ಕಾಂಪೌಂಡ್‌ ನಿರ್ಮಾಣದಲ್ಲಿ ಭ್ರಷ್ಟಾಚಾರ ಆಗಿರುವುದಾಗಿ ಪ್ರತಿಭಟಿಸಿದ ಬಿಜೆಪಿಯವರು ಹಿಂದೆ ಪಾಲಿಕೆಯಲ್ಲಿ ನಿಮ್ಮದೇ ಪಕ್ಷದ ಆಳ್ವಿಕೆಯಲ್ಲಿ ಶ್ರೀ ಬಸವೇಶ್ವರ, ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿಗಳ ನಿರ್ಮಾಣಕ್ಕೆ ಟೆಂಡರ್ ಕರೆದು, ಕಾಮಗಾರಿ ಪೂರ್ಣಗೊಳ್ಳದಿದ್ದರೂ ಎರಡೂ ಪುತ್ಥಳಿ ನಿರ್ಮಾಣಕ್ಕೆ ಗುತ್ತಿಗೆದಾರನಿಂದ ಕಿಕ್‌ ಬ್ಯಾಕ್ ಪಡೆದಿದ್ದು ಯಾರೆಂಬುದನ್ನೂ ಬಹಿರಂಗಪಡಿಸಲಿ ಎಂದು ಕೆಪಿಸಿಸಿ ವಕ್ತಾರ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದ್ದಾರೆ.

- ಕಾಂಪೌಂಡ್‌ ನಿರ್ಮಾಣದಲ್ಲಿ ಭ್ರಷ್ಟಾಚಾರ ಎನ್ನುವ ಮಾಜಿ ಮೇಯರ್ ವೀರೇಶ್, ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನ ಉತ್ತರಿಸಲಿ - ಕೆಪಿಸಿಸಿ ವಕ್ತಾರ ದಿನೇಶ ಕೆ. ಶೆಟ್ಟಿ ವಾಗ್ದಾಳಿ । ಹರಿಹರ ಶಾಸಕ ಬಿ.ಪಿ.ಹರೀಶ, ಯಶವಂತ ರಾವ್ ವಿರುದ್ಧವೂ ಕಿಡಿನುಡಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಪೌಂಡ್‌ ನಿರ್ಮಾಣದಲ್ಲಿ ಭ್ರಷ್ಟಾಚಾರ ಆಗಿರುವುದಾಗಿ ಪ್ರತಿಭಟಿಸಿದ ಬಿಜೆಪಿಯವರು ಹಿಂದೆ ಪಾಲಿಕೆಯಲ್ಲಿ ನಿಮ್ಮದೇ ಪಕ್ಷದ ಆಳ್ವಿಕೆಯಲ್ಲಿ ಶ್ರೀ ಬಸವೇಶ್ವರ, ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿಗಳ ನಿರ್ಮಾಣಕ್ಕೆ ಟೆಂಡರ್ ಕರೆದು, ಕಾಮಗಾರಿ ಪೂರ್ಣಗೊಳ್ಳದಿದ್ದರೂ ಎರಡೂ ಪುತ್ಥಳಿ ನಿರ್ಮಾಣಕ್ಕೆ ಗುತ್ತಿಗೆದಾರನಿಂದ ಕಿಕ್‌ ಬ್ಯಾಕ್ ಪಡೆದಿದ್ದು ಯಾರೆಂಬುದನ್ನೂ ಬಹಿರಂಗಪಡಿಸಲಿ ಎಂದು ಕೆಪಿಸಿಸಿ ವಕ್ತಾರ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಸಿಸಿ ಕಾಲನಿ ಬಿ ಬ್ಲಾಕ್ ಕಾಂಪೌಂಡ್‌ನ ಶಿಥಿಲ ಭಾಗವನ್ನು ತೆರವು ಮಾಡಿಸಿ, ಶಿಥಿಲ ಭಾಗದಲ್ಲಿ ಹೊಸ ಕಾಂಪೌಂಡ್ ನಿರ್ಮಿಸಲು ಹೊರಟಿದ್ದಕ್ಕೆ ಕಾಂಪೌಂಡ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಆರೋಪಿಸಿ ಪ್ರತಿಭಟಿಸಿದ ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಪುತ್ಥಳಿ ನಿರ್ಮಾಣಕ್ಕೆ ಟೆಂಡರ್ ಇಲ್ಲದೇ, ಮುಂಗಡ ಹಣ ಕೊಟ್ಟು, ಕಿಕ್ ಬ್ಯಾಕ್ ಪಡೆದಿದ್ದು ಯಾರೆಂದು ತಿಳಿಸಲಿ ಎಂದರು.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಪುತ್ಥಳಿ ಅನಾವರಣಕ್ಕೆ ಅನುದಾನ ಕೊಡಲಾಗುವುದಿಲ್ಲ ಎಂಬ ವಿರೋಧದ ಮಧ್ಯೆಯೂ ಎಸ್.ಟಿ.ವೀರೇಶ, ಕೆ.ಪ್ರಸನ್ನಕುಮಾರ ಅರುಣ ಚಿತ್ರ ಮಂದಿರದ ಬಳಿ ವೀರರಾಣಿ ಕಿತ್ತೂರು ಚನ್ನಮ್ಮನ ಪುತ್ಥಳಿ, ಪಾಲಿಕೆ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ಪ್ರತಿಷ್ಟಾಪಿಸಲು ಮುಂಗಡ ಅನುದಾನ ಬಿಡುಗೆ ಮಾಡಿಸಿ, ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ. ಚನ್ನಮ್ಮ ಪುತ್ಥಳಿಗೆ ₹53 ಲಕ್ಷ ಟೆಂಡರ್ ಕರೆಯಲಾಗಿತ್ತು. ಚನ್ನಮ್ಮನ ಪುತ್ಥಳಿಗೆ ₹15.44 ಲಕ್ಷ, ಬಸವಣ್ಣನ ಪುತ್ಥಳಿಗೆ ₹13.5 ಲಕ್ಷ ಮುಂಗಡ ಹಣವನ್ನು ಗುತ್ತಿಗೆದಾರರಿಗೆ ಕೊಡಿಸಿದ್ದು ಎಂದು ಅ‍ವರು ಪ್ರಶ್ನಿಸಿದರು. ಗುತ್ತಿಗೆದಾರನಿಗೆ ಮುಂಗದ ಹಣ ಕೊಡಿಸಿ, ₹6 ಲಕ್ಷದಂತೆ ಕಿಕ್ ಪಡೆದಿದ್ದು ಯಾರು? ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ, ಸೇರಿಸಿ, ವಿಚಾರಣೆ ನಡೆಸಲಾಗುತ್ತಿದೆ. ದಾವಣಗೆರೆ ನಗರದ ವಿವಿಧ ಹಾಸ್ಟೆಲ್‌ಗಳಿಗೆ ₹2.5 ಕೋಟಿ ಅನುದಾನದಲ್ಲಿ 62 ಸೋಲಾರ್ ಪ್ಯಾನಲ್ ಅಳವಡಿಸುವ ಕೆಲಸದಲ್ಲೂ ಕೆ.ಪ್ರಸನ್ನಕುಮಾರ ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ಆರೋಪಗಳಿಗೆ ಪಾಲಿಕೆಯಲ್ಲಿ ದಾಖಲೆಗಳಿವೆ. ಅಧಿಕಾರಿಗಳ ಬಳಿ ದಾಖಲೆ ಪಡೆದು, ಪರಿಶೀಲಿಸಬಹುದು ಎಂದು ‍ತಿಳಿಸಿದರು.

ಪಾಲಿಕೆ ಎದುರಿನ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಲ್ಲದಂತೆ ಕೆಲಸ ಮಾಡುವುದಾಗಿ ಆಗಿನ ಮೇಯರ್ ಎಸ್.ಟಿ.ವೀರೇಶ ಮಾಡಿದರು. ಸಮಸ್ಯೆ ಮಾತ್ರ ಬಗೆಹರಿಯಲೇ ಇಲ್ಲ. ಈಗಲೂ ಒಂದಿಷ್ಟು ಜೋರು ಮಳೆ ಬಂದರೆ ನೀರು ನಿಲ್ಲುವ ಸ್ಥಿತಿ ಇದೆ. ಜಿಲ್ಲಾ ಕೇಂದ್ರದಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ. ಅಭಿವೃದ್ಧಿ ಕಾರ್ಯಗಳೆಂದರೆ ಕಾಂಗ್ರೆಸ್ ಎಂಬುದು ಜನರಿಗೂ ಗೊತ್ತಿದೆ. ಭ್ರಷ್ಟಾಚಾರ ಏನಿದ್ದರೂ ಬಿಜೆಪಿಯವರಿಗೆ ಸಲ್ಲುತ್ತದೆ ಎಂದು ಅವರು ದೂರಿದರು.

ಹರಿಹರದ ಶಾಸಕ ಬಿ.ಪಿ.ಹರೀಶ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಾರೆ. ಹರೀಶ್‌ಗೆ ಮಾತ್ರ ಏಕವಚನದಲ್ಲಿ ಮಾತನಾಡುವುದಕ್ಕೆ ಬರುವುದಿಲ್ಲ, ನಮಗೂ ಬರುತ್ತದೆ. ಆದರೆ, ನಮಗೆ ಸಂಸ್ಕೃತಿ, ಸಂಸ್ಕಾರ ಇದೆ. ಹಾಗಾಗಿ, ಬಿ.ಪಿ.ಹರೀಶ ರೀತಿ ಮಾತನಾಡುವುದಿಲ್ಲ. ಮುಂಚೆ ಶಾಮನೂರು ಕುಟುಂಬ, ನಂತರ ಬಾಪೂಜಿ ವಿದ್ಯಾಸಂಸ್ಥೆ ಬಗ್ಗೆ, ಈಗ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಬಗ್ಗೆ ವೈಯಕ್ತಿಕ ದಾಳಿ ಕೆಲಸಕ್ಕೆ ಹರೀಶ ಮುಂದಾಗಿದ್ದು, ಹರೀಶ ಬಾಯಿ ಸರಿ ಇಲ್ಲ ಎಂದು ಕುಟುಕಿದರು.

ಹಿಂದೆ ನಗರಸಭೆಯಲ್ಲಿ ಇದ್ದಾಗ, ದೂಡಾ ಅಧ್ಯಕ್ಷರಾಗಿದ್ದಾಗ ಭ್ರಷ್ಟಾಚಾರ ನಡೆಸಿರುವ, ಬೆಳ್ಳಿ ಇಟ್ಟಿಗೆ, ಶ್ರೀರಾಮಚಂದ್ರನ ಹೆಸರಿನಲ್ಲಿ ಲೂಟಿ ಮಾಡಿರುವ ಯಶವಂತ ರಾವ್ ಜಾಧವ್ ಭ್ರಷ್ಟಾಚಾರ ಅಂತೆಲ್ಲಾ ಮಾತನಾಡುತ್ತಾರೆ. ದಾವಣಗೆರೆಯ ಚಂಪತ್ ರಾಯ್‌ ಸೇರಿದಂತೆ ಬಿಜೆಪಿಯ ಕೆಲವರಿಗೆ ಕಾಂಗ್ರೆಸ್‌, ಜಿಲ್ಲಾ ಸಚಿವರು, ಶಾಮನೂರು ಕುಟುಂಬವನ್ನು ಟೀಕಿಸುವುದೇ ರಾಜಕೀಯ ಎಂಬಂತಾಗಿದೆ ಎಂದು ದೂರಿದರು.

ದಾವಣಗೆರೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. 15 ವರ್ಷಗಳ ಹಿಂದೆಯೇ 50ಕ್ಕೂ ಹೆಚ್ಚು ಪಾರ್ಕ್‌ಗಳಿಗೆ ಕಾಂಪೌಂಡ್‌ ನಿರ್ಮಾಣ, ಆಟಿಕೆ ಅಳವಡಿಕೆ, ವಾಕಿಂಗ್ ಪಾಥ್‌, ಗಾರ್ಡನಿಂಗ್ ಸೇರಿದಂತೆ ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಅನೇಕ ಕಡೆಯಿಂದ ದಾವಣಗೆರೆಗೆ ಬಂದು, ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಂಡು ಹೋಗಿ, ತಮ್ಮ ಭಾಗದಲ್ಲಿ ಜನಪ್ರತಿನಿಧಿಗಳು ಮಾಡಿರುವ ನಿದರ್ಶನಗ‍ಳಿವೆ ಎಂದು ಅವರು ಹೇಳಿದರು.

ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ ಮಾಲತೇಶ, ದೂಡಾ ಸದಸ್ಯೆ ವಾಣಿ ಬಕ್ಕೇಶ ನ್ಯಾಮತಿ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ, ಸಲ್ಮಾ ಭಾನು, ಮುಜಾಹಿದ್ ಪಾಶ, ಹರೀಶ ಇತರರು ಇದ್ದರು.

- - -

(ಬಾಕ್ಸ್‌)

* ಕಾಂಪೌಂಡ್‌ ಶಿಥಿಲ ಭಾಗವಷ್ಟೇ ಹೊಸದಾಗಿ ನಿರ್ಮಾಣ

ಕಾಂಪೌಂಡ್ ನಿರ್ಮಾಣ ಕಾಮಗಾರಿ ವಿಚಾರವಾಗಿ ಗುರುವಾರ ಪ್ರತಿಭಟಿಸಿದ ಬಿಜೆಪಿಯವರಿಗೆ ಯಾವುದೇ ಮಾಹಿತಿ ಇಲ್ಲ. ₹90 ಲಕ್ಷ ಅನುದಾನದಲ್ಲಿ ಬರೀ ಕಾಂಪೌಂಡ್ ನಿರ್ಮಾಣಕ್ಕೆಂದು ಬಳಸುತ್ತಿಲ್ಲ. ಕಾಂಪೌಂಡ್‌ನ ಶಿಥಿಲ ಭಾಗವನ್ನಷ್ಟೇ ಹೊಸದಾಗಿ ನಿರ್ಮಿಸಲಾಗುತ್ತಿದೆ. ಅಲ್ಲದೇ, ಪಾರ್ಕ್‌ಗೆ ವಿದ್ಯುತ್ ಅಲಂಕಾರ, ಸಸಿ ನೆಡುವುದೂ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳೂ ಸೇರಿವೆ. ವಿವಿಐಪಿಗಳು, ವಿಐಪಿಗಳು ಬಂದು ಹೋಗುವ ಮುಖ್ಯ ರಸ್ತೆಯ ಪಾರ್ಕ್‌ ಸುಂದರವಾಗಿ ಇರಲೆಂದು ತೋಟಗಾರಿಕೆ ಇಲಾಖೆ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದಿನೇಶ ಶೆಟ್ಟಿ ಸ್ಪಷ್ಟಪಡಿಸಿದರು.

- - -

-2ಕೆಡಿವಿಜಿ6:

ದಾವಣಗೆರೆಯಲ್ಲಿ ಶುಕ್ರವಾರ ಕೆಪಿಸಿಸಿ ಮಾಧ್ಯಮ ವಕ್ತಾರ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.