ಯಾರು ಈ ಡ್ಯಾಂ ಗೇಟ್‌ ತಜ್ಞ ಕನ್ನಯ್ಯ ನಾಯ್ಡು?

| Published : Aug 15 2024, 01:47 AM IST

ಯಾರು ಈ ಡ್ಯಾಂ ಗೇಟ್‌ ತಜ್ಞ ಕನ್ನಯ್ಯ ನಾಯ್ಡು?
Share this Article
  • FB
  • TW
  • Linkdin
  • Email

ಸಾರಾಂಶ

ಜಲಾಶಯದ ಕ್ರಸ್ಟ್‌ ಗೇಟ್‌ ಕಳಚಿ ಬಿದ್ದ ಕೂಡಲೇ ತುಂಗಭದ್ರಾ ಮಂಡಳಿ ಅಧಿಕಾರಿಗಳಿಗೆ ಮೊದಲು ನೆನಪಾಗಿದ್ದೇ ಎನ್‌. ಕನ್ನಯ್ಯ ನಾಯ್ಡು ಹೆಸರು.

ಹೊಸಪೇಟೆ: ತುಂಗಭದ್ರಾ ಜಲಾಶಯದ 19ರ ಕ್ರಸ್ಟ್‌ ಗೇಟ್‌ ಕಳಚಿ ಬಿದ್ದ ಹಿನ್ನೆಲೆಯಲ್ಲಿ ಈಗ ಸ್ಟಾಪ್‌ ಲಾಗ್ ಗೇಟ್‌ ನಿರ್ಮಾಣ ಮಾಡಿ ನದಿಗೆ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ಉಳಿಸಲು ಮುಂದಾಗಿರುವ ಕನ್ನಯ್ಯ ನಾಯ್ಡು ಹೆಸರು ಈಗ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ಜಲಾಶಯದ ಕ್ರಸ್ಟ್‌ ಗೇಟ್‌ ಕಳಚಿ ಬಿದ್ದ ಕೂಡಲೇ ತುಂಗಭದ್ರಾ ಮಂಡಳಿ ಅಧಿಕಾರಿಗಳಿಗೆ ಮೊದಲು ನೆನಪಾಗಿದ್ದೇ ಎನ್‌. ಕನ್ನಯ್ಯ ನಾಯ್ಡು ಹೆಸರು. 78ರ ಹರೆಯದ ಕನ್ನಯ್ಯ ನಾಯ್ಡು ತುಂಗಭದ್ರಾ ಜಲಾಶಯ ನಿರ್ಮಾಣ ಕಾಲಕ್ಕೆ (1952ರಲ್ಲಿ) ಆಗಿನ ಪ್ರಧಾನಿ ಪಂಡಿತ ಜವಾಹರಲಾಲ್‌ ನೆಹರು ಹೊಸಪೇಟೆಯಲ್ಲಿ ಉದ್ಘಾಟನೆ ಮಾಡಿದ ತುಂಗಭದ್ರಾ ಸ್ಟೀಲ್‌ ಪ್ರಾಡೆಕ್ಟ್‌ ಲಿಮಿಟೆಡ್‌ನಲ್ಲಿ 1976ರಿಂದ 2002ರ ಮಾರ್ಚ್‌ 31ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಈಗ ಕಂಪನಿ ಮುಚ್ಚಿದೆ. ಇವರು 300ಕ್ಕೂ ಹೆಚ್ಚು ಭಾರೀ ಹಾಗೂ ಮಧ್ಯಮ ಜಲಾಶಯ ಯೋಜನೆಗಳ ಗೇಟ್‌ ನಿರ್ಮಾಣದಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಚಿತ್ತೂರು ಮೂದಲವರು ಆಗಿರುವ ಕನ್ನಯ್ಯ ನಾಯ್ಡು, ನೀರಾವರಿ ಯೋಜನೆಗಳಲ್ಲಿ ದೇಶದ ತುಂಬೆಲ್ಲ ಕೆಲಸ ಮಾಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ಹಲವು ಸರ್ಕಾರಗಳಿಗೆ ಜಲಾಶಯ ನಿರ್ಮಾಣ, ನೀರಾವರಿ ವಿಷಯದಲ್ಲಿ ಸಲಹೆ ನೀಡಿದ ಹಿರಿಮೆ ಇವರದು.

ಗುಜರಾತ್‌ನ ಸರ್ದಾರ ಸರೋವರ ಪ್ರಾಜೆಕ್ಟ್‌ನಲ್ಲೂ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಿಂದಲೂ ಸೈ ಎನಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಶ್ರೀಶೈಲಂ ಜಲಾಶಯದಲ್ಲಿ 2009ರಲ್ಲಿ ಪ್ರವಾಹ ಉಂಟಾಗಿ ಭಾರೀ ಸಮಸ್ಯೆ ಉಂಟಾದಾಗ ಇವರೇ ಕೆಲಸ ಮಾಡಿದ್ದಾರೆ.

ಇನ್ನು ನಾರಾಯಣಪುರ ಜಲಾಶಯದಲ್ಲೂ ಕೆಲಸ ನಿರ್ವಹಿಸಿದ್ದಾರೆ. ದೇಶದ ಹಲವು ಜಲ ವಿದ್ಯುತ್‌ ಉತ್ಪಾದನಾ ಯೋಜನೆಗೂ ಡಿಸೈನ್‌ ತಯಾರಿಸಿದ್ದಾರೆ. ದೇಶದ ಯಾವುದೇ ಜಲಾಶಯದಲ್ಲಿ ಸಮಸ್ಯೆ ಆದರೂ ಇದಕ್ಕೆ ತಾಳ್ಮೆಯಿಂದ ಪರಿಹಾರ ಸೂಚಿಸುತ್ತಾರೆ. ಈಗ ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇವರ ಕಾರ್ಯ ಮೆಚ್ಚಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಭೋಜನಕ್ಕೂ ಆಹ್ವಾನಿಸಿದ್ದಾರೆ. ಇವರು ಮಾತ್ರ ರೈತರ ಕೃಷಿ ಜಮೀನಿಗಾಗಿ ಜಲಾಶಯದಲ್ಲಿ ನೀರು ಉಳಿಸಬೇಕು. ರೈತರು ಉಳಿದರೆ ದೇಶ ಉಳಿಯಲಿದೆ ಎಂದು ವಿನಮ್ರವಾಗಿ ಹೇಳುತ್ತಾರೆ.

ಮೊದಲು ನಾವು ಶ್ರದ್ಧೆಯಿಂದ ಕೆಲಸ ಮಾಡಬೇಕು. ನಾನು ಕೂಡ ಬಡ ಕುಟುಂಬದಿಂದಲೇ ಬಂದಿರುವೆ. ದಕ್ಷಿಣ ಭಾರತ, ಉತ್ತರ ಭಾರತ ಮತ್ತು ಈಶಾನ್ಯ ಭಾರತದ ಹಲವು ಜಲಾಶಯದ ಸಮಸ್ಯೆಗಳನ್ನು ಪರಿಹರಿಸಿರುವೆ. ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೂ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಿಸುವೆ. ಈ ಮೂಲಕ ರೈತರ ಕೃಷಿ ಜಮೀನಿಗೆ ನೀರು ದೊರೆಯುವಂತೆ ಮಾಡುವೆ.