ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಮಾ.15ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿವೆ. ನೂತನ ಮೇಯರ್ ಯಾರಾಗುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಮೇಯರ್ ಸ್ಥಾನ ಸಾಮಾನ್ಯ ಮತ್ತು ಉಪಮೇಯರ್ ಸ್ಥಾನ ಮಹಿಳೆಗೆ ಮೀಸಲಾಗಿದೆ. ಒಟ್ಟು 58 ಸ್ಥಾನಗಳನ್ನು ಹೊಂದಿರುವ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ 37 ಸ್ಥಾನಗಳನ್ನು ಹೊಂದುವ ಮೂಲಕ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೆ, ಕಾಂಗ್ರೆಸ್ ಕೇವಲ 21 ಸ್ಥಾನದ ಬಲ ಹೊಂದಿದೆ.ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಾರಿ ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳು ಬೆಳಗಾವಿ ದಕ್ಷಿಣ ಕ್ಷೇತ್ರದ ಪಾಲಾಗಲಿವೆ ಎನ್ನಲಾಗಿದೆ. ಮೇಯರ್ ಸ್ಥಾನಕ್ಕೆ ಪ್ರಮುಖವಾಗಿ ಮಂಗೇಶ ಪವಾರ ಮತ್ತು ಉಪಮೇಯರ್ ಸ್ಥಾನಕ್ಕೆ ದೀಪಾಲಿ ಟೋಪಗಿ ಹೆಸರು ಕೇಳಿಬರುತ್ತಿವೆ. ಆದರೆ, ಮೇಯರ್ ಸ್ಥಾನಕ್ಕೆ ರಾಜು ಬಾಥಕಂಡೆ, ನಿತಿನ ಜಾಧವ ಕೂಡ ಆಕಾಂಕ್ಷಿಯಾಗಿದ್ದಾರೆ. ಅದರಂತೆ ಉಪಮೇಯರ್ ಸ್ಥಾನಕ್ಕೆ ವಾಣಿ ಜೋಶಿ, ದೀಪಾಲಿ ಟೋಪಗಿ, ಸವತಾ ಪಾಟೀಲ, ವೀಣಾ ವಿಜಾಪುರ ಮತ್ತು ರೇಖಾ ಹೂಗಾರ ಆಕಾಂಕ್ಷಿಗಳಾಗಿದ್ದಾರೆ.
ಈಗಾಗಲೇ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಪಾಲಿಕೆ ಸದಸ್ಯರ ಜೊತೆಗೆ ಸಭೆ ನಡೆಸಿದ್ದಾರೆ. ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅಲ್ಲದೇ, ಪ್ರತಿಯೊಬ್ಬ ಸದಸ್ಯರು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕು ಎಂದು ಸೂಚನೆ ನೀಡಿದ್ದಾರೆ. ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಆಡಳಿತಾರೂಡ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಆಡಳಿತ ಪಕ್ಷದಲ್ಲಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಿದ್ದರೂ ಶಾಸಕ ಅಭಯ ಪಾಟೀಲ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ.ಆಡಳಿತ ಪಕ್ಷದಲ್ಲಿನ ಇಬ್ಬರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿಯೂ ತೀವ್ರ ರಾಜಕೀಯ ಚಟುವಟಿಕೆಗಳು ನಡೆದಿದ್ದವು. ಆದರೆ, ಮಂಗೇಶ ಪವಾರ ಮತ್ತು ಜಯಂತ ಜಾಧವ ಸದಸ್ಯತ್ವ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಪ್ರಾದೇಶಿಕ ಆಯುಕ್ತರು ಹೊರಡಿಸಿದ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಪ್ರತಿಪಕ್ಷ ಕಾಂಗ್ರೆಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಈ ಬಾರಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳೆರಡೂ ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದ ಪಾಲಾಗಲಿದ್ದು, ಮುಂಬರುವ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಈ ಎರಡೂ ಸ್ಥಾನಗಳನ್ನು ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರಕ್ಕೆ ಬಿಟ್ಟುಕೊಡುವ ಕುರಿತು ಬಿಜೆಪಿ ವರಿಷ್ಠರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಡಳಿತಾರೂಡ ಬಿಜೆಪಿಯಲ್ಲಿ ಮೇಯರ್, ಉಪಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ ಮೇಯರ್ ಪಟ್ಟ ಯಾರ ಪಾಲಿಗೆ ಒಲಿಯಲಿದೆ ಎನ್ನುವುದನ್ನು ಕಾಯ್ದುನೋಡಬೇಕು.
ಸದಸ್ಯರಿಗೆ ಗುರುತಿನ ಚೀಟಿ ಕಡ್ಡಾಯ:ಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಗಾಗಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯನ್ನು ಮಾ.15 ರಂದು ನಿಗದಿಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ ತಿಳಿಸಿದ್ದಾರೆ. ಮಹಾನಗರ ಪಾಲಿಕೆ ಸಭಾಭವನದಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಮಹಿಳಾ ಮೀಸಲಾತಿ ಅನ್ವಯವಾಗಲಿದೆ. ಬೆಳಗ್ಗೆ 9ರಿಂದ 11ರವರೆಗೆ ಮೇಯರ್ ಉಪಮೇಯರ್ ಸ್ಥಾನಗಳಿಗೆ ನಾಮಪತ್ರ ಸ್ವೀಕರಿಸಲಾಗುವುದು. ಚುನಾವಣೆ ದಿನದಂದು ಮಹಾನಗರ ಪಾಲಿಕೆ ಕಾರ್ಯಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಚುನಾಯಿತ ಸದಸ್ಯರನ್ನು ಗುರುತಿಸಲು ಪಾಲಿಕೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಚುನಾಯಿತ ಸದಸ್ಯರು ಕಡ್ಡಾಯವಾಗಿ ಗುರುತಿನ ಚೀಟಿ ತರಬೇಕು. ಚುನಾವಣೆ ಪ್ರಕ್ರಿಯೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗೆ ಸದಸ್ಯರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.