ಸಾರಾಂಶ
ಹುಟ್ಟಿನಿಂದ ಯಾರು ಅಪರಾಧಿಗಳಾಗುವುದಿಲ್ಲ.
ಹೊಸಪೇಟೆ: ಹುಟ್ಟಿನಿಂದ ಯಾರು ಅಪರಾಧಿಗಳಾಗುವುದಿಲ್ಲ. ಸಮಾಜವು ಅವರನ್ನು ಕಾಣುವ ಹಾಗೂ ವ್ಯವಹರಿಸುವ ರೀತಿಯಿಂದ ಬೇಸತ್ತ ಬುಡಕಟ್ಟು ಸಮುದಾಯಗಳು ತಮ್ಮ ಹಸಿವು ನೀಗಿಸಿಕೊಳ್ಳಲು ಅಪರಾಧಗಳಂತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವು. ಅಂತಹವುದೇ ಒಂದು ಸಮುದಾಯ ಉಚಲ್ಯಾ ಸಮುದಾಯ. ಲಕ್ಷಣ್ ಗಾಯಕವಾಡ ರಚಿಸಿದ ಈ ಕೃತಿಯೂ ಕೇವಲ ಅವರ ಆತ್ಮಕಥೆ ಆಗಿರದೇ ಸಮುದಾಯದ ಆತ್ಮಕಥೆ ಆಗಿದೆ ಎಂದು ಭಾಷಾಂತರ ಅಧ್ಯಯನ ವಿಭಾಗದ ಸಂಶೋಧಕಿ ಶ್ವೇತಾ ಬಾಳಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಸಮಾಜಮುಖಿ ತಿಂಗಳ ಮಾತು ಕಾರ್ಯಕ್ರಮದಲ್ಲಿ ಉಚಲ್ಯಾ- ಸಾಮಾಜಿಕ ಕಥನ ವಿಷಯದ ಕುರಿತು ಮಾತನಾಡಿದ ಅವರು, ಹಸಿವು, ಬಡತನ, ತಮ್ಮ ಸಮುದಾಯಕ್ಕೆ ಅಂಟಿಕೊಂಡಿರುವ ಅಪರಾಧ ಎಂಬ ಹಣೆಪಟ್ಟಿ ಹಾಗೂ ತಮ್ಮ ಮೇಲಾಗುವ ಉಳ್ಳವರ ಶೋಷಣೆ ಬಗ್ಗೆ ಕೃತಿಯುದ್ದಕ್ಕೂ ಲೇಖಕರು ಪ್ರಶ್ನಿಸುತ್ತಾ ಹೋಗುತ್ತಾರೆ. ಶಕ್ತರಾದರೂ ಶಿಕ್ಷಣದ ಕೊರತೆಯಿಂದ ಸಮುದಾಯದ ಶೋಷಣೆ ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಉಚಲ್ಯಾ ಸಮುದಾಯವು ಬ್ರಿಟಿಷ್ ಆಡಳಿತದಲ್ಲಿ, ರಜಾಕಾರರ ಆಡಳಿತದಲ್ಲಿ ಹಲವು ಬಗೆಯಲ್ಲಿ ತೊಂದರೆಗಳನ್ನು ಅನುಭವಿಸಿದೆ. ಲೇಖಕರು ಹುಟ್ಟಿನಿಂದ ಯುವಕನಾಗುವವರೆಗೆ ಒಂದು ಬಗೆಯಲ್ಲಿ ಕಾರ್ಮಿಕ ವಲಯದಲ್ಲಿ ಹಾಗೂ ಕಾರ್ಖಾನೆಯಲ್ಲಿ ಶೋಷಣೆಗೆ ಒಳಗಾಗಿದ್ದರು. ಸಮಕಾಲೀನ ಸಂಧರ್ಭದಲ್ಲಿ ಈ ಸಮುದಾಯಗಳನ್ನು ಮೇಲೆತ್ತಲು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು.ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎರ‍್ರಿಸ್ವಾಮಿ ಮಾತನಾಡಿ, ತಳ ಸಮುದಾಯಗಳಿಗೆ ಶಿಕ್ಷಣ ದೊರೆತರೂ ಸ್ವಾತಂತ್ರ ದೊರೆತಿದೆ ಎನ್ನಲು ಸಂಪೂರ್ಣ ಸಾಧ್ಯವಿಲ್ಲ ಎಂದರು.
ಕನ್ನಡ ಭಾಷಾಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಪಿ. ಮಹಾದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಪರಾಧಿ ಬುಡಕಟ್ಟುಗಳೆಂದು ಹಣೆಪಟ್ಟಿ ಧರಿಸಿದ ಸಮುದಾಯಗಳಿಗೆ ಪ್ರಾಮಾಣಿಕವಾಗಿ ಬದುಕಬೇಕು ಎನಿಸಿದರೂ ಸಮಾಜ ಅದಕ್ಕೆ ಅವಕಾಶ ನೀಡಿಲ್ಲ. ಸರಿದಾರಿಗೆ ತರಬೇಕಾದ ವ್ಯವಸ್ಥೆಯು ಈ ಸಮುದಾಯಗಳನ್ನು ಅದೇ ಸ್ಥಾನದಲ್ಲಿರಿಸಲು ಬಯಸುತ್ತದೆ. ಈ ಬುಡಕಟ್ಟು ಸಮುದಾಯಗಳು ಅಳಿದರೆ ಲೋಕದೃಷ್ಟಿ, ತಿಳಿವಳಿಕೆ ಮತ್ತು ಸಮುದಾಯದ ಅಸ್ಮಿತೆ ನಾಶವಾಗುತ್ತದೆ ಎಂದರು.ಸಂಶೋಧನಾರ್ಥಿಗಳಾದ ಹನುಮಂತ, ಎಸ್.ಜ್ಯೋತಿ, ತಿಪ್ಪೇಸ್ವಾಮಿ ನಿರ್ವಹಿಸಿದರು.
ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ನಡೆದ ಸಮಾಜಮುಖಿ ತಿಂಗಳ ಮಾತು ಕಾರ್ಯಕ್ರಮದಲ್ಲಿ ಸಂಶೋಧಕಿ ಶ್ವೇತಾ ಬಾಳಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಪಿ. ಮಹಾದೇವಯ್ಯ ಮತ್ತಿತರರಿದ್ದರು.