ಸಾರಾಂಶ
ನಾವು ಚುಂಚನಗಿರಿ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಅದನ್ನೇ ದೊಡ್ಡದಾಗಿ ಚಲುವರಾಯಸ್ವಾಮಿ ಮಾತನಾಡುತ್ತಿದ್ದಾರೆ. ಅಂದು ಮಾಗಡಿ ಬಾಲಕೃಷ್ಣ ಹಾಗೂ ನೀನು ಸೇರಿ ಕುಮಾರಸ್ವಾಮಿ ಅವರನ್ನು ಪ್ರಚೋದಿಸಿದ್ದು ಎಲ್ಲರಿಗೂ ಗೊತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಚುಂಚನಗಿರಿ ಮಠ ಒಡೆಯಬೇಕು ಎಂದು ಹೇಳಿದ್ದು ಯಾರು? ಬಾ ನಾನು ಭೈರವನ ಮೇಲೆ ಪ್ರಮಾಣ ಮಾಡುತ್ತೇನೆ. ನೀನು ಮಾಡು ಬಾ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಚಿವ ಎನ್.ಚಲುವರಾಯಸ್ವಾಮಿಗೆ ಸವಾಲು ಹಾಕಿದರು.ನಗರದ ಹೊರ ವಲಯದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾವು ಚುಂಚನಗಿರಿ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಅದನ್ನೇ ದೊಡ್ಡದಾಗಿ ಚಲುವರಾಯಸ್ವಾಮಿ ಮಾತನಾಡುತ್ತಿದ್ದಾರೆ. ಅಂದು ಮಾಗಡಿ ಬಾಲಕೃಷ್ಣ ಹಾಗೂ ನೀನು ಸೇರಿ ಕುಮಾರಸ್ವಾಮಿ ಅವರನ್ನು ಪ್ರಚೋದಿಸಿದ್ದು ಎಲ್ಲರಿಗೂ ಗೊತ್ತಿದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ದೇವೇಗೌಡರು ಕೊಟ್ಟ ಭಿಕ್ಷೆಯಿಂದ ನಾಯಕರಾಗಿ ಬೆಳವಣಿಗೆ ಕಂಡವರು ಇಂದು ದೇವೇಗೌಡರ ಬಗ್ಗೆಯೇ ಲಘುವಾಗಿ ಮಾತನಾಡುವಷ್ಟು ದೊಡ್ಡವರಾಗಿದ್ದಾರೆ. ಈಗ ದೇವೇಗೌಡರ ಬಗ್ಗೆ ಮಾತಾಡುತ್ತೀಯಾ. ಅಂದು ದೇವೇಗೌಡರನ್ನು ಕಾಲು ಹಿಡಿದುಕೊಂಡು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರಲ್ಲದೆ, ಅವರನ್ನು ಮುಳ್ಳಿನ ಹಾಸಿಗೆ ಮೇಲೆ ಮಲಗುವಂತೆ ಮಾಡಿದರು. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ನಿನ್ನ ಬಂಡವಾಳ ಹೊರ ತೆಗೆಯುತ್ತೇನೆ ಎಂದು ಎಚ್ಚರಿಸಿದರು.ಈಗ ಹಣ ಇರುವ ಸ್ಟಾರ್ ಚಂದ್ರು ಅವರನ್ನು ಚುನಾವಣೆಗೆ ಕರೆತಂದಿದ್ದಾರೆ. ಹಣದಿಂದ ಮಂಡ್ಯ ಜನರ ಜೇಬು ತುಂಬಿಸೋಕೆ ಆಗುವುದಿಲ್ಲ. ಮೋದಿ ಅವರು ಪ್ರಧಾನಿ ಆಗುವುದನ್ನು ತಪ್ಪಿಸೋಕೆ ಸಾಧ್ಯವಿಲ್ಲ. ಹಾಗೆಯೇ ಕುಮಾರಸ್ವಾಮಿ ಗೆಲುವನ್ನು ತಡೆಯೋಕೂ ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸದಿಂದ ನುಡಿದರು.