ನೀರಿನ ವೈಜ್ಞಾನಿಕ ಬಳಕೆ ಆಗಲಿ

| Published : Oct 11 2024, 11:47 PM IST

ಸಾರಾಂಶ

ಭಾರತದಲ್ಲಿ ನೀರಿನ ವೈಜ್ಞಾನಿಕ ಬಳಕೆ ಸಮರ್ಪಕವಾಗಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ದುರ್ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಬೆಳೆ ಹಾನಿಯಾಗುತ್ತಿದೆ. ಭೂಮಿ ಜವುಳಾಗಿ ಮಣ್ಣಿನ ಸವೆತ ಉಂಟಾಗುತ್ತಿದೆ.

ಧಾರವಾಡ:

ನೀರು ಸಮಸ್ತ ಜೀವಿಗಳ ಜೀವಾಳ. ಭಾರತದಲ್ಲಿ ನೀರಿನ ಅವೈಜ್ಞಾನಿಕ ಬಳಕೆಯಿಂದ ಭವಿಷ್ಯದಲ್ಲಿ ಆತಂಕ ಸೃಷ್ಟಿಯಾಗಲಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಏರ್ಪಡಿಸಿದ್ದ ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಸಂಸ್ಮರಣೆಯಲ್ಲಿ ‘ಕೃಷಿಯಲ್ಲಿ ನೀರಿನ ಸದ್ಬಳಕೆ’ ಕುರಿತು ಉಪನ್ಯಾಸ ನೀಡಿದರು.

ಭಾರತದಲ್ಲಿ ನೀರಿನ ವೈಜ್ಞಾನಿಕ ಬಳಕೆ ಸಮರ್ಪಕವಾಗಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ದುರ್ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಬೆಳೆ ಹಾನಿಯಾಗುತ್ತಿದೆ. ಭೂಮಿ ಜವುಳಾಗಿ ಮಣ್ಣಿನ ಸವೆತ ಉಂಟಾಗುತ್ತಿದೆ. ನೀರಿನ ಸದ್ಬಳಕೆಗಾಗಿ ರೈತರು ತಾವು ಸಾಗುವಳಿ ಮಾಡುತ್ತಿರುವ ಜಮೀನಿನ ಸುತ್ತಲೂ ನೀರು ಬಸಿದು ಹೋಗಲು ಕಂದಕಗಳನ್ನು ನಿರ್ಮಿಸಬೇಕು. ಹೊಲಗಳಲ್ಲಿ ಮಣ್ಣು ಸವೆತ ತಡೆಯಲು ಬದು ಹಾಗೂ ಕೆರೆಗಳ ನಿರ್ಮಿಸುವ ಅಗತ್ಯವಿದೆ. ನೀರಿನ ಸಮರ್ಪಕ ಬಳಕೆಗೆ ಜನಜಾಗೃತಿ ಅಗತ್ಯವಾಗಿದೆ ಎಂದರು.

ರೈತರು ನೀರಿನ ದುಂದು ವೆಚ್ಚ ಮಾಡದೇ ಬೆಳೆ ಪದ್ಧತಿ ಅನುಸರಿಸಿ, ಬೆಳೆಯ ಲಕ್ಷಣಗಳನ್ನು ಗುರುತಿಸಿ ನೀರನ್ನು ದುರ್ಬಳಕೆಯಾಗದಂತೆ ಹಿತ-ಮಿತವಾಗಿ ಉಪಯೋಗಿಸಬೇಕು. ಭಾರತದಲ್ಲಿ ‘ಸಮಗ್ರ ಕೃಷಿ ಪದ್ಧತಿ’ ಅನುಸರಿಸಿ ರೈತರು ಕಡಿಮೆ ಖರ್ಚಿನಲ್ಲಿ ಆದಾಯ ದ್ವಿಗುಣವಾಗುವಂತೆ ಯೋಜನಾಬದ್ಧ ಕೃಷಿ ಪದ್ಧತಿ ಅನುಸರಿಸಬೇಕು. ನೈಸರ್ಗಿಕ ಸಂಪನ್ಮೂಲ ಸದ್ಬಳಕೆಯೊಂದಿಗೆ ಪರಿಸರಕ್ಕೆ ಪೂರಕವಾದ ಸುಸ್ಥಿರ ಕೃಷಿ ಪದ್ಧತಿ ಅಗತ್ಯ ಎಂದು ಹೇಳಿದರು.

ದತ್ತಿದಾನಿ ಈಶ್ವರಚಂದ್ರ ಹೊಸಮನಿ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶ್ರೀಶೈಲ ಹುದ್ದಾರ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು. ಶಿವಾನಂದ ಭಾವಿಕಟ್ಟಿ, ಬಿ.ಡಿ. ಪಾಟೀಲ, ಎಂ.ಡಿ. ಪಾಟೀಲ, ಡಾ. ಯರಗಟ್ಟಿ, ಸಿದ್ದಣ್ಣ ಕಂಬಾರ ಮತ್ತಿತರರು ಇದ್ದರು.