ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಗೆ ಹೆಚ್ಚಿದ ಪೈಪೋಟಿ

| Published : Dec 31 2023, 01:30 AM IST

ಸಾರಾಂಶ

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 60 ವರ್ಷ ಮೇಲ್ಪಟ್ಟವರನ್ನು ನೇಮಕ ಮಾಡಬಾರದು ಎನ್ನುವ ಷರತ್ತು ಹಾಕಿಕೊಂಡಿದ್ದ ಬಿಜೆಪಿ ಹೈಕಮಾಂಡ್ ಈಗ ಅದನ್ನು ಸಡಿಲಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಾನಾ ಬೆಳವಣಿಗೆ ಕಂಡುಬರುತ್ತಿವೆ.

ಸೋಮರಡ್ಡಿ ಅಳವಂಡಿಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿದ ಮೇಲೆ ಇಡೀ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಬದಲಾವಣೆಗೆ ಪ್ರಕ್ರಿಯೆ ಆರಂಭವಾಗಿದೆ. ಸಹಜವಾಗಿಯೇ ಕೊಪ್ಪಳ ಜಿಲ್ಲಾಧ್ಯಕ್ಷ ಹುದ್ದೆಗೆ ಯಾರು ಎನ್ನುವ ಕುತೂಹಲ ಮೂಡಿದೆ. ಜೊತೆಗೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯೂ ಬಲವಾಗಿಯೇ ನಡೆದಿದೆ.ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 60 ವರ್ಷ ಮೇಲ್ಪಟ್ಟವರನ್ನು ನೇಮಕ ಮಾಡಬಾರದು ಎನ್ನುವ ಷರತ್ತು ಹಾಕಿಕೊಂಡಿದ್ದ ಬಿಜೆಪಿ ಹೈಕಮಾಂಡ್ ಈಗ ಅದನ್ನು ಸಡಿಲಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಾನಾ ಬೆಳವಣಿಗೆ ಕಂಡುಬರುತ್ತಿವೆ.ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುತ್ತಿರುವುದರಿಂದ ಮಹತ್ವ ಬಂದಿದೆ.ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಡಿ.31ರಂದು ಕೊಪ್ಪಳದ ಬಿಜೆಪಿ ಕಾರ್ಯಾಲಯದಲ್ಲಿ ವಿಶೇಷ ಸಭೆ ಕರೆಯಲಾಗಿದೆ.ಸಭೆಯಲ್ಲಿ ಅಪೇಕ್ಷಿತರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ಮಾಜಿ ವಿಪ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಕೋರ್ ಕಮಿಟಿ ಸದಸ್ಯರು, ಜಿಲ್ಲಾ ಕೋರ್ ಕಮಿಟಿ ಸದಸ್ಯರು ಪ್ರಮುಖ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.ಕಲಬುರಗಿ ವಿಭಾಗ ಪ್ರಭಾರಿ ತಿವಾರಿ ಸಿಂಗ್ ಸಭೆಗೆ ಆಗಮಿಸಲಿದ್ದಾರೆ. ಅಭಿಪ್ರಾಯ ಸಂಗ್ರಹಿಸಿ ತೆರಳಲಿದ್ದಾರೆ. ಹೈಕಮಾಂಡ್ ಅಭಿಪ್ರಾಯ ಸಂಗ್ರಹಣೆಯ ಆಧಾರದಲ್ಲಿ ನೂತನ ಜಿಲ್ಲಾಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಘೋಷಣೆ ಮಾಡಲಿದ್ದಾರೆ.ಇದುವರೆಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಕವಲೂರು, ನವೀನ ಗುಣ್ಣಗಣ್ಣವರ ಹೆಸರು ಯುವ ನೇತಾರರ ಲೆಕ್ಕಾಚಾರಕ್ಕೆ ಮುಂಚೂಣಿಯಲ್ಲಿ ಕೇಳಿ ಬಂದಿದ್ದವು.ಈ ಬಗ್ಗೆ ಹೈಕಮಾಂಡ್ ಸಹ ಗಂಭೀರವಾಗಿ ಪರಿಗಣಿಸಿದ್ದರು. ಆದರೆ, ಆದರೆ ಕಳೆದೊಂದು ವಾರದಿಂದ ಆಗಿರುವ ಬೆಳವಣಿಗೆಯಲ್ಲಿ ಮತ್ತಷ್ಟು ಹೆಸರುಗಳು ಸೇರ್ಪಡೆಯಾಗಿವೆ.ಕನಕಗಿರಿ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಹೆಸರು ಮುಂಚೂಣಿಯಲ್ಲಿ ಕೇಳಿಬರಲಾರಂಭಿಸಿದೆ. ಅವರು ಜಿಲ್ಲಾಧ್ಯಕ್ಷರಾಗಲು ಉತ್ಸುಕರಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಇವರ ಹೆಸರು ಮುಂಚೂಣಿಯಲ್ಲಿದೆ.ಈ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೆಸರು ಕೇಳಿ ಬರುತ್ತಿದೆ. ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುವುದಕ್ಕೆ ಅವರು ಸಹ ಉತ್ಸುಕರಾಗಿದ್ದಾರೆ.ಆದರೆ, ಪಕ್ಷ ಕೇವಲ ಅಪೇಕ್ಷಿತರ ಅಭಿಪ್ರಾಯ ಮಾತ್ರ ಪಡೆಯದೇ ಇತರೆ ಪದಾಧಿಕಾರಿಗಳನ್ನು ಸಹ ಅಭಿಪ್ರಾಯ ಕೇಳುತ್ತಿರುವುದರಿಂದ ಈ ನಾಲ್ವರಲ್ಲಿ ಯಾರಾಗುತ್ತಾರೆ ಎನ್ನುವುದನ್ನು ಈಗಲೇ ಹೇಳಲು ಆಗುವುದಿಲ್ಲ.ಇನ್ನೂ ಹಲವಾರು ಹೆಸರುಗಳು ಚಾಲ್ತಿಯಲ್ಲಿ ಇವೆ. ಪಕ್ಷಕ್ಕೆ ನಿಷ್ಠೆಯಾದವರು ಮತ್ತು ಪಕ್ಷದ ಹೈಕಮಾಂಡ್ ಲೆಕ್ಕಾಚಾರದಲ್ಲಿ ಬೇರೆ ಬೇರೆ ಹೆಸರುಗಳು ಒಳಗೊಳಗೆ ಹರಿದಾಡುತ್ತಿವೆ.ಈಗ ಎದುರಾಗುತ್ತಿರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಈಗ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆಲುವು ದಾಖಲಿಸಲು ಸರ್ವಸಮ್ಮತವಾಗಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ.ಬಿಜೆಪಿಯಲ್ಲಿ ಒಳಬೇಗುದಿ ಮೆಟ್ಟಿನಿಂತು, ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟು ಮೂಡಿಸುವ ನೇತಾರರನ್ನು ಗುರುತಿಸಲು ಬಿಜೆಪಿ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಇದೆಲ್ಲಕ್ಕಿಂತ ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ್ ಪ್ರಭಾವ ಯಾರಿಗಿದೆ ಎನ್ನುವುದು ಅಷ್ಟೇ ಮುಖ್ಯವಾಗುತ್ತಿದೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಕೃಪೆ ಯಾರಿಗಿದೆ ಎನ್ನುವುದೂ ಮುಖ್ಯ.