ಸಿಎಂ ಸಂವಿಧಾನದ ಪರವೋ, ಶರಿಯತ್‌ ಕಾನೂನು ಪರವೋ

| Published : Dec 05 2024, 12:33 AM IST

ಸಾರಾಂಶ

ಕಂಡವರ ಆಸ್ತಿ ಕಬಳಿಸಲು ಅಲ್ಲ. ದಾನವಾಗಿ ಬಂದ ಆಸ್ತಿ ನಿರ್ವಹಿಸಲು ವಕ್ಫ್ ಅಸ್ತಿತ್ವಕ್ಕೆ ಬಂದಿದೆ. ನ್ಯಾಯಾಂಗ ವ್ಯವಸ್ಥೆಯನ್ನೂ ಮೀರಿರುವ ವಕ್ಫ್ ಮಂಡಳಿಯ ಬಗ್ಗೆ ಮುಖ್ಯಮಂತ್ರಿಯಾಗಿ ಅಲ್ಲ, ಓರ್ವ ವಕೀಲರಾಗಿ ಸಿದ್ದರಾಮಯ್ಯ ಎದೆಗಾರಿಕೆ ತೋರಿಸಬೇಕಿದೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನದ ಪರವೋ... ಶರಿಯತ್‌ ಕಾನೂನು ಪರವೋ ಎಂಬುದನ್ನು ಸ್ಪಷ್ಟಪಡಿಸಲಿ. ಆಸ್ತಿ ಕಬಳಿಸುತ್ತಿರುವ ವಕ್ಫ್‌ ಮಂಡಳಿಯ ನ್ಯಾಯಾಧಿಕರಣದಿಂದ ಜನರಿಗೆ ನ್ಯಾಯ ದೊರೆಯಲು ಸಾಧ್ಯವೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಹೆಸರಿನಲ್ಲಿ 90 ಸಾವಿರ ಎಕರೆ ಜಮೀನು ಕಬಳಿಸಲು ಯೋಜನೆ ಸಿದ್ಧವಾಗಿತ್ತು. ಧಾರವಾಡ ಜಿಲ್ಲೆಯಲ್ಲೇ 3 ಸಾವಿರ ಎಕರೆ ಭೂಮಿ ಕಬಳಿಸಲಾಗಿತ್ತು. 1500 ವರ್ಷ ಇತಿಹಾಸ ಹೊಂದಿರುವ, ಚಾಲುಕ್ಯರ ಕಾಲದ ಸೋಮೇಶ್ವರ ದೇವಾಲಯ ಹಾಗೂ ಸಿಂದಗಿಯಲ್ಲಿನ 13ನೇ ಶತಮಾನದ ವಿರಕ್ತಮಠ ಮಠದ ಆಸ್ತಿಯೂ ವಕ್ಫ್‌ಗೆ ಸಂಬಂಧಿಸಿದ್ದು ಎಂದು ನಮೂದಾಗಿದೆ. ಅಸಲಿಗೆ ಆಗ ಇಸ್ಲಾಂ ಧರ್ಮವೇ ಇರಲಿಲ್ಲ. ಸಿದ್ದರಾಮಯ್ಯ ಮನೆದೇವರು ಆಳಂದದ ಬೀರಲಿಂಗೇಶ್ವರನ ದೇವಾಲಯದ ಆಸ್ತಿಯೂ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ದಾಖಲಾಗಿದೆ. ಈಗಲಾದರೂ ಮುಖ್ಯಮಂತ್ರಿ ಎಚ್ಚರಗೊಳ್ಳಲಿ ಎಂದರು.

ಕಂಡವರ ಆಸ್ತಿ ಕಬಳಿಸಲು ಅಲ್ಲ. ದಾನವಾಗಿ ಬಂದ ಆಸ್ತಿ ನಿರ್ವಹಿಸಲು ವಕ್ಫ್ ಅಸ್ತಿತ್ವಕ್ಕೆ ಬಂದಿದೆ. ನ್ಯಾಯಾಂಗ ವ್ಯವಸ್ಥೆಯನ್ನೂ ಮೀರಿರುವ ವಕ್ಫ್ ಮಂಡಳಿಯ ಬಗ್ಗೆ ಮುಖ್ಯಮಂತ್ರಿಯಾಗಿ ಅಲ್ಲ, ಓರ್ವ ವಕೀಲರಾಗಿ ಸಿದ್ದರಾಮಯ್ಯ ಎದೆಗಾರಿಕೆ ತೋರಿಸಬೇಕಿದೆ. ಈ ಮೂಲಕ ಕಾಂಗ್ರೆಸ್, ಸಂವಿಧಾನದ ಪರವೋ ಅಥವಾ ಶರಿಯಾ ಪರವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

ಜಮೀರನನ್ನು ವಜಾಗೊಳಿಸಲಿ:

ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ಸಚಿವ ಜಮೀರ್‌ಅಹ್ಮದ್ ಖಾನ್ ವಕ್ಫ್ ಅದಾಲತ್ ನಡೆಸುತ್ತಿದ್ದಾರೆ. ವಕ್ಫ್ ಅದಾಲತ್ ನಡೆಸಲು ಸಂವಿಧಾನದ ಅಡಿ ಅವಕಾಶವಿದೆಯೇ? ಎಂಬುದನ್ನು ಸ್ಪಷ್ಟಪಡಿಸಲಿ. ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿರುವ ಜಮೀರ್‌ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ವಕ್ಫ್ ದಾಖಲಾತಿಗಳ ಬಗ್ಗೆ ಮರುಶೀಲನೆಯಾಗಲಿ ಎಂದು ಆಗ್ರಹಿಸಿದರು.

ಸೂಕ್ತ ಕ್ರಮ ಕೈಗೊಳ್ಳುತ್ತಾರೆ:

ಬಸನಗೌಡ ಪಾಟೀಲ ಯತ್ನಾಳ ಅವರು ಪ್ರತ್ಯೇಕ ತಂಡ ಕಟ್ಟಿಕೊಂಡು ವಕ್ಫ್ ಮಂಡಳಿಯ ವಿರುದ್ಧ ಹೋರಾಟ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಿ.ಟಿ. ರವಿ, ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಿಲ್ಲ. ಪಕ್ಷದ ವರಿಷ್ಠರು ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಅವರೇ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

₹3, 4 ಸಾವಿರ ಕೋಟಿ ಹಗರಣ:

ಇಡಿ ಮಧ್ಯಂತರ ವರದಿಯಲ್ಲಿ ಮುಡಾದಲ್ಲಿ ₹700 ಕೋಟಿಯಷ್ಟು ಹಗರಣವಾಗಿದೆ ಎಂದು ಹೇಳಿರಬಹುದು. ನಮ್ಮ ಮಾಹಿತಿ ಪ್ರಕಾರ ₹3ರಿಂದ ₹4 ಸಾವಿರ ಕೋಟಿ ಹಗರಣವಾಗಿದೆ. ಕೇವಲ ಮುಡಾದಲ್ಲಿ ಮಾತ್ರ ಹಗರಣ ನಡೆದಿಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ. ಮುಡಾ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ತನಿಖೆ ನಡೆಯಬೇಕಿದೆ. ಬಿಡಿಎದಲ್ಲೂ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆದಿದೆ. ಈ ಕುರಿತೂ ತನೆಖೆಯಾಗಲಿ ಎಂದು ಒತ್ತಾಯಿಸಿದರು.

ಜನರಿಂದ ಅಹವಾಲು ಆಲಿಕೆ:

ಬಿಜೆಪಿಯಲ್ಲಿ 3 ತಂಡ ರಚಿಸಲಾಗಿದ್ದು, ಇವು ರಾಜ್ಯಾದ್ಯಂತ ಸಂಚರಿಸಿ ವಕ್ಫ್‌ನಿಂದ ಆಗಿರುವ ಸಮಸ್ಯೆ ಕುರಿತು ಅಹವಾಲು ಪಡೆದುಕೊಂಡು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿವೆ. ನಮ್ಮ ತಂಡವು ಬುಧವಾರ, ಗುರುವಾರ ಹಾಗೂ ಶುಕ್ರವಾರ ಮೂರು ದಿನಗಳ ಕಾಲ ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರಿನಲ್ಲಿ ಸಂಚರಿಸಿ ಸಮಸ್ಯೆ ಆಲಿಸಲಿದೆ ಎಂದರು.