ಡೀಸೆಲ್‌ ಮಿಶ್ರಿತ ಬಾವಿ ನೀರು ಸ್ವಚ್ಛಗೊಳಿಸುವಾಗಬೆಂಕಿ: ಮೂವರು ಕಾರ್ಮಿಕರಿಗೆ ಗಂಭೀರ ಗಾಯ

| Published : Dec 08 2023, 01:45 AM IST

ಡೀಸೆಲ್‌ ಮಿಶ್ರಿತ ಬಾವಿ ನೀರು ಸ್ವಚ್ಛಗೊಳಿಸುವಾಗಬೆಂಕಿ: ಮೂವರು ಕಾರ್ಮಿಕರಿಗೆ ಗಂಭೀರ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬಾವಿಯ ಸಮೀಪವೇ ಪೆಟ್ರೋಲ್ ಬಂಕ್ ಇದ್ದು, ಅಲ್ಲಿಯ ಟ್ಯಾಂಕ್ ಸೋರಿಕೆಯಿಂದಾಗಿ ಬಾವಿಗೆ ಡೀಸೆಲ್ ಬಂದಿರಬಹುದು ಎಂದು ಅಂದಾಜಿಸಲಾಗಿದೆ

ಶಿರಸಿ:

ಇಲ್ಲಿಯ ಬಾವಿಯಲ್ಲಿ ಡೀಸೆಲ್‌ ಮಿಶ್ರಿತ ನೀರು ಕಾಣಿಸಿಕೊಂಡಿದ್ದು, ಅದನ್ನು ಸ್ವಚ್ಛಗೊಳಿಸುವ ವೇಳೆ ಬೆಂಕಿ ಹೊತ್ತಿಕೊಳ್ಳುತ್ತದೆಯೇ ಎಂದು ಪರಿಶೀಲಿಸುವ ವೇಳೆ ಬೆಂಕಿ ಹೊತ್ತಿಕೊಂಡು, ಸ್ಫೋಟಗೊಂಡು ಬೆಂಕಿಯ ಜ್ವಾಲೆ ಮೇಲೆ ಆವರಿಸಿದ್ದರಿಂದ ಬಾವಿ ಮೇಲಿದ್ದ ಮೂವರು ಕಾರ್ಮಿಕರು ಗಾಯಗೊಂಡ ಘಟನೆ ಶಿರಸಿಯ ಕೋಟೆಗಲ್ಲಿಯಲ್ಲಿರುವ ಸೌದಾಗರ ಓಣಿಯಲ್ಲಿ ನಡೆದಿದೆ.

ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಲಾಗಿದೆ.

ಕಲಗಾರಿನ ವಿನಾಯಕ ಪೂಜಾರಿ, ರವಿ ಲಮಾಣಿ ಹಾಗೂ ಶಿರಸಿ ಗಣೇಶ ನಗರದ ಜಗದೀಶ ಗೌಡಾ ಗಾಯಗೊಂಡಿದ್ದು, ಇವರಲ್ಲಿ ವಿನಾಯಕ ಪೂಜಾರಿ ಗಂಭೀರವಾಗಿ ಸುಟ್ಟುಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸಾಗಿಸಲಾಗಿದೆ. ಡೀಸೆಲ್‌ ಮೀಶ್ರಿತ ನೀರನ್ನು ಸ್ವಚ್ಛಗೊಳಿಸುವ ಸಲುವಾಗಿ ಬಾವಿಗೆ ಇಳಿಯುವ ಮೊದಲು ಬಾವಿಯಲ್ಲಿ ಗಾಳಿ ಇದೆಯೇ ಹಾಗೂ ಇದು ದಹಿಸಬಲ್ಲ ಸಾಮರ್ಥ್ಯ (ಇನ್‌ಫ್ಲಮೇಬಲ್‌) ಇದೆಯೇ ಎಂದು ನೋಡಲು ಬಕೆಟ್‌ನಲ್ಲಿ ಮೊಂಬತ್ತಿ ಹಚ್ಚಿ ಕೆಳಗೆ ಬಿಟ್ಟಿದ್ದರು. ಮೊಂಬತ್ತಿ ಉರಿಯುತ್ತಿದ್ದ ಬಕೇಟ್ ಬಾವಿಯಲ್ಲಿ ಸುಮಾರು ಎಂಟತ್ತು ಮೀಟರ್ ಇಳಿಯುತ್ತಿದ್ದಂತೆ ಬಾವಿಯಲ್ಲಿ ಸ್ಫೋಟವಾದ ಬೆಂಕಿ ಬಾವಿಯಿಂದ ಕ್ಷಣಾರ್ಧದಲ್ಲಿ ಹೊರಗೆ ಬಂತು. ಈ ವೇಳೆ ಬಕೆಟ್ ಇಳಿಯುತ್ತಿರುವುದನ್ನು ಬಾವಿ ಇಣುಕಿ ನೋಡುತ್ತಿದ್ದ ರವಿ, ವಿನಾಯಕ ಹಾಗೂ ಜಗದೀಶ ಮುಖಕ್ಕೆ ಬೆಂಕಿ ಹತ್ತಿದೆ. ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಆಗಿದ್ದೇನು?:ಎಂದಿನಂತೆ ಬೆಳಗಿನ ವೇಳೆ ಇಲ್ಲಿಯ ನಿವಾಸಿಗಳು ಬಾವಿಯ ನೀರನ್ನು ಎತ್ತಿ ಮುಖತೊಳೆದಾಗ ಡೀಸೆಲ್‌ ವಾಸನೆ ಮೂಗಿಗೆ ಬಡಿದಿದೆ. ಆತಂಕಗೊಂಡ ನಿವಾಸಿಗಳು ಇನ್ನೂ ಎರಡು ಕೊಡ ನೀರು ಎತ್ತಿ ನೋಡಿದರೂ ಅದೂ ಡೀಸೆಲ್‌ ವಾಸನೆ ಹೊಡೆಯುತ್ತಿತ್ತು. ಬಳಿಕ ಬಾವಿಯನ್ನು ಪರಿಶೀಲಿಸಿದಾಗ ನೀರಿನ ಮೇಲೆ ತೈಲ ಇರುವ ಅಂಶ ಗೊತ್ತಾಗಿದೆ. ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಬಾವಿಯ ಸಮೀಪವೇ ಪೆಟ್ರೋಲ್ ಬಂಕ್ ಇದ್ದು, ಅಲ್ಲಿಯ ಟ್ಯಾಂಕ್ ಸೋರಿಕೆಯಿಂದಾಗಿ ಬಾವಿಗೆ ಡೀಸೆಲ್ ಬಂದಿರಬಹುದು ಎಂದು ಅಂದಾಜಿಸಿದ್ದಾರೆ. ಬಾವಿಯ ನೀರನ್ನು ಬಳಸದಂತೆ ಎಚ್ಚರಿಕೆಯ ಫಲಕವನ್ನು ಅಳವಡಿಸಲಾಗಿತ್ತು. ಬಾವಿಯ ಹತ್ತಿರ ಹೋಗದಂತೆ ನಗರಸಭೆ ಮತ್ತು ಪೊಲೀಸರು ಎಚ್ಚರಿಕೆ ವಹಿಸಿದ್ದು, ಬ್ಯಾರಿಕೇಡ್‌ ಹಾಕಲಾಗಿದೆ.