ವಾಲ್ಮೀಕಿ ಭವನದಿಂದ ಫೈರ್‌ ಸ್ಟೇಷನ್‌ ವರೆಗೆ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಹಿಂದಿನ ಶಾಸಕ ನೆಹರು ಓಲೇಕಾರ ಅವರ ಅವಧಿಯಲ್ಲಿ ವಿಶೇಷ ಆಸಕ್ತಿ ವಹಿಸಿ ಸ್ಥಳೀಯರ ಬೇಡಿಕೆಯಂತೆ ಕಾಂಕ್ರೀಟ್‌ ರಸ್ತೆ ಮಾಡಿಸಿಕೊಟ್ಟಿದ್ದರು.

ನಾರಾಯಣ ಹೆಗಡೆ ಹಾವೇರಿ

ನಗರ ಬೆಳೆದಿದೆ...ಎಲ್ಲೆಡೆ ಜನ ಸಂಚಾರ ಹೆಚ್ಚಿದೆ. ಆದರೆ, ನಗರದ ಪ್ರಮುಖ ಬಡಾವಣೆಯೊಂದಕ್ಕೆ ಮಾತ್ರ ಸರಿಯಾದ ದಾರಿ ಇಲ್ಲ!ಹಾನಗಲ್ಲ ರಸ್ತೆಯಿಂದ ಹಾದಿ ಬಸವಣ್ಣ ನಗರಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಖಾಸಗಿ ಜಾಗದ ಬಳಿ ಬಂದು ‘ಕಟ್’ ಆಗಿದ್ದು, ನೂರಾರು ಕುಟುಂಬಗಳು ನಿತ್ಯ ಸುತ್ತು ಬಳಸಿ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿಯ ಅಗ್ನಿಶಾಮಕ ಠಾಣೆ ಬಳಿಯ ಹಾದಿ ಬಸವಣ್ಣ ಗುಡಿ ಪಕ್ಕದಲ್ಲೇ ಖಾಸಗಿ ಜಾಗ ಬಂದಿರುವುದರಿಂದ ಹಾನಗಲ್ಲ ರಸ್ತೆಗೆ ಸಂಪರ್ಕವೇ ಬಂದ್‌ ಆಗಿದೆ. ಪರಿಣಾಮ, ಹಾದಿ ಬಸವಣ್ಣ ನಗರಕ್ಕೆ ತೆರಳುವವರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಮೂಲಕ ಸುತ್ತು ಹಾಕಬೇಕು. ಇಲ್ಲವೇ ಕೆರಿಮತ್ತಿಹಳ್ಳಿ ರಸ್ತೆಯ ಮೂಲಕ ಸಂಚರಿಸಬೇಕು. ಅಲ್ಪ ದೂರದ ಪ್ರಯಾಣಕ್ಕೂ ಹೆಚ್ಚುವರಿ ಸುತ್ತು ಹಾಕಬೇಕಾದ ಪರಿಸ್ಥಿತಿ ನಿವಾಸಿಗಳದ್ದು.

ರಸ್ತೆ ಇದೆ... ಸಂಪರ್ಕ ಮಾತ್ರ ಇಲ್ಲ: ವಾಲ್ಮೀಕಿ ಭವನದಿಂದ ಫೈರ್‌ ಸ್ಟೇಷನ್‌ ವರೆಗೆ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಹಿಂದಿನ ಶಾಸಕ ನೆಹರು ಓಲೇಕಾರ ಅವರ ಅವಧಿಯಲ್ಲಿ ವಿಶೇಷ ಆಸಕ್ತಿ ವಹಿಸಿ ಸ್ಥಳೀಯರ ಬೇಡಿಕೆಯಂತೆ ಕಾಂಕ್ರೀಟ್‌ ರಸ್ತೆ ಮಾಡಿಸಿಕೊಟ್ಟಿದ್ದರು. ಅಲ್ಲಿಂದ ನಿರ್ಮಾಣಗೊಂಡಿರುವ ಈ ರಸ್ತೆ ಹಾನಗಲ್ ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ಮಾತ್ರ ವಿಫಲವಾಗಿದೆ. ಖಾಸಗಿ ಜಾಗದ ಸಮಸ್ಯೆಯನ್ನು ಬಗೆಹರಿಸಿ ಪರ್ಯಾಯ ಸಂಪರ್ಕ ಕಲ್ಪಿಸುವಲ್ಲಿ ನಗರಸಭೆ ಮುಂದಾಗದ ಪರಿಣಾಮ, ಕೋಟ್ಯಂತರ ರುಪಾಯಿ ಮೌಲ್ಯದ ರಸ್ತೆ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.

ಇನ್ನೊಂದೆಡೆ ಹಾದಿ ಬಸವಣ್ಣ ಗುಡಿ ಪಕ್ಕದಿಂದ ಸಾಗುವ ಕಚ್ಚಾ ರಸ್ತೆಯೇ ನಿವಾಸಿಗಳ ಪಾಲಿಗೆ ಪರ್ಯಾಯ ದಾರಿ. ಆದರೆ, ಈ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಳೆ ಬಂದರೆ ಕೆಸರು, ಕೊಚ್ಚೆ ತುಂಬಿ ಸಂಚಾರ ದುಸ್ತರವಾಗುತ್ತದೆ. ವಾಹನಗಳು ಸಿಲುಕಿಕೊಳ್ಳುವ ಸ್ಥಿತಿ ಸಾಮಾನ್ಯವಾಗಿದೆ. ಇದೇ ಪ್ರದೇಶದಲ್ಲಿ ಅಲೆಮಾರಿ ಜನಾಂಗದವರು ತಾತ್ಕಾಲಿಕ ಜೋಪಡಿಗಳನ್ನು ನಿರ್ಮಿಸಿಕೊಂಡಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.

ಶಾಲಾ ಮಕ್ಕಳಿಗೆ ನಿತ್ಯ ಸುತ್ತು: ಈ ಬಡಾವಣೆಯಲ್ಲಿ ನೂರಾರು ಮನೆಗಳಿವೆ. ಶಾಲೆ, ಕೆಲಸ ಹಾಗೂ ದಿನನಿತ್ಯದ ಅಗತ್ಯಗಳಿಗಾಗಿ ಹೊರಗೆ ತೆರಳುವ ನಿವಾಸಿಗಳು ಸಂಪರ್ಕ ರಸ್ತೆಯ ಕೊರತೆಯಿಂದ ಪರದಾಡುತ್ತಿದ್ದಾರೆ. ವಿಶೇಷವಾಗಿ ಶಾಲಾ ಮಕ್ಕಳು ಸುತ್ತು ಬಳಸಿ ಶಾಲೆಗೆ ತೆರಳಬೇಕಾಗಿದೆ. ಬೈಕ್‌ ಸವಾರರು ಅಲ್ಲೇ ಕಾಲುದಾರಿಯಲ್ಲಿ ಕಸರತ್ತು ಮಾಡಿ ಸಾಗುತ್ತಿದ್ದಾರೆ. ಅನೇಕರು ಇಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.

ನಗರಸಭೆಗೆ ಕಾಣುತ್ತಿಲ್ಲವೇ ಸಮಸ್ಯೆ?: ಖಾಸಗಿ ಜಾಗದ ಸಮಸ್ಯೆ ಇದೆ ಎಂಬ ಕಾರಣಕ್ಕೆ ಸಂಪರ್ಕ ರಸ್ತೆ ಸಮಸ್ಯೆಯನ್ನು ವರ್ಷಗಟ್ಟಲೆ ಹಾಗೆಯೇ ಬಿಟ್ಟಿರುವುದು ಸರಿಯಲ್ಲ ಎಂಬುದು ನಿವಾಸಿಗಳ ಆಕ್ರೋಶ. ಖಾಸಗಿ ಜಾಗದ ಸಮಸ್ಯೆಯನ್ನು ಕಾನೂನುಬದ್ಧವಾಗಿ ಬಗೆಹರಿಸುವ ಜತೆಗೆ, ಅಗತ್ಯವಿದ್ದರೆ ಪರ್ಯಾಯ ಮಾರ್ಗ ಗುರುತಿಸಿ ರಸ್ತೆ ನಿರ್ಮಿಸಬೇಕು. ಕನಿಷ್ಠ ಕಚ್ಚಾ ರಸ್ತೆಯನ್ನಾದರೂ ತಕ್ಷಣ ಅಭಿವೃದ್ಧಿಪಡಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ನಗರದೊಳಗೇ ನೂರಾರು ಕುಟುಂಬಗಳು ಸಂಪರ್ಕ ರಸ್ತೆಯಿಲ್ಲದೆ ಪರದಾಡುತ್ತಿರುವಾಗ ನಗರಸಭೆ ಅಧಿಕಾರಿಗಳು ಇನ್ನೆಷ್ಟು ದಿನ ಕಾದು ಕುಳಿತುಕೊಳ್ಳುತ್ತಾರೆ ಎಂಬ ಪ್ರಶ್ನೆ ನಿವಾಸಿಗಳನ್ನು ಕಾಡುತ್ತಿದೆ. ಹಾದಿ ಬಸವಣ್ಣ ನಗರಕ್ಕೆ ‘ದಾರಿ’ ಕಲ್ಪಿಸುವ ಮೂಲಕ ನಗರಸಭೆ ಜನರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡಬೇಕಿದೆ.

ನಾಗರಿಕರಿಗೆ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸ್ಥಳೀಯ ಸಂಸ್ಥೆ ಕರ್ತವ್ಯ. ರಸ್ತೆ ಇದ್ದರೂ ಸಂಚಾರ ಸಾಧ್ಯವಿಲ್ಲ ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹಾವೇರಿ ನಗರಸಭೆ ಪೌರಾಯುಕ್ತ ಎಚ್‌. ಕಾಂತರಾಜು ತಿಳಿಸಿದ್ದಾರೆ.