ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು: ಯಡಿಯೂರಪ್ಪ ಪ್ರಶ್ನೆ

| Published : Apr 18 2024, 02:18 AM IST

ಸಾರಾಂಶ

ಧಾನಿ ನರೇಂದ್ರ ಮೋದಿ ದೇಶಕ್ಕಾಗಿಯೇ ತಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೇ ಕಳೆದ ಹತ್ತು ವರ್ಷಗಳಿಂದ ದೇಶ ಸೇವೆ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕಾಗಿತ್ತು

ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿದ ಮಾಜಿ ಸಿಎಂಕನ್ನಡಪ್ರಭ ವಾರ್ತೆ ಕೊಪ್ಪಳ

ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಮೊದಲು ಹೇಳಿ, ಮೋದಿಗೆ ಸಮಾನಾಗಿ ನಿಲ್ಲುವ ವ್ಯಕ್ತಿ ಯಾರಿದ್ದಾರೆ ಹೇಳಿ? ಎಂದು ಮಾಜಿ ಸಿಎಂ ಯಡಿಯೂರಪ್ಪ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶವನ್ನು ಶ್ರೀರಾಮನ ಮೂರ್ತಿಗೆ ಹಾಲೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಬಗ್ಗೆ ನಿಮಗೆ ಗೌರವ ಇದ್ದಿದ್ದರೆ, ನೀವು ಪ್ರಮಾಣಿಕರಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಬಾರಿ ಸರ್ವಾನುಮತದಿಂದ ಆಯ್ಕೆ ಮಾಡಬೇಕಾಗಿತ್ತು. ನಿಮ್ಮಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದಕ್ಕೂ ಯಾರೂ ಇಲ್ಲ ಎಂದು ಕಿಡಿಕಾರಿದರು.

ನಿಮ್ಮ ಕಾಲದಲ್ಲಿ ಹಣ, ಹೆಂಡ, ತೋಳ್ಬಲದಿಂದ ಅಧಿಕಾರ ನಡೆಸಲಾಗಿದೆ. ಈಗ ಮತದಾರರು ಅವಕಾಶ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿಯೇ ತಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೇ ಕಳೆದ ಹತ್ತು ವರ್ಷಗಳಿಂದ ದೇಶ ಸೇವೆ ಮಾಡುತ್ತಿದ್ದಾರೆ. ಅಂಥ ನಾಯಕ ಮತ್ತೆ ದೇಶದ ಪ್ರಧಾನಿಯಾದರೆ ದೇಶದ ಗೌರವ ಮತ್ತಷ್ಟು ಹೆಚ್ಚಳವಾಗಲಿದೆ ಎಂದರು.

ರಾಮಮಂದಿರ ನಿರ್ಮಾಣಕ್ಕಾಗಿ ಅನೇಕರು ಹೋರಾಟ ಮಾಡಿ ಪ್ರಾಣ ಕೊಟ್ಟಿದ್ದಾರೆ. ಅಂಥ ಮಹಾನ್‌ ಕಾರ್ಯವನ್ನು ಮೋದಿ ಮಾಡಿದ್ದಾರೆ. ನಾವು ಇರುವ ಕಾಲದಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡಲಾಗಿದೆ. ಆ ದೇವರ ನೋಡುವ ಭಾಗ್ಯ ನಮ್ಮದಾಗಿದೆ ಎಂದರು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶಿಕಾರಿಪುರವನ್ನು ಮೀರುವಂತೆ ಜನರು ಸೇರಿದ್ದಾರೆ. ಹೀಗಾಗಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ನಾವು ಜಯ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಭಾರತ್ ಮಾತಾ ಕೀ ಜೈ ಎನ್ನಲು ಎಐಸಿಸಿ ಅಧ್ಯಕ್ಷರ ಅನುಮತಿ ಬೇಕು. ಕಾಂಗ್ರೆಸ್ ಪಕ್ಷಕ್ಕೆ ಎಂಥ ದುರ್ಗತಿ ಬಂದಿದೆ ನೋಡಿ ಎಂದು ಕಿಡಿಕಾರಿದರು.

ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ರಾಮ ನವಮಿಯಂದು ಡಾ. ಬಸವರಾಜ ನಾಮಪತ್ರ ಸಲ್ಲಿಸಿದ್ದು, ವಿಜಯ ಸಂಕೇತವಾಗಿದೆ. ಇಡೀ ದೇಶ ಪ್ರಧಾನಿ ಮೋದಿ ಅವರು ಜಪ ಮಾಡುತ್ತಿದೆ. ದೇಶದ ಗೌರವಕ್ಕಾಗಿ ಮೋದಿ ಅವರನ್ನು ಗೆಲ್ಲಿಸಬೇಕು ಎಂದರು.

ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಾರೆ. ಆದರೆ ಅಂಬೇಡ್ಕರ್ ಮತ್ತೆ ಹುಟ್ಟಿ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಬಂದ್ ಮಾಡಿದೆ. ವಿದ್ಯುತ್ ಸಂಪರ್ಕ ಪಡೆಯಬೇಕು ಎಂದರೆ ₹2 ಲಕ್ಷ ಕಟ್ಟಬೇಕಾಗಿದೆ. ಎಸ್ಸಿ, ಎಸ್ಟಿ ಜನರ ಹಣವನ್ನು ಕಾಂಗ್ರೆಸ್‌ ಸರ್ಕಾರ ನುಂಗಿ ಕುಳಿತಿದೆ ಎಂದು ದೂರಿದರು.

ಮಾಜಿ ಸಚಿವ ಹಾಲಪ್ಪ ಅಚಾರ ಮಾತನಾಡಿ, ದೇಶದ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಗಲು, ಇರಳು ಶ್ರಮಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಜಗತ್ತು ಮುನ್ನಡೆಯಬೇಕಾಗಿದೆ ಎಂದರು.

ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಚಿವ ಮುರುಗೇಶ ನೀರಾಣಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಕೆ. ವಿರುಪಾಕ್ಷಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸ್ಗೂರು, ಹೇಮಲತಾ ನಾಯಕ, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಸಿ.ವಿ. ಚಂದ್ರಶೇಖರ, ವೀರೇಶ ಮಾಹಾಂತಯ್ಯನಮಠ, ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪೀರಾಹುಸೇನ ಹೊಸಳ್ಳಿ, ಕೆ. ಶರಣಪ್ಪ ಸೇರಿದಂತೆ ಅನೇಕರು ಇದ್ದರು.