ಈ ಬಾರಿ ಮೇಯರ್ ಆಗೋರು ಯಾರು?

| Published : Mar 27 2024, 01:01 AM IST

ಸಾರಾಂಶ

ಯಾವುದೇ ಕಾರಣಕ್ಕೂ ಈಗಾಗಲೇ ಮೇಯರ್ ಆಗಿ ಅಧಿಕಾರವುಂಡ ಸಮಾಜಕ್ಕೆ ಪದೇ ಪದೇ ರಾಜಕೀಯ ಅಧಿಕಾರದ ಅವಕಾಶ ನೀಡುವಂತಾಗಬಾರದು ಎಂಬ ಕೂಗು ಪಕ್ಷ ಹಾಗೂ ಪಾಲಿಕೆ ಸದಸ್ಯರ ವಲಯದಲ್ಲಿ ಕೇಳಿ ಬಂದಿದೆ.

ಕೆ.ಎಂ.ಮಂಜುನಾಥ್

ಕನ್ನಡಪ್ರಭವಾರ್ತೆ ಬಳ್ಳಾರಿ

ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಮಾ. 28ರಂದು ಜರುಗಲಿದ್ದು, ಅಧಿಕಾರದ ಗದ್ದುಗೆ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.

ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಸಹಜವಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆದರೆ, ಪಕ್ಷದ ಹಿರಿಯ ನಾಯಕರು ಹಾಗೂ ಜಿಲ್ಲಾ ಪ್ರಮುಖರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.

ಏತನ್ಮಧ್ಯೆ ಮೇಯರ್ ಆಯ್ಕೆ ವೇಳೆ ಸಾಮಾಜಿಕ ನ್ಯಾಯ ನೀಡಬೇಕು. ಅವಕಾಶ ವಂಚಿತ ಸಮುದಾಯಕ್ಕೆ ಆದ್ಯತೆ ಸಿಗಬೇಕು. ಯಾವುದೇ ಕಾರಣಕ್ಕೂ ಈಗಾಗಲೇ ಮೇಯರ್ ಆಗಿ ಅಧಿಕಾರವುಂಡ ಸಮಾಜಕ್ಕೆ ಪದೇ ಪದೇ ರಾಜಕೀಯ ಅಧಿಕಾರದ ಅವಕಾಶ ನೀಡುವಂತಾಗಬಾರದು ಎಂಬ ಕೂಗು ಪಕ್ಷ ಹಾಗೂ ಪಾಲಿಕೆ ಸದಸ್ಯರ ವಲಯದಲ್ಲಿ ಕೇಳಿ ಬಂದಿದೆ. ಬಳ್ಳಾರಿಯ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ಬಂದಿದ್ದು, ಅವಕಾಶ ವಂಚಿತ ಸಮಾಜಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣೆ ಸನಿಹವಾಗುತ್ತಿರುವುದರಿಂದ ಮೇಯರ್ ಆಯ್ಕೆಯ ರಾಜಕೀಯ ಲೆಕ್ಕಾಚಾರವೂ ಇದೆ. ಅವಕಾಶ ವಂಚಿತ ಸಮಾಜವನ್ನು ಕಡೆಗಣಿಸುವುದರಿಂದ ಚುನಾವಣೆ ಹಾಗೂ ಪಕ್ಷದ ಬೆಳವಣಿಗೆ ಮೇಲೂ ಹೊಡೆತ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಆಕಾಂಕ್ಷಿಗಳು ಯಾರ್‍ಯಾರು?

ಪಕ್ಷದ ಹಿರಿಯ ಮುಖಂಡ ಪಿ. ಗಾದೆಪ್ಪ, ಮುಂಡ್ಲೂರು ಪ್ರಭಂಜನಕುಮಾರ್, ಆಸೀಫ್, ಮುಲ್ಲಂಗಿ ನಂದೀಶ್, ಕವಿತಾ ಹೊನ್ನಪ್ಪ ಪೇರಲ ವಿಕ್ಕಿ ಅವರು ಆಕಾಂಕ್ಷಿಗಳಾಗಿದ್ದಾರೆ.

ಈಗಾಗಲೇ ಕಮ್ಮಾ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಲಾಗಿದ್ದು, ಇತ್ತೀಚೆಗಷ್ಟೇ ಇದೇ ಸಮಾಜದ ಜೆ.ಎಸ್‌. ಆಂಜಿನೇಯಲು ಅವರನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಜೆ.ಎಸ್. ಆಂಜಿನೇಯಲು ಅವರು ಬುಡಾ ಅಧ್ಯಕ್ಷರಾಗಿದ್ದಾಗ್ಯೂ ಮತ್ತೊಮ್ಮೆ ಅವಕಾಶ ನೀಡಲಾಗಿದೆ.

ಇನ್ನು ಮುಸ್ಲಿಂ ಸಮಾಜಕ್ಕೂ ರಾಜಕೀಯ ಆದ್ಯತೆಗಳು ದಕ್ಕಿವೆ. ಪಕ್ಷದ ಮುಖಂಡ ಡಾ. ಸೈಯದ್ ನಾಸಿರ್ ಹುಸೇನ್ ಅವರನ್ನು ಎರಡನೇ ಬಾರಿಗೆ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಲಾಗಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಸಹ ಮುಸ್ಲಿಂ ಸಮುದಾಯದವರಿದ್ದಾರೆ. ಇನ್ನು ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಹ ಮುಸ್ಲಿಂ ಸಮಾಜಕ್ಕೆ ನೀಡಲಾಗಿದೆ. ಹಾಗೆ ನೋಡಿದರೆ ಈ ವರೆಗೆ ಭೋವಿ, ಕುರುಬ ಹಾಗೂ ಯಾದವ ಸಮಾಜಕ್ಕೆ ಈ ವರೆಗೆ ಅಧಿಕಾರ ದಕ್ಕಿಲ್ಲ. ಹೀಗಾಗಿ ಪಕ್ಷದ ನಾಯಕರು ಮೇಯರ್ ಆಯ್ಕೆ ವಿಷಯದಲ್ಲಿ ಸಾಮಾಜಿಕ ನ್ಯಾಯ ನೀಡಬೇಕು. ನೀಡಿದ ಸಮಾಜಕ್ಕೆ ಪದೇ ಪದೇ ಅವಕಾಶ ನೀಡದೆ, ಅವಕಾಶ ವಂಚಿತ ಸಮಾಜವನ್ನು ಪರಿಗಣಿಸಬೇಕು ಎಂಬ ಕೂಗು ಬಲವಾಗಿ ಕೇಳಿ ಬಂದಿದೆ.

ಸದಸ್ಯರ ಸೆಳೆಯಲು ಚಿನ್ನ-ಬೆಳ್ಳಿ ನೀಡಿ ಆಮಿಷ

ಪಾಲಿಕೆಯ ಒಟ್ಟು 39 ವಾರ್ಡ್‌ಗಳಲ್ಲಿ ಐವರು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಒಟ್ಟು 26 ಸ್ಥಾನಗಳನ್ನು ಕಾಂಗ್ರೆಸ್‌ ಪಕ್ಷ ಹೊಂದುವ ಮೂಲಕ ಅಧಿಕಾರದ ಗದ್ದುಗೇರಿದೆ. ಇನ್ನುಳಿದ 13 ಸ್ಥಾನದಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಆದರೆ, ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿಯೇ ಪಕ್ಷದ ಸದಸ್ಯರು ಹಾಗೂ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯರ ನಡುವೆ ಜಿದ್ದಾಜಿದ್ದಿ ನಡೆದಿದೆ. ಉಪ ಮೇಯರ್ ಬಿಸಿಎ (ಮಹಿಳೆ) ಮೀಸಲಾಗಿದೆ. ಮೇಯರ್ ಹುದ್ದೆ ಆಕಾಂಕ್ಷಿತರು ನಾನಾ ಆಮಿಷಗಳ ಮೂಲಕ ಸದಸ್ಯರನ್ನು ಸೆಳೆಯಲು ಕಸರತ್ತು ಆರಂಭಿಸಿದ್ದಾರೆ. ಚಿನ್ನ, ಬೆಳ್ಳಿಯ ಆಮಿಷಗಳನ್ನು ತೋರಿಸಿ ಸದಸ್ಯರ ಬೆಂಬಲ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಗಾದೆಪ್ಪ ಪರ ಸದಸ್ಯರ ಬ್ಯಾಟಿಂಗ್?

ಕಾಂಗ್ರೆಸ್‌ನಲ್ಲಿ ಕಳೆದ ಮೂರೂವರೆ ದಶಕದಿಂದ ಗುರುತಿಸಿಕೊಂಡಿರುವ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಪಿ. ಗಾದೆಪ್ಪ ಅವರನ್ನು ಮೇಯರ್ ಮಾಡಬೇಕು ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯರು ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾ ಸಚಿವರು ಹಾಗೂ ನಗರ ಶಾಸಕರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಯಾದವ ಸಮುದಾಯಕ್ಕೆ ಈ ವರೆಗೆ ಅಧಿಕಾರದ ಅವಕಾಶ ಸಿಕ್ಕಿಲ್ಲ. ಪಕ್ಷದ ನಿಷ್ಠಾತರಿಗೆ ಅಧಿಕಾರ ಸಿಗದೇ ಹೋದರೆ ಶೋಷಿತ ಸಮುದಾಯವೊಂದು ಅಧಿಕಾರದಿಂದ ವಂಚಿತಗೊಂಡಂತಾಗುತ್ತದೆ ಎಂದು ಕೆಲ ಸದಸ್ಯರು ಪಕ್ಷದ ನಾಯಕರಿಗೆ ತಿಳಿಸಿದ್ದಾರೆ. ಖುದ್ದು ಗಾದೆಪ್ಪ ಸಹ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಅವಕಾಶಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಹಣ ಮುಖ್ಯವಾದರೆ ಸವಾಲು ಹಾಕಲಿ

ಮೇಯರ್ ಸ್ಥಾನ ನೀಡುವಾಗ ಸಾಮಾಜಿಕ ನ್ಯಾಯ ಪರಿಗಣಿಸಬೇಕು. ಬರೀ ಹಣವುಳ್ಳವರಿಗೆ ಅಧಿಕಾರ ನೀಡುವಂತಗಬಾರದು. ಹಣ ಇದ್ದವರೇ ಅಧಿಕಾರಕ್ಕೆ ಬಂದರೆ ಪಕ್ಷದ ಬೆಳವಣಿಗೆಗೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಪಕ್ಷದ ಕೆಲ ಮುಖಂಡರು ಹಾಗೂ ಕಾರ್ಯಕರ್ತರು, ಒಂದು ವೇಳೆ ಪಕ್ಷದ ಹಿರಿಯ ನಾಯಕರಿಗೆ ಹಣವುಳ್ಳವರೇ ಮುಖ್ಯ ಎನಿಸಿದರೆ, ಮೇಯರ್ ಹುದ್ದೆಯನ್ನು ಸವಾಲು ಹಾಕಲಿಬಿಡಿ. ಹಣ ಇದ್ದವರು ಕೂಗಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.