಸ್ಯನಿಗಿಂತ ಪಂಚಾಯ್ತಿ ಸದಸ್ಯನಂತೆ ನಿಮ್ಮ ಕೆಲಸ ಮಾಡಿದ್ದಾರೆ. ಈ ಕ್ಷೇತ್ರದಿಂದ ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಅನೇಕರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ನಿಮ್ಮ ಹಳ್ಳಿಗೆ ಎಷ್ಟು ಬಾರಿ ಬಂದಿದ್ದಾರೆ, ನಿಮ್ಮ ಕಷ್ಟಗಳಿಗೆ ಯಾವ ರೀತಿ ಸ್ಪಂದಿಸಿದ್ದಾರೆ ಎಂಬುದನ್ನು ಅವರ ಆತ್ಮಸಾಕ್ಷಿ ಹಾಗೂ ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ , ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ, ರಾಮಲಿಂಗಾರೆಡ್ಡಿ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ , ಶಾಸಕರಾದ ಕೊತ್ನೂರು ಮಂಜುನಾಥ್, ಇಕ್ಬಾಲ್ ಹುಸೇನ್, ಬಾಲಕೃಷ್ಣ, ಬಿ.ಶಿವಣ್ಣ, ವಿಧಾನ‌ ಪರಿಷತ್ ಸದಸ್ಯ ಸುದಾಮ ದಾಸ್, ಪುಟ್ಟಣ್ಣ, ಎಸ್ .ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆ.ರಾಜು ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌..........

ಕುಮಾರಸ್ವಾಮಿಗೆ ಟಾಟಾ ಬೈಬೈ ಹೇಳಿ: ಡಿಕೆಶಿ

ರಾಮನಗರ: ನೀವು ಯಾರಿಗೆ ಅಧಿಕಾರ ಕೊಟ್ಟಿದ್ದೀರೊ ಅವರು ನಿಮ್ಮನ್ನು ನಂಬದೇ ಪಕ್ಕದ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ನಿಮ್ಮ ಪರ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಅವರಿಗೆ ಟಾಟಾ ಬೈ ಬೈ ಹೇಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ದಳದ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಲ್ಲಿ ನಿಲ್ಲಿಸಿದ್ದಾರೆ. ದಳ ಈಗ ಎಲ್ಲಿದೆ ಕುಮಾರಣ್ಣ. ಇದೇ ಜಿಲ್ಲೆಯಿಂದ 2 ಬಾರಿ ಮುಖ್ಯಮಂತ್ರಿಯಾಗಿ ಈ ಜಿಲ್ಲೆ ಬಿಟ್ಟು ಮಂಡ್ಯಕ್ಕೆ ಹೋಗುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ಆ ಪಕ್ಷದ ನಾಯಕರಿಗೆ ನಂಬಿಕೆ ಇಲ್ಲ. ಈ ಜಿಲ್ಲೆಯ ಜನ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದರು. ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿತು. ನೀವೆಲ್ಲರೂ ಸೇರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದಿರಿ. ನಂತರ ನಾವು ಅವರಿಗೆ ಬೆಂಬಲ ನೀಡಿ ಒಂದು ಬಾರಿ ಮುಖ್ಯಮಂತ್ರಿ ಮಾಡಿದೆವು. ಆದರೂ ಅವರ ಕುಟುಂಬದ ಸದಸ್ಯರನ್ನು ಬಿಜೆಪಿ ಪಕ್ಷದಿಂದ ಕಣಕ್ಕಿಳಿಸುತ್ತಿದ್ದಾರೆ. ಇದರಿಂದಾಗಿ ನಮಗೆ ಯಾವುದೇ ಬೇಸರವಿಲ್ಲ. ಈ ಹೋರಾಟ ನಮಗೆ ಹೊಸತಲ್ಲ. ಅಂದೂ ಹೋರಾಟ ಮಾಡಿದ್ದೆವು, ಇಂದೂ ಹೋರಾಡುತ್ತಿದ್ದೇವೆ ಎಂದರು.

ಬಾಕ್ಸ್‌.........

ಸೋಲಿನ ಭೀತಿಯಿಂದ ಪಕ್ಷಾತೀತ ಹೋರಾಟಕ್ಕೆ ಕರೆ

ರಾಮನಗರ: ಕಾವೇರಿ ಜಲಾನಯನ ಪ್ರದೇಶದ ಮೂರು ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರು ಸ್ಪರ್ಧೆ ಮಾಡುತ್ತಿದ್ದಾರೆ. ಜನರು ಎಲ್ಲಿ ಅವರನ್ನು ತಿರಸ್ಕರಿಸುತ್ತಾರೊ ಎಂಬ ಭಯದಿಂದ ದೇವೇಗೌಡರು ಮೇಕೆದಾಟು ಯೋಜನೆಗೆ ಪಕ್ಷಾತೀತ ಹೋರಾಟ ಮಾಡಬೇಕೆಂದು ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದರು.

ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದೆವು. ಆಗ ದೇವೇಗೌಡರು ಬೆಂಬಲ ನೀಡಲಿಲ್ಲ. ಈಗ ತಮ್ಮ ಕುಟುಂಬದವರ ಸೋಲಿನ ಭೀತಿಯಿಂದ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕೆಂದು ಹೇಳುತ್ತಿದ್ದಾರೆ. ದೇವೇಗೌಡರೇ ಈ ಜನರು ದಡ್ಡರಲ್ಲ. ನಿಮ್ಮನ್ನು, ಕುಮಾರಣ್ಣನವರನ್ನು ನೋಡಿದ್ದಾರೆ. ಇಂದು ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ನಾನು ನೀರಾವರಿ ಹಾಗೂ ಬೆಂಗಳೂರಿನ ಜವಾಬ್ದಾರಿ ತೆಗೆದುಕೊಂಡಿರುವುದೇ ಈ ಯೋಜನೆ ಮಾಡಿ ಇತಿಹಾಸ ಸೃಷ್ಟಿಸಲು. ಈ ಯೋಜನೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದೇವೆ. ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿಯನ್ನು ಗುರುತಿಸಿ ಸರ್ವೇ ಮಾಡಲಾಗುತ್ತಿದೆ. ಈ ಯೋಜನೆ ಜಾರಿಯಾದರೆ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜನರಿಗೂ ಪ್ರಯೋಜನವಾಗಲಿದೆ ಎಂದರು.

ಯಾರು ಬೆಂಬಲ ನೀಡುತ್ತಾರೋ ಇಲ್ಲವೋ ನಾವಂತೂ ಈ ಯೋಜನೆ ಮಾಡೇ ಮಾಡುತ್ತೇವೆ. ಈ ವಿಚಾರವಾಗಿ ನ್ಯಾಯಾಲಯದ ಆದೇಶ ಪಾಲಿಸುತ್ತೇವೆ. ಈ ಹಿಂದೆ 450 ಟಿಎಂಸಿ ನೀರು ಸಮುದ್ರ ಸೇರಿದೆ. ಅದರಲ್ಲಿ 64 ಟಿಎಂಸಿ ನೀರನ್ನು ಹಿಡಿದಿಟ್ಟು ಈ ಭಾಗದ ಜನರ ಬದುಕು ಹಸನ ಮಾಡಲು, ಪ್ರತಿ ಕುಟುಂಬಕ್ಕೆ ಕುಡಿಯಲು ಕಾವೇರಿ ನೀರು ನೀಡಲು ನಾವು ತೀರ್ಮಾನಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

28ಕೆಆರ್ ಎಂಎನ್ 7.ಜೆಪಿಜಿ

ರಾಮನಗರದ ವಿಜಯನಗರದ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು.