ಸಾರಾಂಶ
ಗೋಕರ್ಣ: ಜಗತ್ತಿನ ಯಾವುದೇ ಕಡೆಗಳಲ್ಲಿ ನೆಲೆಸಿದರೂ ನಮ್ಮ ಭಾಷೆ- ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯಬಾರದು ಎಂದು ರಾಘವೇಶ್ವರ ಭಾರತೀ ಶ್ರೀ ಹೇಳಿದರು.ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ೪೨ನೇ ದಿನವಾದ ಬುಧವಾರ ಬ್ರಿಟನ್ (ಯುಕೆ) ವಲಯದ ಶಿಷ್ಯರಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ಹವ್ಯಕ ಸಮುದಾಯಕ್ಕೆ ವಿಶಿಷ್ಟ ಪರಂಪರೆ ಇದೆ. ಅದನ್ನು ಉಳಿಸಿ, ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಹೊಣೆ ನಮ್ಮೆಲ್ಲರದು ಎಂದು ಹೇಳಿದರು.ಎಲ್ಲೇ ಇದ್ದರೂ ಸ್ವಧರ್ಮದ ಆಚರಣೆ, ಸ್ವಭಾಷೆಯೇ ಶ್ರೇಷ್ಠ. ವ್ಯವಹಾರಕ್ಕೆ ಯಾವುದೇ ಭಾಷೆಗಳನ್ನು ಅನಿವಾರ್ಯವಾಗಿ ಬಳಸಿದರೂ ನಮ್ಮ ಮನೆಯಲ್ಲಿ ಮಾತೃಭಾಷೆಯನ್ನೇ ಬಳಸುವುದನ್ನು ಮರೆಯಬಾರದು. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ; ಅದು ನಮ್ಮ ಸಂಸ್ಕೃತಿ- ಪರಂಪರೆಯ ವಾಹಕವೂ ಹೌದು. ಭಾಷೆ ಅಳಿದರೆ ಅದು ಪ್ರತಿನಿಧಿಸುವ ಸಂಸ್ಕೃತಿಯೇ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ ಕನ್ನಡದಲ್ಲಿ ಇಂದು ಬಹಳಷ್ಟು ಅಂಗ್ಲ ಹಾಗೂ ಇತರ ಭಾಷೆಯ ಶಬ್ದಗಳು ತುಂಬಿದ್ದು, ಮರೆತು ಹೋಗಿರುವ ಕನ್ನಡ ಪದಗಳನ್ನು ಮತ್ತೆ ಆಚರಣೆ ತರುವ ಮೂಲಕ ಮುಂದಿನ ಪೀಳಿಗೆಗೆ ಶುದ್ಧ ಭಾಷೆಯನ್ನು ಉಳಿಸಿಹೋಗೋಣ ಎಂದರು.ಕೇರಳ ಬಿಜೆಪಿ ಉತ್ತರ ವಲಯ ಅಧ್ಯಕ್ಷ ಮತ್ತು ಹಿರಿಯ ವಕೀಲ ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾನ ಗೋಸಾಡ, ಪಕ್ಷದ ಮುಖಂಡರಾದ ವಿಜಯಕುಮಾರ್ ರೈ, ಮಂಜೇಶ್ವರ ಮಂಡಲ ಸಮಿತಿ ಸದಸ್ಯ ಸುಬ್ರಹ್ಮಣ್ಯ ಭಟ್ ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ತಂಡದ ಅರವಿಂದ ಧರ್ಬೆ, ನಿಖಿಲ್, ಪಿಆರ್‌ಒ ಎಂ.ಎನ್.ಮಹೇಶ ಭಟ್ಟ, ಎಂಜಿನಿಯರ್ ವಿಷ್ಣು ಬನಾರಿ, ಸುಚೇತನ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.