ಪಕೋಡ ಮಾರಿ ಎನ್ನುವ ಮೋದಿ ಪ್ರಧಾನಿ ಹುದ್ದೆಗೆ ಅರ್ಹರಲ್ಲ: ಸಿಎಂ ಸಿದ್ದರಾಮಯ್ಯ

| Published : Apr 21 2024, 02:19 AM IST

ಪಕೋಡ ಮಾರಿ ಎನ್ನುವ ಮೋದಿ ಪ್ರಧಾನಿ ಹುದ್ದೆಗೆ ಅರ್ಹರಲ್ಲ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರು ಕೆಲಸ ನೀಡುವಂತೆ ಕೇಳಿದರೆ ಪಕೋಡ ಮಾರಿ ಎನ್ನುವ ಮೂಲಕ ಬೇಜವಾಬ್ದಾರಿ ಉತ್ತರ ನೀಡುವ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಅರ್ಹರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅರಕಲಗೂಡಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಪ್ರಧಾನಿ ವಿರುದ್ಧ ವಾಗ್ದಾಳಿ । ಕಾಂಗ್ರೆಸ್ ಸಾರ್ವಜನಿಕ ಸಭೆ । ಸೋಲುವ ಭಯದಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ

ಕನ್ನಡಪ್ರಭ ವಾರ್ತೆ ಅರಕಲಗೂಡು

ಯುವಕರು ಕೆಲಸ ನೀಡುವಂತೆ ಕೇಳಿದರೆ ಪಕೋಡ ಮಾರಿ ಎನ್ನುವ ಮೂಲಕ ಬೇಜವಾಬ್ದಾರಿ ಉತ್ತರ ನೀಡುವ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಅರ್ಹರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಯುವಕರು ಕೆಲಸ ನೀಡುವಂತೆ ಕೇಳಿದರೆ ಪಕೋಡ ಮಾರಿ ಎನ್ನುವ ಮೂಲಕ ಬೇಜವಾಬ್ದಾರಿ ಉತ್ತರ ನೀಡುವ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಅರ್ಹರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅರಕಲಗೂಡಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ‘ಈ‌ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೊಂದಾಣಿಕೆ ಮಾಡಿಕೊಂಡು ನಾವು 28ಕ್ಕೆ 28 ಗೆಲ್ತೀವಿ ಅಂತಾರೆ. 28 ಸ್ಥಾನವನ್ನು ಬಿಜೆಪಿ ಸ್ವತಂತ್ರವಾಗಿ ಗೆಲ್ಲುವುದಾದರೆ ಜೆಡಿಎಸ್ ಜತೆ ಏಕೆ ಹೊಂದಾಣಿಕೆ ಮಾಡಿಕೊಂಡ್ರಿ?, ಸೋಲುವ ಭಯದಿಂದ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಕುಟುಕಿದರು.

‘ದೇವೇಗೌಡರು ಯಾವತ್ತೂ ಕೂಡ ಬಿಜೆಪಿ ಜೊತೆ ಹೋಗಲ್ಲ ಅದುಕೊಂಡಿದ್ದೆ. ಜೆಡಿಎಸ್ ಹುಟ್ಟಿದಾಗಿನಿಂದ‌ ಮೊನ್ನೆಯವರೆಗೂ ಬಿಜೆಪಿಯನ್ನು ವಾಚಾಮಗೋಚರವಾಗಿ ಬೈಯುತ್ತಿದ್ದರು. ಬಿಜೆಪಿ ಕೋಮುವಾದಿ ಪಕ್ಷ, ದೇಶವನ್ನು ಒಡೆಯುವ ಪಕ್ಷ ಎಂದು ದೇವೇಗೌಡರು ಪದೇ ಪದೇ ಹೇಳುತ್ತಿದ್ದರು. ಜೆಡಿಎಸ್‌ನಲ್ಲಿರುವ ಸೆಕ್ಯೂಲರ್ ಪದ ತೆಗೆದು ಹಾಕಿಬಿಡಿ ದೇವೇಗೌಡರೇ ಎಂದು ಹೇಳಿದ್ದೆ. ಇಂದು ನೀವು ಕೂಡ ಕೋಮುವಾದಿಗಳಾಗಿದ್ದೀರಿ. ಇಂದು ನರೇಂದ್ರ ಮೋದಿ ಅವರು ನಮ್ಮನ್ನು ಬಹಳ ಪ್ರೀತಿಸುತ್ತಾರೆ, ನಮಗೂ ಅವರಿಗೂ ಅವಿನಾಭಾವ ಸಂಬಂಧ ಇದೆ ಅಂತಾರೆ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಅವರಿಗೆ ಗರ್ವ ಬಂದಿದೆ. ನನ್ನ ಶಪಥ ಗರ್ವ ಭಂಗ ಮಾಡೋದು ಎಂದು ದೇವೇಗೌಡರು ಹೇಳಿದ್ದಾರೆ. ನನಗೆ ಅಧಿಕಾರ ಇರಲಿ, ಇಲ್ಲದೇ ಇರಲಿ ಗರ್ವ ಇಲ್ಲವೇ ಇಲ್ಲ. ದೇವೇಗೌಡರು ಏನೇ ನನ್ನ ಬಗ್ಗೆ ಟೀಕೆ ಮಾಡಿದ್ರೂ ಜನರ ಆಶೀರ್ವಾದ ಇರುವವರೆಗೆ ಯಾರೂ ಏನು ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಈ ಚುನಾವಣೆಯಲ್ಲಿ ಶ್ರೀಧರ್‌ಗೌಡ, ಕೃಷ್ಣೇಗೌಡ ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಕೇಳ್ತಾ ಇರುವುದು ಬಹಳ ಸ್ವಾಗತಾರ್ಹ. ಈ ಬಾರಿ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ತಾಲೂಕಲ್ಲಿ 30 ಸಾವಿರ ಲೀಡ್ ನೀಡಬೇಕು’ ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಜೆಡಿಎಸ್ ಪಾರ್ಟ್‌ನರ್‌ಗಳಿಗೆ ಒಂದು ಪ್ರಶ್ನೆ ಕೇಳ್ತೀನಿ. ಮತ ಕೇಳಲು ನಿಮಗೆ ಯಾವ ಅಧಿಕಾರ ಇದೆ. ಯಾವ ಅಭಿವೃದ್ಧಿ ಕೆಲಸ‌ ಮಾಡಿದ್ದೀರಿ. ಜನರು ಏಕೆ ನಿಮಗೆ ಮತ ನೀಡಬೇಕು. ಕಳೆದ ಚುನಾವಣೆಯಲ್ಲಿ ನಮಗೆ ಸಮಯ ಸಿಗಲಿಲ್ಲ. ಇಲ್ಲ ಅಂದಿದ್ದರೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಒಂದು ಸೀಟ್ ಗೆಲ್ಲುತ್ತಿರಲಿಲ್ಲ’ ಎಂದು ಟೀಕಿಸಿದರು.

‘ಬಿಜೆಪಿಯವರು ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ. ಯಾವತ್ತಾದರೂ ದೇವೇಗೌಡರು, ಪ್ರಜ್ವಲ್‌ ರೇವಣ್ಣ ಪಾರ್ಲಿಮೆಂಟ್‌ನಲ್ಲಿ ನಿಮ್ಮ ಸಮಸ್ಯೆ ಬಗ್ಗೆ ಮಾತನಾಡಿದ್ರಾ. ಮಹದಾಯಿ, ಎತ್ತಿನಹೊಳೆಗೆ ಹಣ ಕೇಳಿದ್ರಾ. ನಾವು ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್ ಪಕ್ಷ ಬದುಕನ್ನು ಕಟ್ಟಿಕೊಳ್ಳಲು ಐದು ಗ್ಯಾರೆಂಟಿ ಕೊಟ್ಟಿದ್ದೇವೆ’ ಎಂದು ಹೇಳಿದರು.

‘ಮೋದಿ ಗ್ಯಾರಂಟಿ, ಬಿಜೆಪಿ ಗ್ಯಾರಂಟಿ ಎಲ್ಲಾ ಚೊಂಬು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬಡವರ ಪರ ಯೋಜನೆಗಳನ್ನು ಕೊಟ್ಟಿದ್ದೇವೆ. ನಮ್ಮ ಹುಡುಗ ಒಳ್ಳೆಯ ಹುಡುಗ, ದಾರಿ ತಪ್ಪಿಲ್ಲ. ಕುಮಾರಣ್ಣ ಮಹಿಳೆಯರ ಬಗ್ಗೆ ಏನು ಹೇಳಿದ್ದಾರೆ. ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರಾ, ಯಾವ ರೀತಿ ದಾರಿ ತಪ್ಪಿದ್ದಾರೆ ಹೇಳಲಿ. ಲಕ್ಷ್ಮೀ ನಿಮ್ಮ ಮನೆಗೆ ಬರುತ್ತಿದ್ದಾಳೆ, ಅವಕಾಶ ಕಳೆದುಕೊಳ್ಳಲು ಹೋಗಬೇಡಿ’ ಎಂದು ಹೇಳಿದರು.

ಉಸ್ತುವಾರಿ ಸಚಿವ ರಾಜಣ್ಣ, ಚಂದ್ರಶೇಖರ್, ಶಾಸಕ ಶಿವಲಿಂಗೇಗೌಡ, ಆನಂದ್, ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಶ್ರೀಧರ್ ಗೌಡ, ಕೃಷ್ಣೇಗೌಡ, ದಿನೇಶ್ ಬೈರೇಗೌಡ, ಅಭ್ಯರ್ಥಿ ತಾಯಿ ಅನುಪಮ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಇದ್ದರು.

ಅರಕಲಗೂಡು ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಉದ್ಘಾಟಿಸಿದರು.