ಬಿಜೆಪಿಯ ಶ್ರೀರಾಮುಲುಗೆ ಎದುರಾಳಿ ಕೈ ಅಭ್ಯರ್ಥಿ ಯಾರು?

| Published : Mar 17 2024, 01:47 AM IST

ಸಾರಾಂಶ

ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಉಗ್ರಪ್ಪ ಕಳೆದ ಒಂದೂವರೆ ವರ್ಷಗಳ ಹಿಂದೆಯೇ ಬಳ್ಳಾರಿಯಲ್ಲಿ ಮನೆ ಮಾಡಿದ್ದು, ಬಳ್ಳಾರಿ-ವಿಜಯನಗರ ಜಿಲ್ಲೆಯ ಕಾಂಗ್ರೆಸ್ ನಾಯಕರ ಜತೆ ನಿರಂತರ ಒಡನಾಟದಲ್ಲಿದ್ದಾರೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದ್ದು, ಕಮಲ ಪಕ್ಷದ ಹುರಿಯಾಳಾಗಿ ಅಖಾಡಕ್ಕಿಳಿಯುವ ಬಿ. ಶ್ರೀರಾಮುಲು ವಿರುದ್ಧ ಸೆಣಸಾಡುವ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಕುತೂಹಲ ಮೂಡಿದೆ.

ಚುನಾವಣೆಗೆ ಸ್ಪರ್ಧೆಗಿಳಿಯುವ ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ವರೆಗೆ ಅಭ್ಯರ್ಥಿ ಘೋಷಣೆ ಕಗ್ಗಂಟಾಗಿದೆ. ಆದಾಗ್ಯೂ ಮೂಲಗಳ ಪ್ರಕಾರ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರನ್ನು ಕಾಂಗ್ರೆಸ್ ಚುನಾವಣಾ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.

ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಉಗ್ರಪ್ಪ ಕಳೆದ ಒಂದೂವರೆ ವರ್ಷಗಳ ಹಿಂದೆಯೇ ಬಳ್ಳಾರಿಯಲ್ಲಿ ಮನೆ ಮಾಡಿದ್ದು, ಬಳ್ಳಾರಿ-ವಿಜಯನಗರ ಜಿಲ್ಲೆಯ ಕಾಂಗ್ರೆಸ್ ನಾಯಕರ ಜತೆ ನಿರಂತರ ಒಡನಾಟದಲ್ಲಿದ್ದಾರೆ.

ಪಕ್ಷದಿಂದ ಜರುಗುವ ನಾನಾ ಹೋರಾಟಗಳು ಹಾಗೂ ಕಾರ್ಯಕ್ರಮಗಳಲ್ಲಿ ಉಗ್ರಪ್ಪ ಪಾಲ್ಗೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಉಗ್ರಪ್ಪ ಪರ ಒಲವು ಹೊಂದಿದ್ದಾರೆ ಎಂದು ಎನ್ನಲಾಗಿದೆ.

ಏತನ್ಮಧ್ಯೆ, ಸಂಡೂರು ಶಾಸಕ ತುಕಾರಾಂ ತಮ್ಮ ಪುತ್ರಿ ಚೈತನ್ಯ ಅವರಿಗೆ ಟಿಕೆಟ್ ಕೊಡಿಸಲು ಸಚಿವ ಸಂತೋಷ್ ಲಾಡ್ ಅವರೊಂದಿಗೆ ತೀವ್ರ ಪ್ರಯತ್ನದಲ್ಲಿದ್ದು, ಇತ್ತ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಸಹ ತಮ್ಮ ಸಹೋದರ ವೆಂಕಟೇಶ್ ಪ್ರಸಾದ್‌ ಅವರಿಗೆ ಟಿಕೆಟ್ ಕೊಡಿಸಲು ತೆರೆಮರೆಯ ಪ್ರಯತ್ನ ಮುಂದುವರಿಸಿದ್ದಾರೆ.

ಅಖಂಡ ಬಳ್ಳಾರಿ ಜಿಲ್ಲೆ ಈ ಹಿಂದಿನಿಂದಲೂ ಕಾಂಗ್ರೆಸ್‌ನ ಗಟ್ಟಿ ನೆಲ. ಕಾಂಗ್ರೆಸ್‌ಗೆ ಬೇರುಮಟ್ಟದಲ್ಲಿ ಪಕ್ಷ ಸಂಘಟನೆಯಿದೆ. ಬಹುದೊಡ್ಡ ಕಾರ್ಯಕರ್ತರ ಪಡೆಯಿದೆ. ಹೀಗಾಗಿ ಈ ಹಿಂದಿನಿಂದಲೂ ಚುನಾವಣೆ ಸಂದರ್ಭಗಳಲ್ಲಿ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ನಿರೂಪಿಸುತ್ತಲೇ ಬಂದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಬಳ್ಳಾರಿ ಜಿಲ್ಲೆಯ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಇನ್ನು ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಇಬ್ಬರು ಗೆಲುವು ದಾಖಲಿಸಿದರು. ಚುನಾವಣೆಗಳ ಇತಿಹಾಸ ಮೆಲುಕು ಹಾಕಿದರೆ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಬಾರಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಸಚಿವ ನಾಗೇಂದ್ರ ಅವರು ಸಹೋದರನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಲೋಕಸಭೆಗೆ ಕಳುಹಿಸಿಕೊಡುವ ಉತ್ಸುಕದಲ್ಲಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ.

ಇನ್ನು ಸಂಡೂರು ಶಾಸಕ ತುಕಾರಾಂ ಟಿಕೆಟ್ ಪ್ರಯತ್ನದಲ್ಲಿ ಹಿಂದೆ ಬಿದ್ದಿಲ್ಲ. ಪಕ್ಷದ ಹಿರಿಯ ನಾಯಕರ ಸಂಪರ್ಕ ಪಡೆದು ಮಗಳಿಗೆ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿದ್ದಾರೆ. ಬಳ್ಳಾರಿಯಲ್ಲಿಯೇ ಉಳಿದಿರುವ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಈ ಮೂವರ ಪ್ರಯತ್ನ ಮುಂದುವರಿದಿದ್ದು, ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ.ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ನಿಜ. ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಗೆಲುವು ಖಚಿತ. ಹೀಗಾಗಿ ಪೈಪೋಟಿ ಹೆಚ್ಚಾಗಿದೆ ಎನ್ನುತ್ತಾರೆ ಕೆಪಿಸಿಸಿ ರಾಜ್ಯ ಜಂಟಿ ಸಂಯೋಜಕ ಬಳ್ಳಾರಿ ವೆಂಕಟೇಶ್ ಹೆಗಡೆ.