ಗುತ್ತಿಗೆದಾರರ ಗೋಳು ಕೇಳೋರು ಯಾರು ?

| Published : Dec 23 2024, 01:00 AM IST

ಸಾರಾಂಶ

ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಕರೆದ ಟೆಂಡರ್ ಗೆ ಅರ್ಜಿ ಹಾಕಿ ಕೋಟ್ಯಂತರ ರು. ಹಾಕಿ ಕಾಮಗಾರಿ ಮುಗಿಸಿ ವರ್ಷಗಳೇ ಉರುಳಿದರೂ ಕಾಮಗಾರಿಗಳ ಬಿಲ್ ಮಾತ್ರ ಆಗಿಲ್ಲ. ಹೀಗಾಗಿ, ಗುತ್ತಿಗೆದಾರರ ಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಕರೆದ ಟೆಂಡರ್ ಗೆ ಅರ್ಜಿ ಹಾಕಿ ಕೋಟ್ಯಂತರ ರು. ಹಾಕಿ ಕಾಮಗಾರಿ ಮುಗಿಸಿ ವರ್ಷಗಳೇ ಉರುಳಿದರೂ ಕಾಮಗಾರಿಗಳ ಬಿಲ್ ಮಾತ್ರ ಆಗಿಲ್ಲ. ಹೀಗಾಗಿ, ಗುತ್ತಿಗೆದಾರರ ಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ಹೌದು, ಟೆಂಡರ್ ಮೂಲಕ ಕಾಮಗಾರಿ ಪಡೆದು, ಕಾಮಗಾರಿ ಪೂರ್ಣಗೊಳಿಸಲು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಲೇವಾದೇವಿಗಾರರಿಂದ ಸಾಲ ಪಡೆದಿದ್ದಾರೆ. ಆದರೆ, ಕಾಮಗಾರಿ ಪೂರ್ಣಗೊಳಿಸಿ ಬಿಲ್ ಗಾಗಿ ಚಾತಕ ಪಕ್ಷಿಯಂತೆ ಗುತ್ತಿಗೆದಾರರು ಎರಡು ವರ್ಷಗಳಿಂದ ಕಾಯುತ್ತಿದ್ದಾರೆ.

ಕಾಮಗಾರಿಗೆ ಖಡಿ, ಸಿಮೆಂಟ್, ಕಬ್ಬಿಣ, ಡಾಂಬರ್, ಮರಳು ಸೇರಿದಂತೆ ಅಗತ್ಯ ಕಚ್ಚಾವಸ್ತುಗಳನ್ನು ಹಣ ಆಮೇಲೆ ಕೊಡುವುದಾಗಿ ಹೇಳಿಯೋ ಇಲ್ಲ, ಸಾಲ ಮಾಡಿಯೋ ಖರೀದಿ ಮಾಡಬೇಕು. ಅಲ್ಲದೆ, ನಿಗದಿತ ಅವಧಿಯೊಳಗೆ ಕೆಲಸ ಮಾಡಬೇಕು. ಹೀಗೆ ಹಣವಿಲ್ಲದೇ ಕಚ್ಚಾ ಸಾಮಗ್ರಿ ನಂಬಿಕೆಯ ಮೇಲೆ ಉದ್ರಿ ಕೊಟ್ಟಿರುವ ಮಾರಾಟಗಾರರು ಹಣಕ್ಕಾಗಿ ಗುತ್ತಿಗೆದಾರರ ದುಂಬಾಲು ಬಿದ್ದಿದ್ದಾರೆ.

ಈ ಕಾಟ ತಾಳಲಾಗದೇ ಬಿಲ್ ಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದು, ಹಣ ಬರುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಅನುದಾನವೇ ಬಿಡುಗಡೆಯಾಗಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಿದ್ದಾರೆ ಎಂಬುದು ಗುತ್ತಿಗೆದಾರರ ಆರೋಪ.

ಇತ್ತ ಗುತ್ತಿಗೆದಾರರಿಗೆ ಸಾಲ ಕೊಟ್ಟವರು ಮನೆ ಬಾಗಿಲಿಗೆ ಬಂದು ಬಾಯಿಗೆ ಬಂದಂತೆ ಹೀಯಾಳಿಸುತ್ತಿರುವ ಪ್ರಕರಣ ಹೆಚ್ಚಾಗಿವೆ. ಹೀಗಾಗಿ, ಬಹಳಷ್ಟು ಗುತ್ತಿಗೆದಾರರು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿ, ಇಲ್ಲವೇ ತಲೆಮರೆಸಿಕೊಂಡು ಅಲೆದಾಡುವ ಪರಿಸ್ಥಿತಿ ಬಂದಿದೆ ಎಂದು ಗುತ್ತಿಗೆದಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು ಬರುತ್ತಾರೆ. ನಮ್ಮ ಸಮಸ್ಯೆ ಅಲಿಸಿ ಸ್ಪಂದಿಸುತ್ತಾರೆ ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಪ್ರತಿಭಟನೆ ಮಾಡಿದರೆ. ಯಾವುದೇ ಸಚಿವರು, ಸಿಎಂ, ಶಾಸಕರಾದರೂ ಬಂದು ನಮ್ಮ ಸಮಸ್ಯೆ ಆಲಿಸಲಿಲ್ಲ ಎಂದು ಗುತ್ತಿಗೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪ್ರತಿದಿನ ದಂಡ ಹಾಕುವ ಅಧಿಕಾರಿಗಳು ಬಿಲ್ ಬಿಡುಗಡೆಗೆ ಮುತುವರ್ಜಿ ವಹಿಸುವುದಿಲ್ಲ. ಕಾಮಗಾರಿ ಪೂರ್ಣಗೊಳಿಸಿ ೨ ವರ್ಷ ಗತಿಸಿವೆ. ಯಾರನ್ನು ಕೇಳಬೇಕೆಂಬುದೇ ಗೊತ್ತಾಗುತ್ತಿಲ್ಲ. ಒಟ್ಟಾರೆ, ಅಸಹನೀಯ ಪರಿಸ್ಥಿತಿ ನಮ್ಮದಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ.

ಸರ್ಕಾರ ಶೀಘ್ರವೇ ಎಚ್ಚೆತ್ತುಕೊಂಡು ಗುತ್ತಿಗೆದಾರರು ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಕಾಮಗಾರಿಗಳ ಸಂಪೂರ್ಣ ಬಿಲ್ ಬಿಡುಗಡೆ ಮಾಡಿ, ಮುಂದಿನ ಕಾಮಗಾರಿಗಳಿಗಳ ಟೆಂಡರ್ ಕರೆಯಬೇಕೆಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ.

ಗ್ಯಾರಂಟಿ ಹೆಸರಿನಲ್ಲಿ ವಿಳಂಬ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಹೆಸರು ಹೇಳಿ ಬಿಲ್ ಬಿಡುಗಡೆಗೆ ವಿಳಂಬ ಮಾಡಲಾಗುತ್ತಿದೆ. ಒಂದು ವೇಳೆ ಬಿಲ್ ಬಿಡುಗಡೆ ವಿಚಾರಕ್ಕೆ ಮುಂದಾಳತ್ವ ವಹಿಸಿದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಯಾರೂ ಮುಂದೆ ಬರುತ್ತಿಲ್ಲ. ಸಾಲದ ಕಾಟ ತಾಳಲಾರದೇ ದುಂಬಾಲು ಬಿದ್ದರೆ ಅಧಿಕಾರಿಗಳು ಮತ್ತಷ್ಟು ವಿಳಂಬ ಮಾಡುತ್ತಾರೆ. ಹಾಗಾಗಿ ಏನು ಮಾಡಬೇಕೆಂಬುದು ತಿಳಿಯದೇ ಬಹುತೇಕ ಗುತ್ತಿಗೆದಾರರು ಒಳಗಿಂದೊಳಗೆ ತೊಳಲಾಡುತ್ತಿರುವುದು ದುರಂತ.ಜನಪ್ರತಿನಿಧಿಗಳಿಗೆ ಗುತ್ತಿಗೆದಾರರಿಂದ ಕಮಿಷನ್ ಪಡೆಯುವಾಗ ಇರುವ ಆಸಕ್ತಿ ಕಾಮಗಾರಿ ಪೂರ್ಣಗೊಂಡ ನಂತರ ಬಿಲ್ ಕೊಡಿಸಲು ತೋರುವುದಿಲ್ಲ. ಸರ್ಕಾರ ಮೊಂಡುತನ ಬಿಟ್ಟು ಗುತ್ತಿಗೆದಾರರ ಬಿಲ್ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಿ. ಇಲ್ಲವಾದರೆ ಸಾರ್ವಜನಿಕ ಹಿತಾಸಕ್ತಿ ಮೇಲೆ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗುವುದು.

-ಸಂಪತ್‌ಕುಮಾರ ಶೆಟ್ಟಿ ಬಿಜೆಪಿ ಮುಖಂಡರು, ಅಥಣಿ ಟೆಂಡರ್ ಮೂಲಕ ಪಡೆದ ಕಾಮಗಾರಿ ಪಡೆದು ನಿಗದಿತ ಅವಧಿಗೆ ಮುಗಿಸಿರುವ ಗುತ್ತಿಗೆದಾರರು ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಅನೇಕ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಸರ್ಕಾರ ಗುತ್ತಿಗೆದಾರರ ನೆರವಿಗೆ ಧಾವಿಸಬೇಕು. ಇಲ್ಲವಾದರೆ ಗುತ್ತಿಗೆದಾರರ ಶಾಪ ಸರ್ಕಾರಕ್ಕೆ ತಟ್ಟಲಿದೆ.

-ಸಂಜಯ ಕುಚನೂರೆ ಕಾಂಗ್ರೆಸ್ ಮುಖಂಡರು ಕಾಗವಾಡ