ಸಾರಾಂಶ
ಮುಂಡರಗಿ ಪುರಸಭೆ ಒಟ್ಟು 23 ಸದಸ್ಯ ಬಲ ಹೊಂದಿದೆ. ಇದರಲ್ಲಿ 12 ಬಿಜೆಪಿ, 6 ಕಾಂಗ್ರೆಸ್, ಓರ್ವ ಜೆಡಿಎಸ್ ಹಾಗೂ ನಾಲ್ವರು ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಂತರದಲ್ಲಿ ಮೂವರು ಪಕ್ಷೇತರರು ಬಿಜೆಪಿ, ಓರ್ವ ಪಕ್ಷೇತರ ಹಾಗೂ ಓರ್ವ ಜೆಡಿಎಸ್ ಸದಸ್ಯ ಕಾಂಗ್ರೆಸ್ ಸೇರಿದ್ದಾರೆ.
ಶರಣು ಸೊಲಗಿ
ಮುಂಡರಗಿ:ಕಳೆದ 15 ತಿಂಗಳಿಂದ ಖಾಲಿ ಉಳಿದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಮೀಸಲಾತಿ ಪ್ರಕಟವಾಗಿದ್ದು, ಮುಂಡರಗಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹೀಗಾಗಿ ಅಧಿಕಾರ ಗದ್ದುಗೆ ಏರಲು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಮುಂಡರಗಿ ಪುರಸಭೆ ಒಟ್ಟು 23 ಸದಸ್ಯ ಬಲ ಹೊಂದಿದೆ. ಇದರಲ್ಲಿ 12 ಬಿಜೆಪಿ, 6 ಕಾಂಗ್ರೆಸ್, ಓರ್ವ ಜೆಡಿಎಸ್ ಹಾಗೂ ನಾಲ್ವರು ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಂತರದಲ್ಲಿ ಮೂವರು ಪಕ್ಷೇತರರು ಬಿಜೆಪಿ, ಓರ್ವ ಪಕ್ಷೇತರ ಹಾಗೂ ಓರ್ವ ಜೆಡಿಎಸ್ ಸದಸ್ಯ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಬಿಜೆಪಿ ಸದಸ್ಯರ ಸಂಖ್ಯಾಬಲ 15 ಆಗಿದ್ದು ಆಡಳಿತ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿಯಾಗಿದೆ.ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ:
4ನೇ ವಾರ್ಡಿನ ಗಂಗಿಮಾಳವ್ವ ಮೋರನಾಳ, 7ನೇ ವಾರ್ಡಿನ ಕವಿತಾ ಉಳ್ಳಾಗಡ್ಡಿ, 8ನೇ ವಾರ್ಡಿನ ಶಾಂತವ್ವ ಕರಡಿಕೊಳ್ಳ, 10ನೇ ವಾರ್ಡಿನ ರುಕ್ಮಿಣಿ ಸುಣಗಾರ, 11ನೇ ವಾರ್ಡಿನ ನಿರ್ಮಲಾ ಕೊರ್ಲಹಳ್ಳಿ, 15ನೇ ವಾರ್ಡಿನ ಜ್ಯೋತಿ ಹಾನಗಲ್, 21ನೇ ವಾರ್ಡಿನ ವಿಣಾದೇವಿ ಸೋನಿ ಬಿಜೆಪಿ ಸದಸ್ಯರಾಗಿದ್ದಾರೆ. ಇದೀಗ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಇವರು ಅಧ್ಯಕ್ಷ ಸ್ಥಾನ ಅಲಂಕರಿಸಲು ತೆರೆಮರೆ ಕಸರತ್ತು ಆರಂಭಿಸಿದ್ದಾರೆ. ತಮ್ಮ ಕಾರ್ಯಕರ್ತರೊಂದಿಗೆ ತಮ್ಮ ನಾಯಕರ ಮನೆ ಬಾಗಿಲು ತಟ್ಟಲು ಶುರು ಮಾಡಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಸದಸ್ಯರಾದ 3ನೇ ವಾರ್ಡಿನ ಸುಮಾ ಬಳ್ಳಾರಿ, 23ನೇ ವಾರ್ಡಿನ ದೇವಕ್ಕ ದಂಡಿನ ಸಹ ಅಧ್ಯಕ್ಷ ಸ್ಥಾನಕ್ಕೆರಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.ಕಾದು ನೋಡುವ ತಂತ್ರ:
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸೋಮವಾರ ಸಂಜೆಯಿಂದಲೇ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ತಮ್ಮ ನಾಯಕರ ಭೇಟಿ ಮಾಡುತ್ತಿದ್ದಾರೆ. ಆದರೆ, ನಾಯಕರು ಚುನಾವಣೆ ದಿನಾಂಕ ನಿಗದಿಯಾಗಲಿ. ಎಲ್ಲರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿ ಕಳಿಸುತ್ತಿದ್ದಾರೆ. ಮತ್ತೊಂದೆಡೆ ತಮ್ಮ ಬೆಂಬಲಿಗರಿಗೆ ಪಟ್ಟ ಕಟ್ಟಲು ನಾಯಕರು ಕೆಲಸ ಮಾಡುತ್ತಿದ್ದಾರೆ. ಮುಂಡರಗಿ ಪಟ್ಟಣ ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಒಳಪಡಲಿದ್ದು, ಇಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಹಿಂದೆ ಮೊದಲ ಅವಧಿಯಲ್ಲಿಯೂ ಸಹ ಬಿಜೆಪಿ ಶಾಸಕರಿದ್ದರು. ಆಗಲೂ ಸಹ ಬಿಜೆಪಿಯ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷರಾಗಿ, ಶಿವಪ್ಪ ಚಿಕ್ಕಣ್ಣವರ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ಇದೀಗ ಮತ್ತೆ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದು ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಗಾದಿ ಯಾರು ಏರುವರೆಂದು ಕಾದು ನೋಡಬೇಕಿದೆ.ಸೋಮವಾರ ಪುರಸಭೆ ಮೀಸಲಾತಿ ಪ್ರಕಟವಾಗಿದ್ದು, ಜಿಲ್ಲಾಧಿಕಾರಿಗೆ ಸರ್ಕಾರದ ಆದೇಶ ಬಂದ ತಕ್ಷಣವೇ ಜಿಲ್ಲಾ ಉಪವಿಭಾಗಾಧಿಕಾರಿಯಾಗಲಿ ಅಥವಾ ತಹಸೀಲ್ದಾರ್ ಆಗಲಿ ಚುನಾವಣಾಧಿಕಾರಿಯಾಗಿ ಆಗಮಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳಿದರು.