ರೈತರು ಸಂಕಷ್ಟದಲ್ಲಿದ್ದರೆ, ಸರ್ಕಾರ ಗಾಢ ನಿದ್ರೆಯಲ್ಲಿದೆ: ವಿಪಕ್ಷ ನಾಯಕ ಆರ್‌.ಅಶೋಕ್

| Published : Jul 07 2025, 11:48 PM IST

ರೈತರು ಸಂಕಷ್ಟದಲ್ಲಿದ್ದರೆ, ಸರ್ಕಾರ ಗಾಢ ನಿದ್ರೆಯಲ್ಲಿದೆ: ವಿಪಕ್ಷ ನಾಯಕ ಆರ್‌.ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ಮಾವು ಬೆಲೆ ನೆಲಕಚ್ಚಿದ ವೇಳೆಯೂ ಸರ್ಕಾರ ಗಾಢ ನಿದ್ರೆಯಲ್ಲಿತ್ತು, ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ ನಂತರ ರಾಜ್ಯ ಸರ್ಕಾರ ನಿದ್ರೆಯಿಂದ ಎಚ್ಚೆತ್ತು ಬೆಂಬಲ ಬೆಲೆ ಘೋಷಿಸಿದೆ. ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಆಗಮಿಸಬೇಕು ಎಂದಾದರೆ ಹಾನಿಪ್ರಮಾಣದ ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ನೀಡಬೇಕು, ಆನಂತರ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಿಸುವ ಬಗ್ಗೆ ಮಾತನಾಡಬಹುದು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅತಿವೃಷ್ಟಿಯಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದರೆ ಸರ್ಕಾರ ಮಾತ್ರ ಗಾಢ ನಿದ್ರೆಯಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.

ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಕಾಫಿತೋಟಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಲೆನಾಡ ಭಾಗದಲ್ಲಿ ಮೇ ತಿಂಗಳಿನಿಂದ ನಿರಂತರ ಮಳೆಯಿಂದಾಗಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು, ಅಡಿಕೆ ಬೆಳೆ ನಾಶವಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಆದರೆ, ಇದುವರೆಗೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡುವ ಕೆಲಸವನ್ನೇ ಮಾಡಿಲ್ಲ. ಇನ್ನೂ ರಾಜ್ಯ ಸರ್ಕಾರ ಗಾಢನಿದ್ರೆಯಲ್ಲಿದ್ದು, ಎಚ್ಚರಿಸುವ ಕೆಲಸ ಮಾಡುವ ಉದ್ದೇಶದಿಂದ ತಾಲೂಕಿಗೆ ಭೇಟಿ ನೀಡಿದ್ದೇನೆ. ಕಾಫಿ ಬೆಳೆ ಶೇ. ೩೫ ರಷ್ಟು ಉದುರಿದೆ. ಅಡಿಕೆ ಶೇ. ೫೦ ರಷ್ಟು ನಾಶವಾಗಿದೆ. ಮೆಣಸು ಬೆಳೆ ಸಹ ಶೇ ೨೦ ರಷ್ಟು ನೆಲ ಸೇರಿದ್ದು, ಅಂದಾಜು ಆರನೂರರಿಂದ ಏಳುನೂರು ಕೋಟಿಯಷ್ಟು ನಷ್ಟ ಸಂಭವಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮಂತ್ರಿಗಳು ಹಾನಿಗೀಡಾಗಿರುವ ತೋಟಗಳಿಗೆ ಭೇಟಿ ನೀಡಿ ಹಾನಿಗೀಡಾಗಿರುವ ಬೆಳೆಯ ನಿಖರ ಅಂಕಿ ಅಂಶಗಳನ್ನು ಸಂಗ್ರಹಿಸಿ, ಪರಿಹಾರ ಹಾಗೂ ಪರ್ಯಾಯ ಮಾರ್ಗಗಳನ್ನು ಬೆಳೆಗಾರರಿಗೆ ಸೂಚಿಸ ಬೇಕಿದೆ ಎಂದು ಆಗ್ರಹಿಸಿದರು.

ಮಾವು ಬೆಲೆ ನೆಲಕಚ್ಚಿದ ವೇಳೆಯೂ ಸರ್ಕಾರ ಗಾಢ ನಿದ್ರೆಯಲ್ಲಿತ್ತು, ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ ನಂತರ ರಾಜ್ಯ ಸರ್ಕಾರ ನಿದ್ರೆಯಿಂದ ಎಚ್ಚೆತ್ತು ಬೆಂಬಲ ಬೆಲೆ ಘೋಷಿಸಿದೆ. ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಆಗಮಿಸಬೇಕು ಎಂದಾದರೆ ಹಾನಿಪ್ರಮಾಣದ ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ನೀಡಬೇಕು, ಆನಂತರ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಿಸುವ ಬಗ್ಗೆ ಮಾತನಾಡಬಹುದು ಎಂದರು.

ಹೃದಯಾಘಾತ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳು ಬಾಯಿಮುಚ್ಚಿಕೊಂಡಿದ್ದರೆ ಆರೋಗ್ಯ ಮಂತ್ರಿಗಳು ಪರೀಕ್ಷೆ ನಡೆಸುವ ಮಾತುಗಳನ್ನಾಡುತ್ತಿದ್ದಾರೆ. ಪರೀಕ್ಷೆ ನಡೆಸಲು ಆ ಪ್ರಮಾಣದ ವೈದ್ಯರು, ಸಲಕರಣೆಗಳು ಎಲ್ಲಿವೆ. ಯಾರನ್ನೂ ಮೆಚ್ಚಿಸಲು ಮಾತನಾಡುವುದಲ್ಲ, ಸೆಪ್ಟೆಂಬರ್ ತಿಂಗಳಿನಲ್ಲಿ ಕ್ರಾಂತಿ ಎಂಬ ಭ್ರಾಂತಿಯಲ್ಲಿ ಕೆಲವರಿದ್ದಾರೆ, ಒಟ್ಟಾರೆ ಸರ್ಕಾರ ರಾಜ್ಯದಲ್ಲಿ ಸತ್ತೇ ಹೋಗಿದೆ ಎಂದು ಛೇಡಿಸಿದರು. ಶಾಸಕ ಸೀಮೆಂಟ್ ಮಂಜು, ಬೇಲೂರು ಶಾಸಕ ಸುರೇಶ್, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ವಳಲಹಳ್ಳಿ ಅಶ್ವತ್ಥ್, ಪುನೀತ್ ಬನ್ನಹಳ್ಳಿ, ಕ್ಯಾಮನಹಳ್ಳಿ ರಾಜ್‌ಕುಮಾರ್ ಸೇರಿದಂತೆ ಹಲವರು ಇದ್ದರು.