ಸಾರಾಂಶ
ನಟ ದರ್ಶನ್ ಕೇಸ್ನಲ್ಲಿ ನನ್ನ ಪಾತ್ರ ಏನೂ ಇಲ್ಲ. ಯಾರೂ ನನ್ನ ಹೆಸರು ಹೇಳಿಲ್ಲವಾದರೂ, ಇನ್ಡೈರೆಕ್ಟ್ ಆಗಿ ನಾನೇ ಸಪೋರ್ಟ್ ಮಾಡಿದ್ದೆ ಎನ್ನುವ ಹಾಗೆ ಮಾಧ್ಯಮಗಳಲ್ಲಿ ಸುದ್ದಿ ಬಂತು. ನಾನು ಹಾಗೂ ದರ್ಶನ್ ಇಬ್ಬರೂ ಸ್ನೇಹಿತರು, ಇಲ್ಲ ಅಂತ ಅಲ್ಲ. ಆದರೆ ಈ ರೀತಿ ಮಾಡಿದಾಗ ಯಾರು ಸಪೋರ್ಟ್ ಮಾಡ್ತಾರೆ?
ವಿಜಯಪುರ : ನಟ ದರ್ಶನ್ ಕೇಸ್ನಲ್ಲಿ ನನ್ನ ಪಾತ್ರ ಏನೂ ಇಲ್ಲ. ಯಾರೂ ನನ್ನ ಹೆಸರು ಹೇಳಿಲ್ಲವಾದರೂ, ಇನ್‌ಡೈರೆಕ್ಟ್ (ಪರೋಕ್ಷವಾಗಿ) ಆಗಿ ನಾನೇ ಸಪೋರ್ಟ್ ಮಾಡಿದ್ದೆ ಎನ್ನುವ ಹಾಗೆ ಮಾಧ್ಯಮಗಳಲ್ಲಿ ಸುದ್ದಿ ಬಂತು. ನಾನು ಹಾಗೂ ದರ್ಶನ್ ಇಬ್ಬರೂ ಸ್ನೇಹಿತರು, ಇಲ್ಲ ಅಂತ ಅಲ್ಲ. ಆದರೆ ಈ ರೀತಿ ಮಾಡಿದಾಗ ಯಾರು ಸಪೋರ್ಟ್ ಮಾಡ್ತಾರೆ? ಅವರ ಜೊತೆ ಯಾರ್ ನಿಲ್ಲುತ್ತಾರೆ ಹೇಳಿ ಎಂದು ಸಚಿವ ಜಮೀರ್ ಪ್ರಶ್ನಿಸಿದರು.
ನಗರದ ಹೊರಭಾಗದಲ್ಲಿರುವ ಮದರಸಾದಲ್ಲಿ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಹಾಸ್ಮಿ ಅವರ ಆಶೀರ್ವಾದ ಪಡೆಯಲು ಶನಿವಾರ ಆಗಮಿಸಿದ್ದ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ತಪ್ಪು ತಪ್ಪೇ. ಯಾರು ಮಾಡಿದರೂ ತಪ್ಪೇ. ದರ್ಶನ್ ಇರಲಿ. ಯಾರೇ ಇರಲಿ ಇದು ತಪ್ಪು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ನ್ಯಾಯಾಲಯ ತೀರ್ಮಾನ ಮಾಡುತ್ತೆ ಎಂದಷ್ಟೇ ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ಬಳಿಕ ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡಲು ಇಚ್ಚಿಸದ ಅವರು, ಆ ಪ್ರಕರಣವೇ ನನಗೆ ಗೊತ್ತಿಲ್ಲ ಎಂದು ಸೂರಜ್ ಪ್ರಕರಣ ಬಗ್ಗೆ ಮಾತನಾಡಲು ಹಿಂದೇಟು ಹಾಕಿದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದು ಬಿಜೆಪಿ ಆರೋಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಕೊಟ್ಟಿದ್ದು ರಾಜಕೀಯ ಲಾಭಕ್ಕಾಗಿ ಅಲ್ಲ. ಬಡವರ ಸಹಾಯಕ್ಕಾಗಿ. ಗ್ಯಾರಂಟಿ ನಿಲ್ಲೋದಿಲ್ಲ. ಗ್ಯಾರಂಟಿಯಿಂದ ಅಭಿವೃದ್ಧಿಗೆ ಹಿನ್ನಡೆ ಆಗಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಹಿರಿಯ ಕಾಂಗ್ರೆಸ್ ಶಾಸಕರಿಂದಲೇ ಅಸಮಾಧಾನ ವಿಚಾರದ ಕುರಿತು ಸಮರ್ಥನೆ ಮಾಡಿದ ಅವರು, ಜನರು ನಮ್ಮ ಸರ್ಕಾರದಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಗ್ಯಾರಂಟಿಗಳಿಂದ ಅನುದಾನ ನೀಡಲು ಕೊಂಚ ಸಮಸ್ಯೆಯಾಗುತ್ತಿದೆ. ₹55 ಸಾವಿರ ಕೋಟಿ ಗ್ಯಾರಂಟಿಗೆ ಹೋಗುತ್ತದೆ. ಗ್ಯಾರಂಟಿ ಕೊಟ್ಟು ಅನುದಾನ ಕೊಡುತ್ತಿಲ್ಲ ಅಂತಾ ಇಲ್ಲ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಹಣವು ಕೊಡುತ್ತಿದ್ದೇವೆ ಎನ್ನುವ ಮೂಲಕ ಗ್ಯಾರಂಟಿಯಿಂದ ಅಭಿವೃದ್ಧಿಗೆ ಸ್ವಲ್ಪ ಕುಂಠಿತ ಆಗುತ್ತಿದೆ ಎಂಬುವುದನ್ನು ಅವರೇ ಒಪ್ಪಿಕೊಂಡರು.
ಧರ್ಮಗುರು ಆಶೀರ್ವಾದ ಪಡೆದ ಸಚಿವ ಜಮೀರ
ನಗರದ ಹೊರಭಾಗದಲ್ಲಿರುವ ಮದರಸಾದಲ್ಲಿ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಹಾಸ್ಮಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ವಿಜಯಪುರ ಮಾರ್ಗವಾಗಿ ಕಲಬುರಗಿಗೆ ತೆರಳುವ ಮಾರ್ಗದಲ್ಲಿ ಮದರಸಾ ಭೇಟಿ ನೀಡಿದ ವೇಳೆ, ಜಮೀರ್ ಅವರನ್ನು ಧರ್ಮಗುರು ತನ್ವೀರ್ ಪೀರಾ ಹಾಸ್ಮಿ ಹಾಗೂ ಮುಸ್ಲಿಂ ಮುಖಂಡರು ಸ್ವಾಗತಿಸಿದರು. ಈ ವೇಳೆ ಕ್ರೀಡೆಯಲ್ಲಿ ಸಾಧನೆ ವಿದ್ಯಾರ್ಥಿನಿಗೆ ₹10 ಸಾವಿರ ಧನ ಸಹಾಯ ಮಾಡಿದರು.