ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಧೈರ್ಯವನ್ನು ಯಾವ ಸರ್ಕಾರಗಳು ಮಾಡುತ್ತಿಲ್ಲ

| Published : Apr 21 2025, 12:47 AM IST

ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಧೈರ್ಯವನ್ನು ಯಾವ ಸರ್ಕಾರಗಳು ಮಾಡುತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳೂ ಸಹ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಧೈರ್ಯ ಮಾಡುತ್ತಿಲ್ಲ. ಕಾರಣ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಾವು ಗಟ್ಟಿಯಾದರೆ ಮಾತ್ರ ಸಂವಿಧಾನ ಗಟ್ಟಿಗೊಳಿಸಲು ಸಾಧ್ಯ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳೂ ಸಹ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಧೈರ್ಯ ಮಾಡುತ್ತಿಲ್ಲ. ಕಾರಣ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಾವು ಗಟ್ಟಿಯಾದರೆ ಮಾತ್ರ ಸಂವಿಧಾನ ಗಟ್ಟಿಗೊಳಿಸಲು ಸಾಧ್ಯ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಡಾ. ಎಚ್.ಸಿ. ಮಹದೇವಪ್ಪರವರ ಅಭಿಮಾನಿಗಳ ಬಳಗದ ವತಿಯಿಂದ ಅವರ ಜನ್ಮ ದಿನದ ಅಂಗವಾಗಿ ನಡೆದ ‘ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂವಿಧಾನ ರಕ್ಷಿಸಿ ಎಂಬ ಕೂಗು ಕಳೆದ ೧೩ ವರ್ಷಗಳಿಂದ ಕೇಳಿ ಬರುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸಂವಿಧಾನ ಹಾಗೂ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ೪೦೦ ಸೀಟು ನಮಗೆ ಕೊಡಿ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ್ದರು. ಆದರೆ, ಅದೃಷ್ಟವಶಾತ್ ನಮ್ಮವರು ಅವರ ಪಿತೂರಿಗೆ ಬಲಿಯಾಗಲಿಲ್ಲ. ಸಂವಿಧಾನದ ಸಲವತ್ತು ಪಡೆದುಕೊಂಡವರು ಹಾಗೂ ಅದರ ಫಲಾನುಭವಿಗಳು ಗಟ್ಟಿ ಧ್ವನಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದೆ ಎಂದರು.

ಈಗ ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಇದೆ. ಡಾ. ಎಚ್.ಸಿ. ಮಹದೇವಪ್ಪ, ಡಾ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಮುನಿಯಪ್ಪ ಸೇರಿದಂತೆ ಹಲವರು ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಪ್ರಬಲ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪರವಾಗಿದ್ದಾರೆ. ಆದರೂ ಸಹ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಡೆದ ಭರ್ತಿ ಬಿಟ್ಟರೆ ನಂತರ ಬಂದ ಸರ್ಕಾರಗಳು ಆ ಕೆಲಸ ಮಾಡುತ್ತಿಲ್ಲ. ಸರ್ಕಾರದಿಂದ ರಚನೆಯಾದ ಹಾವನೂರು ವರದಿ, ಮಂಡಲ ಆಯೋಗ ಹಾಗೂ ಕಾಂತರಾಜ್ ಆಯೋಗಗಳು ಸಹ ನಮ್ಮ ಪರವಾಗಿಲ್ಲ. ಹಿಂದುಳಿದ ವರ್ಗಗಳ ಪರವಾಗಿ ವರದಿಗಳನ್ನು ನೀಡಿದವು. ಅಲ್ಲದೇ ಪರಿಶಿಷ್ಟ ಸಮುದಾಯಗಳ ಪರವಾದ ಧ್ವನಿ ಬರಲಿಲ್ಲ. ಹೀಗಾಗಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಯಾಗುತ್ತಿಲ್ಲ. ಇಂಥ ಪರಿಸ್ಥಿತಿಯನ್ನು ನಾವೇ ತಂದು ಕೊಂಡಿದ್ದೇವೆ. ನಮ್ಮ ತಂದೆ ಪೂಜ್ಯ ಬಿ. ರಾಚಯ್ಯ ಅವರಿಗೂ ಸಹ ಸಿಎಂ ಅಗುವ ಅವಕಾಶ ಕೈ ತಪ್ಪಿತ್ತು. ಪ್ರಬಲವಾದ ಸಮುದಾಯಗಳ ವಿರುದ್ಧ ಪೈಪೋಟಿ ಮಾಡುವುದು ಕಷ್ಟವಾಗಿದೆ ಎಂದು ಕೃಷ್ಣಮೂರ್ತಿ ತಿಳಿಸಿದರು.

ಡಾ. ಮಹದೇವಪ್ಪ ಬಿ.ರಾಚಯ್ಯರವರ ಪ್ರಾಡಕ್ಟ್: ಸಿಎಂ ಸಿದ್ದರಾಮಯ್ಯ ಅವರು ಹೇಳಿದಂತೆ ಮಹದೇವಪ್ಪ ಮತ್ತು ಅವರು ಬಿ. ರಾಚಯ್ಯ ಅವರ ಪ್ರಾಡಕ್ಟ್‌ಗಳು. ಸೋಮಶೇಖರ್ ಅವರಿಗೂ ಸಹ ನಮ್ಮ ತಂದೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು. ಬಿ.ರಾಚಯ್ಯ ಅವರು ಸಿಎಂ ಅಗುವ ಎಲ್ಲಾ ಅರ್ಹತೆ ಇತ್ತು. ಈ ಸಂದರ್ಭದಲ್ಲಿ ಶಾಸಕರ ಸಭೆಯಲ್ಲಿ ಬಿ.ರಾಚಯ್ಯ ಅವರು ಸಿಎಂ ಆಗಬೇಕೆಂದು ಎಚ್.ಸಿ.ಮಹದೇವಪ್ಪ ಅನುಮೋದನೆ ಮಾಡಿದ್ದರು. ಅದರೆ ಸಭೆಯಲ್ಲಿದ್ದ ಸೋಮಶೇಖರ್ ಸೇರಿದಂತೆ ಸಮುದಾಯದ ಶಾಸಕರ್‍ಯಾರು ಅನುಮೋದಿಸಲಿಲ್ಲ. ಎರಡು ಬಾರಿಯೂ ಅವಕಾಶ ತಪ್ಪಿ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಇಂಥ ಪರಿಸ್ಥಿತಿ ಈಗಲು ನಮ್ಮ ಜನಾಂಗದಲ್ಲಿದೆ ಎಂದು ಕೃಷ್ಣಮೂರ್ತಿ ವಿಷಾಧ ವ್ಯಕ್ತಪಡಿಸಿದರು.

ನಾವೆಲ್ಲರೂ ಭಾರತೀಯರು ಎಂಬ ಕೂಗು ಇದೆ. ಆದರೆ, ಒಂದಾಗುತ್ತಿಲ್ಲ. ಸಂವಿಧಾನದಡಿ ಮೀಸಲಾತಿ ಪಡೆದುಕೊಳ್ಳುತ್ತೇವೆ. ಸಂವಿಧಾನ ವಿಚಾರ ಬಂದಾಗ ಮಾತನಾಡುತ್ತಿಲ್ಲ. ಸಂವಿಧಾನದಲ್ಲಿ ಯಾರಿಗುಂಟು. ಯಾರಿಗಲ್ಲ ಮೀಸಲಾತಿ. ಸರ್ವರು ಮೀಸಲಾತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಅವರ್‍ಯಾರು ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನಾನೂ ಸಹ ಬಿಜೆಪಿಯಲ್ಲಿ ಇದ್ದವನು. ನಾನು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ರಾಜೀನಾಮೆ ಕೊಟ್ಟು ಹೊರ ಬಂದೆ. ಡಾ. ಮಹದೇವಪ್ಪ ಅವರ ಹುಟ್ಟುಹಬ್ಬದಂದು ಜಿಲ್ಲೆಯ ಅನೇಕ ಕಡೆ ವಿಚಾರ ಸಂಕಿರಣ ಆಯೋಜನೆ ಮಾಡಿರುವುದು ಒಳ್ಳೆಯದು, ಆದರೆ, ಜಿಲ್ಲಾ ಕೇಂದ್ರದಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.

ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಪೂಜ್ಯ ಬಂತೆ ಡಾ. ಕಲ್ಯಾಣಸಿರಿ ಅವರು ಮಾತನಾಡಿ, ಡಾ. ಮಹದೇವಪ್ಪನವರ ಜನ್ಮ ದಿನದಂದು ವಿಚಾರ ಸಂಕಿರಣ ಬಹಳ ಅರ್ಥ ಪೂರ್ಣವಾಗಿದೆ. ಅಂಬೇಡ್ಕರ್ ಅನುಯಾಯಿಗಳಾದ ನಾವು ಬುದ್ಧನ ಆರಾಧಕರಾಗಿದ್ದೇವೆ. ಮೈಸೂರಿನಲ್ಲಿ ಬುದ್ಧ ವಿಹಾರ ನಿರ್ಮಾಣ ಹಾಗೂ ಚಾ.ನಗರದಲ್ಲಿ ನಿರ್ಮಾಣವಾಗಿರುವ ಬುದ್ಧ ವಿಹಾರಕ್ಕೆ ಕಾರ್ಯಕಲ್ಪ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು, ತಾಲೂಕು ಅಧ್ಯಕ್ಷ ನಲ್ಲೂರು ಸೋಮೇಶ್ವರ, ಬ್ಲಾಕ್ ಅಧ್ಯಕ್ಷ ತೋಟೇಶ್, ತಾಪಂ ಮಾಜಿ ಅಧ್ಯಕ್ಷ ಮಹದೇವ್, ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಸಾಹಿತಿ ದೊಡ್ಡರಾಯಪೇಟೆ ಸಿದ್ದರಾಜು, ನಗರಸಭಾ ಸದಸ್ಯರಾದ ನೀಲಮ್ಮ, ಕೊಳ್ಳೇಗಾಲ ಸುಶೀಲ, ಜಿಪಂ ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಪದ್ಮ , ಉಮ್ಮತ್ತೂರು ಭಾಗ್ಯ, ಛಲವಾದಿ ಸಂಘದ ಅಧ್ಯಕ್ಷ ಶಿವನಾಗಣ್ಣ, ಸಂಚಾಲಕರಾದ ವಡಗೆರೆ ಮಹದೇವಯ್ಯ, ಕೆಂಪನಪುರ ನಾಗರಾಜು, ಪಿ. ಸಂಘಸೇನೆ, ಮೊದಲಾದವರು ಇದ್ದರು.